news18-kannada Updated:January 26, 2021, 4:05 PM IST
ಬಿ.ಸಿ. ಪಾಟೀಲ್.
ಬೆಂಗಳೂರು (ಜನವರಿ 26); ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಇಂದು ಅಕ್ಷರಶಃ ರಾಷ್ಟ್ರ ರಾಜಧಾನಿಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಇಡೀ ದೆಹಲಿ ಇಂದು ರಣರಂಗದಂತೆ ಭಾಸವಾಗಿದ್ದು, ರೈತ ಹೋರಾಟಗಾರರ ಒಂದು ತಂಡ ಕೆಂಪು ಕೋಟೆಯನ್ನೇ ವಶಕ್ಕೆ ಪಡೆದಿದೆ. ಅಲ್ಲದೆ, ಕೆಂಪು ಕೋಟೆಯ ಮೇಲೆ ರೈತರ ಧ್ವಜವನ್ನೂ ಹಾರಿಸಲಾಗಿದೆ. ಈ ವೇಳೆ ಪೊಲೀಸ್ ನಡೆಸಿದ ಲಾಠಿ ಚಾರ್ಚ್ ಮತ್ತು ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, 20ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಪ್ರಸ್ತುತ ಈ ಸುದ್ದಿ ವಿಶ್ವದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್, "ಇದು ರೈತರ ಪ್ರತಿಭಟನೆಯಲ್ಲ ಬದಲಿಗೆ ಭಯೋತ್ಪಾದಕರ ಕೃತ್ಯ. ಇದರ ಹಿಂದೆ ಕಲಿಸ್ತಾನಿಗಳು ಮತ್ತು ಕಾಂಗ್ರೆಸ್ ಕೈವಾಡವಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಚಿವ ಬಿ.ಸಿ. ಪಾಟೀಲ್ ಯಾವಾಗಲೂ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕುವುದು ಇತ್ತೀಚೆಗೆ ಸಾಮಾನ್ಯವಾದಂತಾಗಿದೆ. ಈ ಹಿಂದೆಯೂ ಸಹ "ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು" ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಸಚಿವ ಬಿಸಿ ಪಾಟೀಲ್ ಇದೀಗ "ದೆಹಲಿ ರೈತ ಹೋರಾಟವನ್ನು ಭಯೋತ್ಪಾದಕ ಕೃತ್ಯ" ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: Farmers Protest: ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಕೊನೆಗೂ ಪೊಲೀಸ್ ಅನುಮತಿ; ಬೆಂಗಳೂರು ಪ್ರವೇಶಿಸುತ್ತಿರುವ ಹೋರಾಟಗಾರರು
ಈ ಕುರಿತು ಕೊಪ್ಪಳದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಬಿ.ಸಿ. ಪಾಟೀಲ್, "ಇದು ರೈತರ ಪ್ರತಿಭಟನೆಯಲ್ಲ, ಭಯೋತ್ಪಾದಕರ ಕೃತ್ಯ. ಕಲಿಸ್ತಾನ ಮತ್ತು ಕಾಂಗ್ರೆಸ್ನವರು ಇದರ ಹಿಂದೆ ಇದ್ದಾರೆ. ಮೋದಿ ಬೆಳವಣಿಗೆ ಸಹಿಸದವರು ಹತಾಶರಾದವರು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ರೈತ ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ಭಾವುಟ ಹಾರಿಸಲಿ ನಾನು ಅದನ್ನು ಸ್ವಾಗತಿಸುತ್ತೇನೆ.
ಆದರೆ, ಕಾಂಗ್ರೆಸ್ನವರು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಾರೆ. ಎಚ್.ಕೆ. ಪಾಟೀಲರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನದ ಜೊತೆ ಕೈ ಜೋಡಿಸಿ ಭಯೋತ್ಪಾದನೆ ಹುಟ್ಟು ಹಾಕುತ್ತಿದೆ. ನಿಜವಾದ ರೈತರು ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಮೂಲಕ ಕಾಂಗ್ರೆಸ್ ಮತ್ತು ಕಲಿಸ್ತಾನಿಗಳು ಮುಂದೆ ನಿಂತು ಈ ಹೋರಾಟವನ್ನು ನಡೆಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
Published by:
MAshok Kumar
First published:
January 26, 2021, 4:05 PM IST