ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ; ಸಿದ್ದರಾಮಯ್ಯ ಸ್ಪಷ್ಟನೆ, ಅನರ್ಹರಲ್ಲಿ ಆತಂಕ

ನನ್ನ ಮತ್ತು ಡಿಕೆಶಿ ನಡುವೆ ಅಭಿಪ್ರಾಯ ಭೇದ ಇರಬಹುದು. ಆದರೆ, ಭಿನ್ನಾಭಿಪ್ರಾಯ ಇಲ್ಲ. ಪಕ್ಷಕ್ಕೆ ಧಕ್ಕೆಯಾಗುವಂತಹ ಯಾವುದೇ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇಲ್ಲ. ಹೀಗಾಗಿ ನಾವಿಬ್ಬರೂ ಒಟ್ಟಾಗಿಯೇ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

MAshok Kumar | news18-kannada
Updated:November 1, 2019, 3:25 PM IST
  • Share this:
ಬೆಂಗಳೂರು (ನವೆಂಬರ್ 01); ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಾವಿಬ್ಬರೂ ಒಟ್ಟಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮತ್ತು ಡಿಕೆಶಿ ನಡುವಿನ ಜಟಾಪಟಿ ಕುರಿತ ಸುದ್ದಿಗೆ ತೆರೆ ಎಳೆದಿದ್ದಾರೆ.

ಕಳೆದ ವಾರ ಬೆಂಗಳೂರು ಏರ್​ಪೋರ್ಟ್​ನಿಂದ ಆಯೋಜಿಸಲಾಗಿದ್ದ ಡಿಕೆಶಿ ಮೆರವಣಿಗೆ ವೇಳೆ ಅವರು ಜೆಡಿಎಸ್ ಬಾವುಟವನ್ನು ಹಿಡಿದದ್ದು ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಈ ಕುರಿತು ಕಳೆದ ಭಾನುವಾರ ತಮ್ಮ ಆಪ್ತರ ಬಳಿ ಸಿದ್ದರಾಮಯ್ಯ ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ, ಈ ಖಾಸಗಿ ಮಾತುಕತೆಯ ದೃಶ್ಯ ಬಹಿರಂಗವಾಗುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಸಂಬಂಧ ಸರಿಯಿಲ್ಲ ಎಂಬ ಮಾತುಗಳಿಗೂ ಮತ್ತಷ್ಟು ಪುಷ್ಠಿ ನೀಡಿತ್ತು.

ಆದರೆ, ಇಂದು ನಗರದ ಪ್ರೆಸ್​ಕ್ಲಬ್​ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, “ನನ್ನ ಮತ್ತು ಡಿಕೆಶಿ ನಡುವೆ ಅಭಿಪ್ರಾಯ ಭೇದ ಇರಬಹುದು. ಆದರೆ, ಭಿನ್ನಾಭಿಪ್ರಾಯ ಇಲ್ಲ. ಪಕ್ಷಕ್ಕೆ ಧಕ್ಕೆಯಾಗುವಂತಹ ಯಾವುದೇ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇಲ್ಲ. ಹೀಗಾಗಿ ನಾವಿಬ್ಬರೂ ಒಟ್ಟಾಗಿಯೇ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದೇವೆ” ಎಂದು ತಿಳಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಇಬ್ಬರೂ ಒಂದಾಗಿ ಅನರ್ಹ ಶಾಸಕರ ಸೋಲಿಗೆ ಶ್ರಮಿಸುವುದಾಗಿ ಪರೋಕ್ಷ ಮಾಹಿತಿಯನ್ನು ರವಾನಿಸಿದ್ದಾರೆ. ಈ ಮೂಲಕ ಅನರ್ಹ ಶಾಸಕರ ಆತಂಕಕ್ಕೆ ಕಾರಣರಾಗಿದ್ದಾರೆ.

ನೆರೆ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದು ನಾನಲ್ಲ ನೀವು ಮಿಸ್ಟರ್​ ಯಡಿಯೂರಪ್ಪ; ಸಿದ್ದರಾಮಯ್ಯ ಕಿಡಿ

ಪತ್ರಿಕಾಗೋಷ್ಠಿಯಲ್ಲಿ ನೆರೆ ಪರಿಹಾರ ಕಾರ್ಯಗಳ ಕುರಿತು ಸಿಎಂ ಬಿಎಸ್​ವೈ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿದ್ದರಾಮಯ್ಯ, “ಮಿಸ್ಟರ್ ಯಡಿಯೂರಪ್ಪ ಸಂತ್ರಸ್ತರ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿರುವುದು ನಾನಲ್ಲ ನೀವು. ಮಾಹಿತಿ ಇಲ್ಲದೆ ನಾನು ಮಾತನಾಡುವುದಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಎಲ್ಲಾ ಮಾಹಿತಿಯನ್ನು ನಾನು ಪಡೆದಿದ್ದೇನೆ. ಅದರ ಆಧಾರದ ಮೇಲೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇನೆ.

ಆದರೆ, ನೀವು ಒಂದೆಡೆ ನೆರೆಯಿಂದ 2 ಲಕ್ಷ ಮನೆ ಬಿದ್ದಿದೆ ಎಂದು ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದೀರಿ. ಮತ್ತೊಂದೆಡೆ 90 ಸಾವಿರ ಮನೆಗಳು ಬಿದ್ದಿವೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಡ್ತೀರಿ. ಇದರಲ್ಲಿ ನಿಜ ಯಾವುದು? ಸುಳ್ಳು ಯಾವುದು? ದಯವಿಟ್ಟು ಸ್ಪಷ್ಟಪಡಿಸಿ. ಹೀಗೆ ಎಲ್ಲಾ ವಿಚಾರದಲ್ಲೂ ನೀವೆ ಗೊಂದಲ ಸೃಷ್ಟಿಸಿ ನಮ್ಮನ್ನು ದೂರುವುದು ಸರಿಯಲ್ಲ” ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

“ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆಯನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ಆದರೆ, ಈ ಸರ್ಕಾರದ ಸಾಧನೆಯಾದರೂ ಏನು? ನೆರೆ ಪರಿಹಾರವನ್ನು ಸಮರ್ಥವಾಗಿ ನಿಭಾಯಿಸಿಲ್ಲ. ಕೇಂದ್ರದ ಬಳಿ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿಲ್ಲ. ಕೇಂದ್ರದಿಂದ ಸೂಕ್ತ ಪರಿಹಾರವೂ ಬರಲಿಲ್ಲ. ಪ್ರಧಾನಿ ಮೋದಿ ಕರ್ನಾಟಕದ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಕೊನೆಪಕ್ಷ ಇವರ ಬೇಟಿಗೂ ಸಮಯ ನೀಡಿಲ್ಲ.ಆದರೆ, ಇದರ ಹೊರತಾಗಿಯೂ ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆ ಕೊಡಿಸಿದ್ದು, ಅನರ್ಹ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಮಾತ್ರ ಬಿಜೆಪಿ ಸರ್ಕಾರದ 100 ದಿನದ ಸಾಧನೆ” ಎಂದು ಸಿದ್ದರಾಮಯ್ಯ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : ಕನ್ನಡ ರಾಜಕೀಯ ಶಕ್ತಿಯಾಗಿ, ಹೋರಾಟದ ತಾತ್ವಿಕ ನೆಲೆಯಾಗಿ ಬದಲಾಗದ ಹೊರತು ರಾಜ್ಯೋತ್ಸವ ಆಚರಣೆಗೆ ಅರ್ಥವಿಲ್ಲ!

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ