ಬಾಗಲಕೋಟೆಯಲ್ಲಿ ಕೆಲವಡಿ ರಂಗನಾಥ ದೇವರಿಗೆ ಮದ್ಯವೇ ನೈವೇದ್ಯ..!; ರಥೋತ್ಸವಕ್ಕೆ ಬ್ರೇಕ್ ಹಾಕಿದ ಪೊಲೀಸರು

ಕೆಲವರು ಹರಕೆ ತೀರಿಸುವುದಕ್ಕೆ ಎಂದು  ಮದ್ಯ ನೈವೇದ್ಯ ಅರ್ಪಿಸಿದರೆ, ಇನ್ನೂ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ.

ಕೆಲವಡಿ ರಂಗನಾಥ ಸ್ವಾಮಿ

ಕೆಲವಡಿ ರಂಗನಾಥ ಸ್ವಾಮಿ

  • Share this:
ಬಾಗಲಕೋಟೆ (ಏ.04): ಜಾತ್ರೆಯಂದು ದೇವರಿಗೆ ಬಗೆ ಬಗೆಯ ಖಾದ್ಯಗಳ ನೈವೇದ್ಯ ಅರ್ಪಿಸುವುದು ಸಾಮಾನ್ಯ. ಆದರೆ  ಬಾಗಲಕೋಟೆ  ಜಿಲ್ಲೆ ಗುಳೇದಗುಡ್ಡ  ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವರಿಗೆ ವೆರೈಟಿ ಮದ್ಯವನ್ನು  ಭಕ್ತರು ನೈವೇದ್ಯಯಾಗಿ ಅರ್ಪಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಬಳಿಕ 9ನೇ ದಿನಕ್ಕೆ ಕೆಲವಡಿ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ.

ಅಂದಾಜು 600 ವರ್ಷಗಳ ಇತಿಹಾಸವಿರುವ ಈ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮದ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇನ್ನು ಸದ್ಯ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನಿನ್ನೆಯಿಂದ ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಆದರೂ ಕೇರ್ ಮಾಡದೇ ಜನರು ಸಾವಿರಾರು ಸಂಖ್ಯೆಯಲ್ಲಿ ಲಕ್ಷ್ಮಿ ರಂಗನಾಥ ದೇಗುಲಕ್ಕೆ ಬಂದು ದರ್ಶನ ಪಡೆದು ಹರಕೆ ತೀರಿಸಿದರು. ಕೋವಿಡ್ ನಿಯಮವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಭಕ್ತಿಯನ್ನು ಪ್ರದರ್ಶಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಕ್ಷ್ಮಿರಂಗನಾಥ ದೇವರಿಗೆ ಮದ್ಯದ ನೈವೇದ್ಯ ಅರ್ಪಿಸಿ ಪುನೀತರಾದರು.

ಇನ್ನೂ ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸುವುದು ಅಂತ ಜನರು ಹೇಳಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಎನ್ನುತ್ತಾರೆ. ಹೀಗೆ ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸುವುದಕ್ಕೆ ಎಂದು  ಮದ್ಯ ನೈವೇದ್ಯ ಅರ್ಪಿಸಿದರೆ, ಇನ್ನೂ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳೇ ರಾರಾಜಿಸುತ್ತವೆ.

ಕೊರೋನಾ ಎರಡನೇ ಅಲೆ: ಮಾರ್ಗಸೂಚಿ ಬಗ್ಗೆ ಏನಂತಾರೆ ಜನರು ಮತ್ತು ಉದ್ಯಮಿಗಳು..?

ಶತ ಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ‌. ಇದಕ್ಕೆ ಕಾರಣ  ಹಿಂದೆ ಈ ಭಾಗದಲ್ಲಿ ಬರ ಬಿದ್ದು ಜನರಿಗೆ ಕುಡಿಯುವುದಕ್ಕೂ ಈ ಭಾಗದಲ್ಲಿ ನೀರಿಲ್ಲದೆ ಪರಿತಪಿಸುವಂತಾಗಿತ್ತಂತೆ. ಆಗ ಲಕ್ಷ್ಮಿರಂಗನಾಥ ದೇವರು ಮನುಜನ ರೂಪ ತಾಳಿ ಈ ಭಾಗಕ್ಕೆ ಬಂದು  ಹಣ್ಣಿನ ರಸವನ್ನು ನೀರು ಮಾಡಿ ಬಾಯಾರಿಕೆ ನೀಗಿಸಲು ಜನರಿಗೆ ಹಣ್ಣಿನ‌ ರಸ ನೀಡಿದರಂತೆ. ನಂತರ ಇದನ್ನು ತಿಳಿದ ಜನರು ದೇವರು ನಮಗೆ ಕೊಟ್ಟಿದ್ದು ಹಣ್ಣಿನ ರಸ, ಅಂದರೆ ಅದು ಸೋಮರಸ. ಹಣ್ಣಿನ ರಸಕ್ಕೆ ಪ್ರತಿಯಾಗಿ ಲಕ್ಷ್ಮಿರಂಗನಾಥ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸುವದಕ್ಕೆ ಶುರು ಮಾಡಿದರಂತೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಸಾರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಇದರಿಂದ ಇಂದಿಗೂ ಸಾರಾಯಿ ನೈವೇದ್ಯ ಪದ್ಧತಿ ಮುಂದುವರೆಯುತ್ತಲೇ ಸಾಗುತ್ತಿದೆ. ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ‌ ಮೇಲೆ ನಿಂತಿದ್ದು, ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ  ಪದ್ದತಿ ಎಂಬುದು ಮಾತ್ರ ನಿಜ..

ಸಾವಿರಾರು ಭಕ್ತರ ಜಮಾವಣೆ: ರಥಕ್ಕೆ ಪೋಲಿಸ್ ವಾಹನ ಅಡ್ಡ ನಿಲ್ಲಿಸಿ ರಥೋತ್ಸವಕ್ಕೆ ಬ್ರೇಕ್

ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿದ್ದರೂ  ಕೆಲವಡಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆಗೆ ಗುಳೇದಗುಡ್ಡ ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಾಯಂಕಾಲ ರಥೋತ್ಸವ ಸಮಯಕ್ಕೆ ಸಾವಿರಾರು ಜನ ಜಮಾಯಿಸಿದ್ದರು. ಅಂಗಡಿ ಮುಗ್ಗಟ್ಟುಗಳನ್ನು ಹಾಕಲಾಗಿತ್ತು. ಇನ್ನೇನು ರಥೋತ್ಸವ ಎಳೆಯುವುದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾರಣರಾಗಿದ್ದರು. ರಥೋತ್ಸವ ಕೆಲ ಅಡಿ ಎಳೆದಾಗ ಪೊಲೀಸರು ಪೊಲೀಸ್ ವಾಹನ (ಡಿಆರ್ ) ಅಡ್ಡ ನಿಲ್ಲಿಸಿ ರಥೋತ್ಸವ ಎಳೆಯುವುದನ್ನು ಪೊಲೀಸರು ನಿರ್ಬಂಧಿಸಿದರು.

ಇನ್ನು ಪೊಲೀಸರು ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ವಾಪಸ್ ಮನೆಗೆ ತೆರಳುವಂತೆ, ಹಾಗೂ ಅಂಗಡಿ ತೆರವುಗೊಳಿಸುವಂತೆ ಸೂಚಿಸಿದರು. ಸಾವಿರಾರು ಭಕ್ತರು ಜಮಾಯಿಸಲು ಅನುವು ಮಾಡಿಕೊಟ್ಟು ಕೊನೆಗೆ ರಥೋತ್ಸವ ಎಳೆಯುವುದನ್ನು ನಿರ್ಬಂಧಿಸಿದ್ದು ಕೊರೋನಾ ಹೇಗೆ ತಡೆದಂತೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
Published by:Latha CG
First published: