ಈಗಂತೂ ನಾವು ಯಾವುದೇ ಖಾಸಗಿ ಪಿಯು ಕಾಲೇಜಿನ (PU College) ಮುಂದೆ ನೋಡಿದರೆ ಸಾಕು ಸಾಲು ಸಾಲಾಗಿ ನೀಟ್ (NEET), ಜೆಇಇ (JEE) ಮತ್ತು ಸಿಇಟಿ (CET) ಹೆಸರಿನಲ್ಲಿ ಅನೇಕ ರೀತಿಯಲ್ಲಿ ಇಂಟಿಗ್ರೇಟೆಡ್ ಕೋಚಿಂಗ್ (Integrated coaching) ಇಲ್ಲಿ ನೀಡಲಾಗುವುದು ಎಂದು ದೊಡ್ಡ ದೊಡ್ಡ ಬೋರ್ಡ್ ಗಳನ್ನು (Board) ಹಾಕಿಕೊಂಡಿರುವುದನ್ನು ನಾವು ನೋಡುತ್ತೇವೆ. ಇದರರ್ಥ ಈ ಖಾಸಗಿ ಪಿಯು ಕಾಲೇಜಿನವರು ತಮ್ಮ ತಮ್ಮ ರಾಜ್ಯ ಸರ್ಕಾರವು ಸೂಚಿಸಿದ ಪಠ್ಯಕ್ರಮದಲ್ಲಿರುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ (Students)ಹೇಳಿ ಕೊಡುವುದಲ್ಲದೆ, ಇನ್ನಿತರೆ ಬೇರೆ ಬೇರೆ ರೀತಿಯ ಪರೀಕ್ಷೆಗಳಿಗೂ (Exam) ಸಹ ಕೋಚಿಂಗ್ ಅನ್ನು ನೀಡುತ್ತಾರೆ. ಆದರೆ ಇನ್ಮುಂದೆ ಈ ರೀತಿಯಾಗಿ ಖಾಸಗಿ ಪಿಯು ಕಾಲೇಜುಗಳು ಮಾಡುವಂತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಸಮಗ್ರ ಕೋಚಿಂಗ್ ಅಥವಾ ಇನ್ನಾವುದೇ ಕೋಚಿಂಗ್ ನೀಡುವುದಕ್ಕೆ ಅವಕಾಶವಿಲ್ಲ
ಈ ಶೈಕ್ಷಣಿಕ ವರ್ಷದಿಂದ, ಕರ್ನಾಟಕದಾದ್ಯಂತದ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯ ಸರ್ಕಾರವು ಸೂಚಿಸಿದ ಪಠ್ಯಕ್ರಮವನ್ನು ಹೊರತುಪಡಿಸಿ, ಸಮಗ್ರ ಕೋಚಿಂಗ್ ಅಥವಾ ಇನ್ನಾವುದೇ ಕೋಚಿಂಗ್ ನೀಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ದಿನೇ ದಿನೇ ರಾಜ್ಯಾದ್ಯಂತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ನೀಟ್, ಜೆಇಇ ಮತ್ತು ಸಿಇಟಿ ಹೆಸರಿನಲ್ಲಿ ಇಂಟಿಗ್ರೇಟೆಡ್ ಕೋಚಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಘೋಷಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಪರೋಕ್ಷವಾಗಿ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ.
ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ
ಇಂತಹ ಅಭ್ಯಾಸಗಳಲ್ಲಿ ತೊಡಗದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಿಗೆ ನಿರ್ದೇಶನಗಳನ್ನು ಈಗಾಗಲೇ ನೀಡಿದೆ. ಈ ಮಾರ್ಗಸೂಚಿಯನ್ನು ಪಿಯು ಕಾಲೇಜುಗಳು ಉಲ್ಲಂಘಿಸಿದರೆ ಸೂಕ್ತವಾದ ಕ್ರಮವನ್ನು ಎದುರಿಸಬೇಕಾಗಿ ಬರಬಹುದು.
2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಪ್ರವೇಶ ಮಾರ್ಗಸೂಚಿಗಳಲ್ಲಿ ಪದವಿ ಪೂರ್ವ ಕಾಲೇಜುಗಳ ಆವರಣದಲ್ಲಿ ಸಂಯೋಜಿತ ಅಥವಾ ಯಾವುದೇ ವಿಶೇಷ ಕೋಚಿಂಗ್ ಅನ್ನು ನಿರ್ಬಂಧಿಸುವ ವಿಶೇಷ ಉಲ್ಲೇಖವಿದೆ.
ಇದನ್ನೂ ಓದಿ: SSLC Result 2022: ಎಸ್ಎಸ್‌ಎಲ್‌ಸಿಯಲ್ಲಿ 85.63ರಷ್ಟು ಫಲಿತಾಂಶ, 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್!
ಇಲಾಖೆಯು ಬಿಡುಗಡೆ ಮಾಡಿದ ಮಾರ್ಗಸೂಚಿಗಳಲ್ಲಿ "ಕೆಲವು ಪದವಿ ಪೂರ್ವ ಕಾಲೇಜುಗಳು ಇಂಟಿಗ್ರೇಟೆಡ್ ಕೋಚಿಂಗ್ ಮತ್ತು ಬ್ರಿಡ್ಜ್ ಕೋರ್ಸ್ ಗಳು ಇತ್ಯಾದಿಗಳಿಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿವೆ. ಯಾವುದೇ ಕಾಲೇಜು ಯಾವುದೇ ಬಾಹ್ಯ ಸಂಸ್ಥೆಯ ಸಹಯೋಗದೊಂದಿಗೆ, ಡಿಜಿಟಲ್ ಮೋಡ್ ಮೂಲಕ ಅಥವಾ ಸಂಪನ್ಮೂಲ ವ್ಯಕ್ತಿಯ ಮೂಲಕ ಅಂತಹ ತರಗತಿಗಳನ್ನು ನಡೆಸುವುದು ಕಂಡು ಬಂದರೆ, ಆ ಸಂಸ್ಥೆಯು ಸೂಕ್ತವಾದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.
ಈ ಹೊಸದಾದ ನಿಯಮವನ್ನು ಉಲ್ಲಂಘಿಸಿದರೆ, ಆಯಾ ಪಿಯು ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಪಿಯು ಇಲಾಖೆಯವರು ತಿಳಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ "ಪಿಯು ಕಾಲೇಜುಗಳು ಇಲಾಖೆ ಸೂಚಿಸಿದ ಪಠ್ಯ ಪುಸ್ತಕವನ್ನು ಹೊರತು ಪಡಿಸಿ ಬೇರೆ ಯಾವುದೇ ಕೋರ್ಸ್ ಗಳ ಪ್ರವೇಶ ಪರೀಕ್ಷೆಗಳಿಗಾಗಿ ತರಬೇತಿಯನ್ನು ಕಾಲೇಜಿನಲ್ಲಿ ನೀಡುವಂತಿಲ್ಲ ಎಂಬ ಸ್ಪಷ್ಟ ಸೂಚನೆ ಇದು" ಎಂದು ಹೇಳಿದರು.
ಸಮಗ್ರ ಶಿಕ್ಷಣದ ವಿರುದ್ಧ ಪೋಷಕರಿಂದ ದೂರು
ಆದಾಗ್ಯೂ, ಪಿಯು ಕಾಲೇಜುಗಳೊಂದಿಗೆ ಸಂಬಂಧ ಹೊಂದಿರುವ ಮತ್ತು ಸಮಗ್ರ ಕೋಚಿಂಗ್ ನೀಡುವ ಸಂಸ್ಥೆಗಳು ಅವುಗಳನ್ನು ನಿಯಂತ್ರಿಸಲು ಇಲಾಖೆಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. ಸಮಗ್ರ ಶಿಕ್ಷಣದ ವಿರುದ್ಧ ಪೋಷಕರಿಂದ ದೂರುಗಳಿವೆ ಎಂದು ಇಲಾಖೆಯ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Crime News: ಮತ್ತೊಂದು ಮದುವೆಯಾಗಲು 15 ದಿನದ ಮಗುವನ್ನು ಕಸದಬುಟ್ಟಿಗೆಸೆದ ಮಹಿಳೆ
"ಪಿಯು ಶಿಕ್ಷಣದ ಜೊತೆಗೆ ಸಂಯೋಜಿತ ಕೋಚಿಂಗ್ ಗಾಗಿ ಕಾಲೇಜುಗಳು ಒಂದು ವರ್ಷಕ್ಕೆ 4 ರಿಂದ 8 ಲಕ್ಷ ರೂಪಾಯಿಯವರೆಗೆ ಶುಲ್ಕವನ್ನು ವಿಧಿಸುತ್ತಿವೆ ಎಂದು ಅನೇಕ ಪೋಷಕರಿಂದ ದೂರುಗಳಿವೆ" ಎಂದು ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ