ಬೆಂಗಳೂರು: ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತಾಗಿದೆ ಕಾಂಗ್ರೆಸ್ ಸ್ಥಿತಿ. ಇಲ್ಲದ ಸಿಎಂ ಸ್ಥಾನದ ಕಿತ್ತಾಟ ಇನ್ನೊಂದು ಮಜಲಿಗೆ ತೆರೆದುಕೊಂಡಿದೆ. ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಮಾತ್ರವಲ್ಲ ಇದೀಗ ಕಾಂಗ್ರೆಸ್ ನಲ್ಲಿ ಧರ್ಡ್ ಫ್ರಂಟ್ ಶುರುವಾಗಿದೆ. ಈ ಮೂಲಕ ಸಿಎಂ ಗಾದಿಗೆ ದಲಿತ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಇದೀಗ ಮನೆಯೊಂದು ಮೂರು ಬಾಗಿಲಾದಂತಾಗಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಹೇಳಿಕೆ ಬೀಳುತ್ತಲೇ ಡಿಕೆಶಿ ಬಣ ಕೆರಳಿತ್ತು. ಹೈಕಮಾಂಡ್ ಹೇಳಿಕೆ ನಂತರ ಮುಂದಿನ ಸಿಎಂ ಹೇಳಿಕೆಗೆ ಬ್ರೇಕ್ ಬಿದ್ದಿತ್ತು. ಮಾತ್ರವಲ್ಲ ಖುದ್ದು ಸಿದ್ದರಾಮಯ್ಯ ಅವರೇ ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟು ಈ ವಿಚಾರಕ್ಕೆ ತೆರೆ ಎಳೆದಿದ್ರು. ವಿವಾದ ತಣ್ಣಗಾಯ್ತು ಎನ್ನುವಷ್ಟರಲ್ಲೇ ಮೂರನೇ ಸಿಎಂ ಆಕಾಂಕ್ಷಿಗಳು ಸಭೆ ನಡೆಸಿಯೇ ಬಿಟ್ಟರು. ಅದುವೇ ಜಿ.ಪರಮೇಶ್ವರ್ ಅವರ ಥರ್ಡ್ ಫ್ರಂಟ್. ನಿನ್ನೆ ರಾತ್ರಿ ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ ಹಾಗೂ ಬಿ.ಕೆ.ಹರಿಪ್ರಸಾದ್ ಸಭೆ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ. ಜೊತೆಗೆ ದಲಿತ ಸಿಎಂ ಅಸ್ತ್ರ ಮತ್ತೆ ಮುನ್ನೆಲೆಗೆ ಬರುವಂತಾಗಿದೆ. ಈ ಬಾರಿಯಾದರೂ ದಲಿತರಿಗೆ ಸಿಎಂ ಸ್ಥಾನ ನೀಡಿ ಎಂದು ಗಟ್ಟಿಯಾಗಿ ಧ್ವನಿ ಮೊಳಗಿಸಲು ಥರ್ಡ್ ಫ್ರಂಟ್ ಸಿದ್ಧತೆ ಆರಂಭಿಸುತ್ತಿದೆ. ಸಂಜೆ ಕೂಡ ದಿನೇಶ್ ಗುಂಡೂರಾವ್ ಅವರು ಪರಮೇಶ್ವರ್ ಮನೆಗೆ ಭೇಟಿ ನೀಡಿ ಇದೇ ವಿಷಯವಾಗಿ ಮಾತುಕತೆ ನಡೆಸಿದರು.
ದಲಿತ ಸಿಎಂ ಕೂಗು ಮೊಳಗುತ್ತಲೇ ಕಾಂಗ್ರೆಸ್ ನಲ್ಲಿ ಲಿಂಗಾಯತ ಸಿಎಂ ಕೂಗು ಎದ್ದಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ನಾನು ಸಿಎಂ ಆಸ್ಪಿರೆಂಟ್ ಅಂತ ಬಹಿರಂಗ ಹೇಳಿಕೆ ನೀಡಿದ್ದಾರೆ.
ಸದ್ಯ ವಿಪಕ್ಷ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಮುಂದಿನ ಸಿಎಂ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ಇದೇ ಕಾರಣಕ್ಕೆ ಮೂಲ ವಲಸಿಗ ಮಧ್ಯೆ ಫೈಟ್ ಶುರುವಾಗ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಸಭೆ ನಡೆಸಿದರು. ವರ್ಚುವಲ್‌ನಲ್ಲೇ ಸಮಿತಿಯ ಸದಸ್ಯರ ಜೊತೆ ಚರ್ಚಿಸಿದ್ರು. ನಂತರ ಸ್ವಯಂ ಪ್ರೇರಿತ ದೂರಿನ ಅನ್ವಯ ಯಾರ್ಯಾರು ಯಾವ ಹೇಳಿಕೆ ನೀಡಿದ್ದಾರೆ ಎಂಬುದರ ಕುರಿತು ಸಾಕ್ಷಿ ಕಲೆ ಹಾಕಲು ತೀರ್ಮಾನ ಮಾಡಲಾಯ್ತು. ಮುಂದಿನ ಸಭೆಯ ಒಳಗೆ ಎಲ್ಲ ಸಾಕ್ಷ್ಯ ಸಂಗ್ರಹಿಸಿ ಸೂಕ್ತ ತೀರ್ಮಾನ ಮಾಡಲಾಗುತ್ತದೆ. ಡಿಕೆಶಿ ಅಥವಾ ಸಿದ್ದರಾಮಯ್ಯ ಯಾರೇ ಆಗಲಿ ಪಕ್ಷದ ಇತಿಮಿತಿಯಲ್ಲೇ ಮಾತನಾಡಬೇಕು. ಸಿದ್ದರಾಮಯ್ಯ ಅವರು ವಲಸಿಗರಲ್ಲ ಅಂತ ರೆಹಮಾನ್ ಖಾನ್ ಹೇಳಿದರು.
ಇದನ್ನು ಓದಿ: ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ; ರಾಜ್ಯದಿಂದ ಇಬ್ಬರು ಸಂಸದರಿಗೆ ಮಂತ್ರಿ ಗಿರಿ?
ಹೈಕಮಾಂಡ್ ಸೂಚನೆ ನಂತರವೂ ಸಿಎಂ ಯಾರು ಎಂಬ ವಿಚಾರಕ್ಕೆ ಇನ್ನೂ ಫುಲ್‌ಸ್ಟಾಪ್ ಬಿದ್ದಿಲ್ಲ. ಶಿಸ್ತು ಸಮಿತಿ ತನಿಖೆ ಆರಂಭಿಸಿದರೂ ಲೆಕ್ಕಕ್ಕಿಲ್ಲ ಎನ್ನುವ ಆಗಿದೆ. ಈ ಮಧ್ಯೆ ಪರಮೇಶ್ವರ್ ಅವರ ಥರ್ಡ್ ಫ್ರಂಟ್ ಕೂಡ ಸದ್ದಿಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಬೇಡಿಕೆ ಮುಂದಿಡಲು ಹೊರಟಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಎಂ.ಬಿ.ಪಾಟೀಲ್ ಹೀಗೆ ಸಿಎಂ ಹುದ್ದೆ ಕನಸು ಕಾಣುವವರ ಪಟ್ಟಿ ದೊಡ್ಡದಾಗುವ ಲಕ್ಷಣ ಕಾಣಿಸ್ತಿದೆ. ಕಾಂಗ್ರೆಸ್ ಒಳಬೇಗುದಿ ವಿರೋಧಿಗಳಿಗೆ ಅನುಕೂಲವಾಗುವುದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ