ಕೊಡಗು: ಜೀತ ವಿಮುಕ್ತಿ ಪಡೆದರೂ ಸಂಕಷ್ಟದ ಸಂಕೋಲೆಯಲ್ಲಿ ಕಾರ್ಮಿಕರು

2011 ರಲ್ಲಿ ಅಪ್ಪು ಎಂಬುವವರ ಕುಟುಂಬವನ್ನು ಶೆಟ್ಟಿಗೇರಿಯ ಕಾಫಿ ತೋಟವೊಂದರಿಂದ ತಹಶೀಲ್ದಾರ್, ಉಪವಿಭಾಗಧಿಕಾರಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸೇರಿಯೇ  ಜೀತದಿಂದ ಮುಕ್ತಿಗೊಳಿಸಿದ್ದರು.

ಕಾರ್ಮಿಕರು

ಕಾರ್ಮಿಕರು

  • Share this:
ಕೊಡಗು(ಮಾ.07): ಜೀತದಿಂದ ಮುಕ್ತಿ ಹೊಂದಿದ್ದವರಿಗೆ ಕಷ್ಟದಿಂದ ಮಾತ್ರ ಮುಕ್ತಿ ದೊರೆಯುತ್ತಿಲ್ಲ. ಹೌದು, ಇದು ಕೊಡಗು ಜಿಲ್ಲೆಯಲ್ಲಿ ಜೀತ ಪದ್ದತಿಯಿಂದ ವಿಮುಕ್ತಿ ಹೊಂದಿ ಹೊರ ಬಂದವರ ಕಥೆ-ವ್ಯಥೆ. 2011 ರಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಜೀತ ಮಾಡುತಿದ್ದ ಆರಕ್ಕೂ ಹೆಚ್ಚು ಕುಂಟುಂಬಗಳನ್ನು ಜೀತದಿಂದ ವಿಮುಕ್ತಿಗೊಳಿಸಲಾಗಿತ್ತು. ಜೀತದಿಂದ ವಿಮುಕ್ತಿ ಕೊಡಿಸಿದ ಅಧಿಕಾರಿಗಳು ಅವರಿಗೆ ಜೀತಮುಕ್ತಿ ಪರಿಹಾರ ಕೊಡುವಲ್ಲಿ ಮಾತ್ರ ಸಂಪೂರ್ಣ ಮರೆತಿದ್ದಾರೆ. ಹೀಗಾಗಿ ಜೀತವಿಮುಕ್ತಿ ಹೊಂದಿದ್ದವರು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದ್ದಾರೆ.

2011 ರಲ್ಲಿ ಅಪ್ಪು ಎಂಬುವವರ ಕುಟುಂಬವನ್ನು ಶೆಟ್ಟಿಗೇರಿಯ ಕಾಫಿ ತೋಟವೊಂದರಿಂದ ತಹಶೀಲ್ದಾರ್, ಉಪವಿಭಾಗಧಿಕಾರಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸೇರಿಯೇ  ಜೀತದಿಂದ ಮುಕ್ತಿಗೊಳಿಸಿದ್ದರು. ಅಂದು ಈ ಕುಟುಂಬವನ್ನು ಎರಡು ದಿನಗಳ ಕಾಲ ವಿರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿಯೇ ಇರಿಸಿ ಆಶ್ರಯ ನೀಡಲಾಗಿತ್ತು. ಆ ನಂತರ ರಾಜಕೀಯ ಒತ್ತಡಗಳಿಂದ ಅಪ್ಪು ಅವರ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂಬ ಭರವಸೆಯೊಂದಿಗೆ ಹಲವು ನೆಪವೊಡ್ಡಿ ತಹಶೀಲ್ದಾರ್ ಕಚೇರಿಯಿಂದಲೂ ಹೊರಹಾಕಲಾಗಿತ್ತು. ಅಂದಿನಿಂದ ಇಂದಿನವರೆಗೆ ತಾಲ್ಲೂಕು ಅಥವಾ ಜಿಲ್ಲಾಡಳಿತ ಅತ್ತ ಸುಳಿದೇ ನೋಡಿಲ್ಲ ಎನ್ನೋದು ಅಂದು ಅವರನ್ನು ಜೀತದಿಂದ ವಿಮುಕ್ತಿಗೊಳಿಸಲು ಹೋರಾಡಿದ ಕಾರ್ಮಿಕ ಮುಖಂಡ ಪಿ. ಆರ್ ಭರತ್ ಅವರ ಆರೋಪ.

Fraud Case: ಅಕ್ರಮ‌ ಚೀಟಿ ವ್ಯವಹಾರ ನಡೆಸಿ ಒಂದೂವರೆ ಕೋಟಿ ರೂ. ಗುಳುಂ ಮಾಡಿದ ಖತರ್ನಾಕ್ ದಂಪತಿ ಅರೆಸ್ಟ್

ಆದರೆ ಇಂದಿಗೂ ಅವರಿಗೆ ಯಾವ ಪರಿಹಾರವನ್ನು ನೀಡಿಲ್ಲ. ಹೀಗಾಗಿಯೇ ಅಪ್ಪು ಅವರ ಕುಟುಂಬ ಬೇರೆ ದಾರಿ ಕಾಣದೆ ಪುನಃ ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿಯ ತೋಟದ ಲೈನ್ ಮನೆಯಲ್ಲಿ ಮತ್ತೆ ಕೂಲಿಗೆ ಸೇರಿದೆ. ವಿಪರ್ಯಾಸವೆಂದರೆ ಅಪ್ಪು ಅವರ ಪತ್ನಿ ಶೀಲಾಗೆ ಗಂಟಲು ಕ್ಯಾನ್ಸರ್ ಆಗಿದ್ದು ವಿರಾಜಪೇಟೆ ಆಸ್ಪತ್ರೆಯಲ್ಲಿ ಜೀವನ ಮರಣದ ಮಧ್ಯೆ ಕಾಲ ದೂಡುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಅಪ್ಪು ಅವರು ಒಂಟಿಯಂಗಡಿಯ ತೋಟದ ಮಾಲೀಕರ ಬಳಿ 8 ಸಾವಿರ ಸಾಲ ಮಾಡಿದ್ದಾರೆ.

ಕಳೆದ ಮೂರು ತಿಂಗಳಿಂದ ಅಪ್ಪು ತೋಟದಲ್ಲಿ ಕೆಲಸ ಮಾಡುತ್ತಿದ್ದರೂ ಅವರ 8 ಸಾವಿರ ರೂಪಾಯಿ ಸಾಲದಲ್ಲಿ ಒಂದೇ ಒಂದು ರೂಪಾಯಿ ವಜಾ ಆಗಿಲ್ಲ. ಲೈನ್ ಮನೆಯಲ್ಲಿ ಉಳಿಯಬೇಕಾದರೆ ಕನಿಷ್ಠ ಇಬ್ಬರು ಕೆಲಸ ಮಾಡಲೇಬೇಕು. ಆದರೆ ಈಗ ಅಪ್ಪು ಅವರು ಒಬ್ಬರೇ ಕೆಲಸ ಮಾಡುತ್ತಿರುವುದರಿಂದ ಲೈನ್ ಮನೆಯಿಂದಲೂ ಹೊರಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪತ್ನಿಯ ನೋವಿಗಾಗಿ ಲೈನ್ ಮನೆಯಲ್ಲೂ ಕಣ್ಣೀರಿಡುವಂತಿಲ್ಲ.

ಇವರ ಕಥೆ ಹೀಗಾದರೆ ಚೂರಿಯ ಎಂಬವರ ಕಥೆ ಇನ್ನೊಂದು ರೀತಿಯದ್ದು. ಜೀತದಿಂದ ವಿಮುಕ್ತಿಯಾದ ಬಳಿಕ ಇರೋದಕ್ಕೂ ಮನೆಯಿಲ್ಲವೆಂದು ಪತ್ನಿ ಎರಡು ಮಕ್ಕಳನ್ನು ಕರೆದುಕೊಂಡು ಕಣ್ಮರೆಯಾಗಿದ್ದಾರೆ. ಚೂರಿಯ ಅನಿವಾರ್ಯವಾಗಿ ಮತ್ತೊಬ್ಬರ ಮನೆಯಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಾ ಜೀವನ ಕಳೆಯುತ್ತಿದ್ದಾರೆ.

ಇಂತಹ ಹಲವು ಪ್ರಕರಣಗಳಿದ್ದು ಅಧಿಕಾರಿಗಳು ಮಾತ್ರ ಜಾಣಕುರುಡರಂತೆ ಇದ್ದಾರೆ. ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರೆ, ವಿಷಯ ಗಮನಕ್ಕೆ ಬಂದಿಲ್ಲ. ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಜೀತದಿಂದ ವಿಮುಕ್ತಿಗೊಂಡವರಿಗೆ ಕಷ್ಟಗಳಿಗೂ ಮುಕ್ತಿ ಸಿಗದೆ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.
Published by:Latha CG
First published: