HOME » NEWS » State » THIS ELEPHANT IS FAVOR TO DAKSHINA KANNADA PEOPLE AND EVERY YEAR HELD SAVARI LG

ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ

ಈ ಬಾರಿ ಜನವರಿ ಕೊನೆಯ ವಾರದಲ್ಲಿ ಈ ಆನೆ ತನ್ನ ಸವಾರಿಯನ್ನು ಆರಂಭಿಸಿದ್ದು, ದಾರಿ ಮಧ್ಯೆ ಕೆಲವು ಮನೆಗಳ ಮುಂದೆಯೂ ಈ ಆನೆ ಹಾದುಹೋಗುತ್ತದೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪೆರಾಜೆ ನಿವಾಸಿ ಸುಧಾಕರ್ ರೈ ಮನೆಯ ಮುಂದೆ ಕಳೆದ ಹತ್ತು ವರ್ಷಗಳಿಂದ ಈ ಆನೆ ಹಾದುಹೋಗುತ್ತಿದ್ದು, ಈವರೆಗೂ ಜನರಿಗೆ ಯಾವ ತೊಂದರೆಯನ್ನೂ ಮಾಡಿಲ್ಲ.

news18-kannada
Updated:January 28, 2021, 2:57 PM IST
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ
ಕಾಡಾನೆ
  • Share this:
ದಕ್ಷಿಣ ಕನ್ನಡ(ಜ.28): ಆನೆಗಳಿಗೂ, ಮನುಷ್ಯನಿಗೂ ನಡುವೆ ಇರುವ ಸಂಬಂಧ ಅಷ್ಟಕಷ್ಟೇ. ಎಷ್ಟೇ ಸಾಕಿ ಬೆಳೆಸಿದ ಆನೆಯೂ ಕೆಲವು ಸಂದರ್ಭಗಳಲ್ಲಿ ತನ್ನನ್ನು ಸಾಕಿದ ಮಾಹುತನನ್ನೇ ಬಲಿ ಪಡೆದ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಸಾಕಾನೆಗಳೇ ಇಷ್ಟು ಅಪಾಯಕಾರಿಯಾಗಿರುವಾಗ ಇನ್ನು ಕಾಡಿನಲ್ಲೇ ಹುಟ್ಟಿ, ಕಾಡಿನ ಬದುಕಿಗೇ ಒಗ್ಗಿಕೊಂಡ ಕಾಡಾನೆಗಳ ಸ್ವಭಾವವನ್ನು ಅಳೆಯೋದು ಕಷ್ಟಸಾಧ್ಯ. ಈ ಕಾಡಾನೆಗಳ ಸ್ವಭಾವವನ್ನು ಕಣ್ಣಾರೆ ಕಂಡ ಕಾಡಿನಂಚಿನಲ್ಲಿ ಬದುಕುವ ಕುಟುಂಬಗಳು ಸಾಧ್ಯವಾದಷ್ಟೂ ಕಾಡಾನೆಗಳ ಸಹವಾಸದಿಂದ ದೂರವೇ ಉಳಿಯುತ್ತಾರೆ.

ಕಾಡಾನೆಗಳ ಹಿಂಡು ಒಂದು ಬಾರಿ ಗ್ರಾಮದ ಕಡೆಗೆ ದಾಳಿಯಿಟ್ಟಿತೆಂದರೆ ಸಾಕು ಹತ್ತಾರು ತೋಟಗಳು ಈ ಕಾಡಾನೆಗಳ ದಾಳಿಗೆ ಸಿಲುಕಿ ನಾಶವಾಗೋದು ಗ್ಯಾರೆಂಟಿಯೇ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಕಾಡಿನಿಂದ ಕೊಡಗಿನ ಭಾಗಮಂಡಲ ಕಾಡಿಗೆ ಪ್ರತೀ ವರ್ಷವೂ ಸವಾರಿ ಹೋಗುವ ಆನೆಯೊಂದು ಇತರ ಕಾಡಾನೆಗಳಿಗಿಂತ ಕೊಂಚ ಭಿನ್ನ. ಪ್ರತೀ ಡಿಸೆಂಬರ್ ಕೊನೆ ವಾರದಲ್ಲಿ ಪಂಜ ಕಾಡಿನಿಂದ ಸವಾರಿ ಹೊರಡುವ ಈ ಕಾಡಾನೆ, ಕಾಡು-ನಾಡು, ನದಿ-ತೊರೆಗಳನ್ನು ದಾಟಿ ಕೊಡಗಿನ ಭಾಗಮಂಡಲ ಅರಣ್ಯವನ್ನು ಸೇರುತ್ತದೆ.

ರಾಯಚೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಪ್ರೇಮಿಗಳು; ಅನೈತಿಕ ಸಂಬಂಧದ ಶಂಕೆ

ಆದರೆ ಈ ಬಾರಿ ಜನವರಿ ಕೊನೆಯ ವಾರದಲ್ಲಿ ಈ ಆನೆ ತನ್ನ ಸವಾರಿಯನ್ನು ಆರಂಭಿಸಿದ್ದು, ದಾರಿ ಮಧ್ಯೆ ಕೆಲವು ಮನೆಗಳ ಮುಂದೆಯೂ ಈ ಆನೆ ಹಾದುಹೋಗುತ್ತದೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪೆರಾಜೆ ನಿವಾಸಿ ಸುಧಾಕರ್ ರೈ ಮನೆಯ ಮುಂದೆ ಕಳೆದ ಹತ್ತು ವರ್ಷಗಳಿಂದ ಈ ಆನೆ ಹಾದುಹೋಗುತ್ತಿದ್ದು, ಈವರೆಗೂ ಜನರಿಗೆ ಯಾವ ತೊಂದರೆಯನ್ನೂ ಮಾಡಿಲ್ಲ. ಕಾಡಿನ ದಾರಿಯಾಗಿ ಬರುವ ಈ ಆನೆ ಕಾಡಿನ ದಾರಿ ಮುಗಿದಾಗ ನಾಡಿನ ದಾರಿ ಮೂಲಕ ಮತ್ತೊಂದು ಕಾಡು ಸೇರುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಹಸಿವಿನ ಅನುಭವವಾದಾಗ ದಾರಿ ಮಧ್ಯೆ ಸಿಗುವ ಬಾಳೆ ಗಿಡ, ಹೂವಿನ ಗಿಡಗಳನ್ನು ತಿಂದು ಸಾಗುವ ಈ ಆನೆ ಇದೀಗ ಈ ಗ್ರಾಮದಾದ್ಯಂತ ಚಿರಪರಿಚಿತವಾಗಿದೆ ಎನ್ನುತ್ತಾರೆ ಪೆರಾಜೆ ನಿವಾಸಿಯಾಗಿರುವ ಸುಧಾಕರ್ ರೈ.

ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನಗಳನ್ನು ಗಮನಿಸಬೇಕಾಗಿದ್ದು, ಈ ಆನೆಯ ವಿಚಾರದಲ್ಲಿ ಮಾತ್ರ ಸಂಬಂಧಪಟ್ಟ ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಪಂಜ ಕಾಡಿನಿಂದ ಆನೆ ಸವಾರಿ ಹೊರಟಿದೆ ಅನ್ನೋದು ತಿಳಿದ ತಕ್ಷಣವೇ ಅಲರ್ಟ್ ಆಗುವ ಆ ಗ್ರಾಮದ ಜನ ಆನೆ ಸಾಗುವ ಗ್ರಾಮದ ಜನರಿಗೆ ಆನೆ ಸವಾರಿಯ ಸುದ್ಧಿ ತಲುಪಿಸುತ್ತಾರೆ. ಸುಮಾರು 30 ರಿಂದ 35 ವರ್ಷ ಪ್ರಾಯದ ಈ ಆನೆ ಪಂಜ, ಉಬರಡ್ಕ, ದೇರಾಜೆ ಮಾರ್ಗವಾಗಿ ಪೆರಾಜೆ ಮೂಲಕ ಭಾಗಮಂಡಲ ಕಾಡನ್ನು ಸೇರುತ್ತದೆ.

ಈ ಮಧ್ಯೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನೂ ದಾಟುವ ಈ ಆನೆ ಪಯಸ್ವಿನಿ ನದಿಯನ್ನು ಈಜಾಡಿಯೇ ಭಾಗಮಂಡಲ ಅರಣ್ಯಕ್ಕೆ ಸೇರುತ್ತದೆ. ಹೀಗೆ ಹೊರಟ ಈ ಕಾಡಾನೆ ಫೆಬ್ರವರಿ ಕೊನೆಯ ವಾರಕ್ಕೆ ಮತ್ತೆ ಇದೇ ಮಾರ್ಗವಾಗಿ ಪಂಜ ಅರಣ್ಯವನ್ನು ಸೇರುತ್ತಿದ್ದು, ದಾರಿ ಮಧ್ಯೆ ಕಾಡಾನೆಗೆ ಯಾವುದೇ ರೀತಿಯ ತೊಂದರೆಯಾಗದಂತೆಯೂ ಗ್ರಾಮಸ್ಥರು ನೋಡಿಕೊಂಡಿದ್ದಾರೆ.
Published by: Latha CG
First published: January 28, 2021, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories