ನೆಲಮಂಗಲ: ದಾಬಸಪೇಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ವೈದ್ಯರ ಕೊರತೆಯಿಂದ ರೋಗಿಯ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಸ್ಥಳೀಯ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಹೋಬಳಿ ಕೇಂದ್ರವಾಗಿದ್ದು ದಾಬಸ್‌ಪೇಟೆಯ ಬೃಹತ್ ಕೈಗಾರಿಕಾ ಪ್ರದೇಶದಲ್ಲಿನ ಏಕೈಕ ಸರ್ಕಾರಿ ಆಸ್ಪತ್ರೆ ಈಗ ಪ್ರಯೋಜನಕ್ಕೆ ಬಾರದಂತಾಗಿದೆ. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಕೊರತೆಯಿಂದ ರಾತ್ರಿ 9 ಗಂಟೆಯ ನಂತರ ಆಸ್ಪತ್ರೆಯ ಬಾಗಿಲಿಗೆ ಬೀಗ ಹಾಕಿದರೆ ಮತ್ತೆ ಬೆಳಿಗ್ಗೆ 9 ಗಂಟೆಗೆ ಬಾಗಿಲು ತೆರೆಯುವುದು, ಇದರಿಂದ ಇಲ್ಲಿಯ ಜನಕ್ಕೆ ತುರ್ತು ಆರೋಗ್ಯ ಸೇವೆ ಸಿಗದೆ ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ದಾಬಸ್ ಪೇಟೆ ಪ್ರಾಥಮಿಕ ಆರೋಕ್ಯ ಕೇಂದ್ರ ಇದ್ದು, ಹೆದ್ದಾರಿಯಲ್ಲಿ ಪ್ರತಿನಿತ್ಯ ನಡೆಯುತ ಅಪಘಾತಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತುರ್ತು ಸಂಧರ್ಭಗಳಲ್ಲಿ ನೆಲಮಂಗಲ ತಾಲೂಕು ಆಸ್ಪತ್ರೆ ಅಥವಾ ತುಮಕೂರು ಜಿಲ್ಲಾಸ್ಪತ್ರೆ ಅವಲಂಭಿಸಬೇಕಿದೆ. ದಾರಿ ಮಧ್ಯೆ ಸಾಗಬೇಕಾದರೆ ಅದೆಷ್ಟೆ ಪ್ರಕರಣಗಳಲ್ಲಿ ಗಾಯಾಳುಗಳ ಪ್ರಾಣ ಪಕ್ಷಿ ಹಾರಿಹೋಗಿರುವ ನಿದರ್ಶನಗಳು ಸಹ ಕಾಣಬಹುದು.
ವೈದ್ಯರ ನೇಮಕಾತಿಗೆ ಆಹ್ವಾನ
ಈ ಬಗ್ಗೆ ಆರೋಗ್ಯ ಜಿಲ್ಲಾವೈದ್ಯಾಧಿಕಾರಿ ಮಂಜುಳಾ ಮತ್ತು ತಾಲೂಕು ಆರೋಗ್ಯ ಅಧಿಕಾರಿ ಹರೀಶ್ ಅವರನ್ನು ಮಾತನಾಡಿಸಿದಾಗ ವೈದ್ಯರ ಕೊರತೆ ಇದೆ. ಆದರೂ ಇರುವ ಸಿಬ್ಬಂದಿಯಿಂದ ಜನರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಸೂಚಿಸಿದ್ದೇವೆ ಅಂತಾರೆ. ಯಾರಾದರೂ ಎಂಬಿಬಿಎಸ್ ಆಗಿರುವವರು ಇದ್ದರೆ ಕರೆ ತನ್ನಿ ಅವರನ್ನೇ ಗುತ್ತಿಗೆ ಆಧಾರದ ಮೇಲೆ ಸೇವೆಗೆ ಸೇರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಡಿಎಚ್ಒ ಮಂಜುಳಾ. ಸದ್ಯ ದಾಬಸಪೇಟೆಯ ಬೆಳವಣಿಗೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ತಂದು ಹೆಚ್ಚಿನ ಅನುಕೂಲಗಳನ್ನು ಕೈಗೊಳ್ಳಲು ಸರಕಾರಕ್ಕೆ ಶಿಪಾರಸ್ಸು ಮಾಡಿದ್ದೇವೆ ಶೀಘ್ರವಾಗಿ ಆಸ್ಪತ್ರೆ ಮೇಲ್ದರ್ಜೆಗೆ ಬರುತ್ತದೆ ಎನ್ನುತ್ತಾರೆ.
ಆರೋಗ್ಯ ಕೇಂದ್ರ 24X7 ಎಂಬ ನಾಮಫಲಕವನ್ನು ಹೊಂದಿದೆ. ಆದರೂ ಇಲ್ಲಿ ಆರೋಗ್ಯ ಸೇವೆ ಮಾತ್ರ ಇಲ್ಲದಂತಾಗಿದೆ. ಈ ಬಗ್ಗೆ ಆರೋಗ್ಯ ಸಮಸ್ಯೆ ಪರಿಹರಿಸಲು ಸ್ಥಳೀಯ ಶಾಸಕರು ಸಂಸದರು ಜಿಲ್ಲಾ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ ಎಂಬುದು ಜನರ ಆರೋಪವಾಗಿದೆ. ಆಸ್ಪತ್ರೆಯಲ್ಲಿ ಆಯುಷ್ ವೈದ್ಯ ಸಂತೋಷ್ ಕರ್ತವ್ಯ ಮಾಡುತ್ತಿದ್ದು, ಮುಖ್ಯವಾಗಿ ಡಿ ಗ್ರೂಪ್ ನೌಕರರ ಕೊರತೆ ಇದೆ. ಸ್ವಚ್ಚತೆ ಮತ್ತು ಕಾವಲಿನ ಸಮಸ್ಯೆಯಿಂದ ಸ್ಟಾಫ್ ನರ್ಸ್‌ಗಳು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ತಂಗಲು ಭಯಪಡುತ್ತಿದ್ದಾರೆ ಎನ್ನಲಾಗಿದೆ.
ದಾಬಸಪೇಟೆಯ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆ ಅತಿ ವೇಗವಾಗಿ ಬೆಳೆಯುತ್ತಿದ್ದಂತೆ ಇಲ್ಲಿಯ ಜನವಸತಿಯೂ ಸಹ ಹೆಚ್ಚಳವಾಗುತ್ತಿದೆ. ಆದರೆ ಜನಸಂಖ್ಯೆಗೆ ತಕ್ಕಂತೆ ಜನರ ಅವಶ್ಯಕತೆಯ ಮೂಲ ಸೌಲಭ್ಯಗಳು ಸಿಗುವಂತಾಗಬೇಕು, ಸ್ಥಳಿಯ ಜನಪ್ರತಿನಿಧಿಗಳ ನಿರುತ್ಸಾಹ ಮತ್ತು ಬೇಜವಬ್ದಾರಿಯಿಂದ ಯಾವುದೇ ಅನುಕೂಲಗಳು ದೊರೆಯುತ್ತಿಲ್ಲ ಎಂಬುದು ಜನರ ನೋವಿನ ಮಾತು.
ಇದನ್ನು ಓದಿ: ಪಿಎಂ ಕೇರ್ನಿಂದ ಬಂದ ವೆಂಟಿಲೇಟರ್ಸ್ ನಕಲಿ: ಕುಣಿಗಲ್ ಶಾಸಕ ಡಾ. ರಂಗನಾಥ್ ಗಂಭೀರ ಆರೋಪ
ಕೊರೋನಾದಂತಹ ಮಾರಣಾಂತಿಕ ರೋಗದ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಪ್ರತಿ ದಿನ ನೂರಾರು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇಂಥ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣ ಕಳೆದು ಕೊಳ್ಳುವ ಸ್ಥಿತಿ ಉಂಟಾಗಿದೆ. ಇಲ್ಲಿಯ ಆಸ್ಪತ್ರೆಗಳ ಪರಿಸ್ಥಿತಿಯ ಸಂಪೂರ್ಣ ಅರಿವು ಅಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳಿಗೆ ಇದ್ದರೂ ಎನೂ ಮಾಡಲಾಗದೇ ಅಸಹಾಯಕತೆಯಿಂದ ಇದ್ದಾರೆ ಇದರಿಂದ ನಿಜವಾಗಿಯೂ ಹಳ್ಳಿಯ ಬಡ ಜನರ ಆರೋಗ್ಯದ ಸಂಕಷ್ಟ ಹೇಳತೀರದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ