Covid Stories: ಮನೆಯಲ್ಲಿ ಇರೋ ಮೂರು ಮತ್ತೊಬ್ಬರಿಗೇ ಅಡುಗೆ ಮಾಡುವಷ್ಟರಲ್ಲಿ ಸಾಕು ಸಾಕಾಗಿ ಹೋಗಿರುತ್ತೆ. ಅಂಥಾದ್ರಲ್ಲಿ ಇಲ್ಲೊಂದಷ್ಟು ಜನ ಒಂದು ಸ್ವಲ್ಪವೂ ಬೇಸರ ಪಟ್ಟುಕೊಳ್ಳದೇ ಪ್ರತಿದಿನ ನೂರಾರು ಜನರಿಗೆ ರುಚಿಯಾಗಿ ತಿಂಡಿ, ಅಡುಗೆ ಮಾಡಿ ಅವರ ಮನೆಗೇ ಕಳಿಸಿಕೊಡ್ತಿದ್ದಾರೆ. ಹಾಗಂತ ಇವ್ರೇನೂ ಕೇಟರಿಂಗ್ ಬ್ಯುಸಿನೆಸ್ ಮಾಡ್ತಿಲ್ಲ..ಈ ಆಹಾರವೆಲ್ಲಾ ಉಚಿತವಾಗಿಯೇ ಹಂಚಲಾಗ್ತಿದೆ. ಅಂದ್ಹಾಗೆ ಈ ಆಹಾರ ಹೋಗ್ತಿರೋದು ಮನೆಯಲ್ಲೇ ಕ್ವಾರಂಟೈನ್ ಆಗಿರೋ ಕೋವಿಡ್ ಸೋಂಕಿತರಿಗೆ.
ಬೆಂಗಳೂರಿನ ವೈಟ್ಫೀಲ್ಡ್ ನಿವಾಸಿ ನೀತು ಪಂಕಜ್ ಗುಪ್ತಾ ದಿನಾ ಬೆಳಗ್ಗೆ 3.30ಕ್ಕೆಲ್ಲಾ ಎದ್ದುಬಿಡ್ತಾರೆ. ಆಗಲೇ ಅಡುಮನೆಯ ಕೆಲಸ ಶುರು ಮಾಡೋ ಇವ್ರು 18ರಿಂದ 20 ಕುಟುಂಬಗಳು, ಅಂದ್ರೆ ಸುಮಾರು 60 ಜನರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಮೂರೂ ಹೊತ್ತಿನ ಅಡುಗೆ ಮಾಡುತ್ತಾರೆ. 9 ಗಂಟೆ ವೇಳೆಗೆಲ್ಲಾ ಅಡುಗೆಮನೆ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿಬಿಡ್ತಾರೆ. ಮನೆಗೆಲಸ ಮಾಡಲು ಅಥವಾ ಅಡುಗೆಗೆ ಸಹಾಯ ಮಾಡೋಕೆ ಕೆಲಸದವರನ್ನ ಇವರು ಇಟ್ಟುಕೊಂಡಿಲ್ಲ. ಬದಲಿಗೆ ಅಡುಗೆಗೆ ಪತಿ ಪಂಕಜ್ ಮತ್ತು ಮಾಡಿರುವ ಅಡುಗೆಯನ್ನು ಡಬ್ಬಿಗಳಿಗೆ ತುಂಬಿ ಪ್ಯಾಕ್ ಮಾಡೋಕೆ 6 ಮತ್ತು 13 ವರ್ಷದ ಅವರ ಇಬ್ಬರು ಮಕ್ಕಳು ಅವರಿಗೆ ಸಹಾಯ ಮಾಡ್ತಾರೆ.
ಇದೆಲ್ಲಾ ಶುರುವಾಗಿ ಎರಡು ವಾರಗಳಾಗಿವೆ ಅಷ್ಟೇ. ಇಷ್ಟೆಲ್ಲಾ ಶ್ರಮವಹಿಸಿ ನೀತು ಗುಪ್ತಾ ಅಡುಗೆ ಮಾಡೋದು ತಾವು ಎಂದೂ ನೋಡಿರದ, ಮಾತನಾಡಿರದ ಸಂಪೂರ್ಣವಾಗಿ ಅಪರಿಚಿತರಾದ ವ್ಯಕ್ತಿಗಳಿಗೆ. ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇಂಥಾ ಸಂದರ್ಭದಲ್ಲಿ ಬೆಂಗಳೂರಿನಲ್ಲೇ ಸಾವಿರಾರು ಜನ ಸೋಂಕು ತಗುಲಿ ತಂತಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾವುದೇ ರೋಗಲಕ್ಷಣಗಳು ಇಲ್ಲದ ಅಥವಾ ಬಹಳ ಮೈಲ್ಡ್ ಆದ ರೋಗಲಕ್ಷಣಗಳು ಇರುವ ವ್ಯಕ್ತಿಗಳಿಗೆ ತಂತಮ್ಮ ಮನೆಗಳಲ್ಲೇ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯುವ ಅವಕಾಶ ಇದೆ.
ಕೆಲವು ಮನೆಗಳಲ್ಲಿ ಮನೆಮಂದಿಗೆಲ್ಲಾ ಸೋಂಕು ತಗುಲಿದೆ. ಇನ್ನು ಕೆಲವು ಕಡೆ ಮನೆಯಲ್ಲಿ ಒಬ್ಬೊಬ್ಬರೇ ಇರುತ್ತಾರೆ. ಕೋವಿಡ್ ಇರುವುದರಿಂದ ಮನೆಗೆಲಸದವರನ್ನು ಬರದಂತೆ ತಿಳಿಸಿರುತ್ತಾರೆ. ಹೋಟೆಲಿನಿಂದ ತರಿಸಿ ತಿನ್ನುವ ಆಹಾರ ಒಂದೆರಡು ದಿನಗಳಿಗೆ ಸರಿ. ನಂತರ ಮನೆಯ ಬಿಸಿಯಾದ ಶುಚಿಯಾದ ಊಟ ಸಿಕ್ಕರೆ ಒಳ್ಳೆಯದಿತ್ತು ಎನಿಸೋಕೆ ಶುರುವಾಗುತ್ತೆ. ಅಂಥವರ ಪಾಲಿನ ಅನ್ನಪೂರ್ಣೆ ನೀತು ಗುಪ್ತಾ. ತಾನು ಕೆಲವರಿಗೆ ಮನೆಯಿಂದ ಆಹಾರ ಒದಗಿಸಬಲ್ಲೆ ಎಂದು ಅವರು ವಾಟ್ಸಪ್, ಫೇಸ್ಬುಕ್ಗಳಲ್ಲಿ ಮೆಸೇಜ್ ಮಾಡಿದ್ದೇ ನೂರಾರು ಜನ ಅವರನ್ನು ಸಂಪರ್ಕಿಸೋಕೆ ಶುರು ಮಾಡಿದ್ರು. ತನಗೆ ಸಾಧ್ಯವಾದಷ್ಟು ಜನರಿಗೆ ಊಟ ತಲುಪಿಸೋ ಇವರು ಸಹಾಯ ಮಾಡುವ ಆಸಕ್ತಿಯಿಂದ ಬಂದ ಮತ್ತಷ್ಟು ಜನರಿಗೆ ರೋಗಿಗಳ ಸಂಪರ್ಕ ನೀಡಿದ್ದಾರೆ.
ಅಂದ್ಹಾಗೆ ಈ ಆಹಾರಕ್ಕೆ ಅವರು ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ. ಇವರ ಮನೆಯಿಂದ ರೋಗಿಯ ಮನೆಗೆ ಆಹಾರ ತಲುಪುವ ವ್ಯವಸ್ಥೆಯೊಂದನ್ನು ಮಾತ್ರ ರೋಗಿ ಮಾಡಬೇಕಾಗುತ್ತದೆ. ಬಹುತೇಕರು ಡನ್ಜೋ, ಸ್ವಿಗ್ಗಿ ಮುಂತಾದ ಆನ್ಲೈನ್ ಸೇವೆಗಳ ಮೂಲಕ ಊಟ ತರಿಸಿಕೊಳ್ತಾರೆ. ಒಂದೇ ಸಲ ಮೂರು ಹೊತ್ತಿನ ಆಹಾರವನ್ನೂ ನೀಡೋದ್ರಿಂದ ಅವರಿಗೆ ಯಾವಾಗ ಏನು ತಿನ್ನಬೇಕೆನಿಸುತ್ತೋ ಆಗ ತಿನ್ನಬಹುದು ಎನ್ನುತ್ತಾರೆ ನೀತು. ಸಾಧಾರಣ ಗಂಜಿ, ಕಿಚಡಿಯಂಥದ್ದನ್ನ ಮಾಡಿ ಕಳಿಸಿದರೂ ಸಾಕು, ಮನೆಯ ಊಟ ಮಾತ್ರ ಬೇಕು ಎಂದು ರೋಗಿಗಳು ಬಹು ಪ್ರಾಯಾಸದಿಂದ ಕೇಳುವಾಗ ಅದರ ಅವಶ್ಯಕತೆಯ ಅರಿವು ನಮಗಾಗುತ್ತೆ ಎನ್ನುತ್ತಾರೆ ನೀತು.
ಮಿಶನ್ ಚಾಯ್ ಎನ್ನುವುದು ಹಸಿದವರಿಗೆ ಊಟ ನೀಡುವ ಮತ್ತೊಂದು ಸಂಸ್ಥೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳು, ಹೈವೇಗಳಲ್ಲೆಲ್ಲಾ ಸಾವಿರಾರು ಜನರಿಗೆ ಆಹಾರದ ಪೊಟ್ಟಣವನ್ನು ವಿತರಿಸಿದ್ದರು ಇವರು. ಈ ಬಾರಿ ಹೆಚ್ಚು ಜನ ಮನೆಗಳಲ್ಲೇ ಕ್ವಾರಂಟೈನ್ ಆಗಿರುವುದು ತಿಳಿದಿರೋದ್ರಿಂದ ಅವರಿಗಾಗಿ ಏನಾದ್ರೂ ಮಾಡುವ ಬಗ್ಗೆ ಆಲೋಚಿಸಿದ್ರು. ಗುಂಪಿನ ಸದಸ್ಯರೂ ಆಗಿರುವ ಇಸ್ರೊದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ರಾಕೇಶ್ ನಯ್ಯರ್ ಮತ್ತು ಅವರ ಪತ್ನಿ ಸೀಮಾ ನಯ್ಯರ್ ತಮ್ಮ ಅಡುಗೆಮನೆಯಿಂದಲೇ ಸೋಂಕಿತರಿಗೆ ಆಹಾರ ಸರಬರಾಜು ಮಾಡೋಕೆ ಶುರು ಮಾಡಿದ್ದಾರೆ. ಓಲ್ಡ್ ಏರ್ಪೋರ್ಟ್ ರಸ್ತೆ ಮತ್ತು ಇಂದಿರಾನಗರದ ಭಾಗಗಳಲ್ಲಿ ತಮ್ಮ ಮನೆಗಳಲ್ಲೇ ಬಂಧಿಯಾಗಿರುವ ಹತ್ತಾರು ಕುಟುಂಬಗಳಿಗೆ ಪ್ರತಿದಿನ ರೋಟಿ, ಪಲ್ಯ, ಅನ್ನ ಮತ್ತು ಸಾರು ತಲುಪಿಸುತ್ತಾರೆ ಇವರು. ದಿನಕ್ಕೆ ಕನಿಷ್ಠ 400 ರೋಟಿಗಳಾದ್ರೂ ಇವರ ಅಡುಗೆಮನೆಯಲ್ಲಿ ತಯಾರಾಗುತ್ತದೆ. ಇವರು ಮಾಡ್ತಿರುವ ಕೆಲಸವನ್ನು ನೋಡಿ ಸ್ನೇಹಿತರು ಮತ್ತು ನೆರೆಹೊರೆಯವರು ಕೂಡಾ ಕೈಜೋಡಿಸುತ್ತಿದ್ದಾರೆ. ಇದಕ್ಕಾಗಿ ಕಚೇರಿಯಿಂದ ಒಂದು ವಾರದ ರಜೆ ತೆಗೆದುಕೊಂಡಿದ್ದಾರೆ ರಾಕೇಶ್ ನಯ್ಯರ್. ಈಗ ಎಲ್ಲವೂ ವ್ಯವಸ್ಥೆಯಂತೆ ಅದರ ಪಾಡಿಗೆ ನಡೆದುಕೊಂಡು ಹೋಗುತ್ತಿದೆ, ಇನ್ನು ನಾನು ಕಚೇರಿಗೆ ಮರಳುತ್ತೇನೆ ಎನ್ನುತ್ತಾರವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ