ಕೋಲಾರ: ಕರ್ನಾಟಕ ರಾಜ್ಯದಲ್ಲಿ ಹೈನೋದ್ಯಮ ಕ್ಷೇತ್ರಕ್ಕೆ (Animal husbandry) ನಾಂದಿ ಹಾಡಲು ಹೈಬ್ರಿಡ್ ಹಸುಗಳನ್ನ (High Breed Cows) ಡೆನ್ಮಾರ್ಕ್ (Denmark) ದೇಶದಿಂದ ಖರೀದಿಸಿ, ದೇಶ ಹಾಗು ನಮ್ಮ ರಾಜ್ಯಕ್ಕೆ ಮೊದಲ ಬಾರಿಗೆ ಪರಿಚಯಿಸಿದ ಮಾಜಿ ಕೇಂದ್ರ ಸಚಿವ ದಿವಂಗತ ಎಂ.ವಿ. ಕೃಷ್ಣಪ್ಪ (M V Krishnappa) ಅವರ ತವರೂರು ಕೋಲಾರದ ಮೋತಕಪಲ್ಲಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಹಾಲಿನ ಡೈರಿಗೆ ಬೀಗ ಜಡಿಯಲಾಗಿದೆ. ಮುಳಬಾಗಿಲು ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ಸರ್ಕಾರಿ ಡೈರಿಯಿಲ್ಲದೆ ತಮಿಳುನಾಡು ಹಾಗೂ ಆಂಧ್ರದ ಖಾಸಗಿ ಡೈರಿಗಳಿಗೆ ರೈತರು ತಮ್ಮ ಹಾಲು ಮಾರಾಟ ಮಾಡುವ ದುಸ್ತಿತಿ ಎದುರಾಗಿದೆ. ಈ ಮೂಲಕ ದೇಶ ಹಾಗೂ ರಾಜ್ಯದಲ್ಲಿ ಹೈನೋದ್ಯಮಕ್ಕೆ ಹೊಸ ಹುರುಪು ನೀಡಲು ಹೆಚ್.ಎಪ್ ಜರ್ಸಿ ಸೀಮೆ ಹಸುಗಳನ್ನ ತಂದು ಕ್ರಾಂತಿಕಾರಕ ಹೆಜ್ಜೆ ಇಟ್ಟ ಮಹಾನ್ ನಾಯಕನ ಹುಟ್ಟೂರಲ್ಲೇ ಡೇರಿಯಿಲ್ಲ. ಖಾಸಗಿ ಡೈರಿಗಳ ಆರ್ಭಟ ಮಿತಿಮೀರಿದೆ.
200ಕ್ಕೂ ಹೆಚ್ಚು ರೈತರು ಹೈನುಗಾರಿಕೆ ಮಾಡ್ತಿದ್ದಾರೆ
1958 ರಲ್ಲಿ ಸ್ವಗ್ರಾಮದಲ್ಲಿ ಸಹಕಾರ ರಂಗದ ಹಾಲಿನ ಡೈರಿ ತೆರೆದಿದ್ದ ಎಂವಿ ಕೃಷ್ಣಪ್ಪನವರು ಗ್ರಾಮಸ್ತರಿಗೆ ಹಾಲನ್ನ ಡೈರಿಯಲ್ಲೇ ಹಾಕುವಂತೆ ಮನವಿ ಮಾಡಿದ್ದರು. ಕಳೆದ 20 ವರ್ಷಗಳ ಹಿಂದೆ ಡೈರಿಯ ಎಲ್ಲಾ ವ್ಯವಹಾರಗಳು ನಡೆದಿದೆ. ಬಳಿಕ ರಾಜಕೀಯ ವೈಮನಸ್ಸು, ಹಣದ ವ್ಯವಹಾರದಲ್ಲಿ ಏರು ಪೇರು ಕಂಡುಬಂದ ಕಾರಣ ಡೈರಿ ಮುಚ್ಚಲಾಯಿತು. ಬಳಿಕ ಹಾಲು ಡೈರಿಯನ್ನ ಪುನರ್ ಆರಂಭಿಸಲು ಮುಂದಾಗದೆ, ಹಾಲು ಒಕ್ಕೂಟದ ಕಟ್ಟಡವು ಬೇರೆ ಕೆಲಸಗಳಿಗೆ ಬಳಕೆಯಾಗುತ್ತಿದೆ. ಇದೀಗ ನಮ್ಮ ರಾಜ್ಯದ ಹಾಲು ಖಾಸಗಿ ಕಂಪನಿಗಳ ಪಾಲಾಗುತ್ತಿದ್ದು, ಗ್ರಾಮದಲ್ಲಿ 200ಕ್ಕೂ ಹೆಚ್ಚು ಹಾಲು ಉತ್ಪಾದಕರಿದ್ದು, ಶೇಕಡಾ 80 ರಷ್ಟು ಜನ ಇಂದಿಗೂ ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಹಾಲು ಡೇರಿ ಪುನರ್ ಆರಂಭಿಸುವ ಕುರಿತು ಗ್ರಾಮಸ್ತರು, ಕೋಲಾರ ಹಾಲು ಒಕ್ಕೂಟಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ತರು ತೀವ್ರ ಬೇಸರ ಹೊರಹಾಕಿದ್ದಾರೆ. ಇಂತಹ ಕುಗ್ರಾಮದಲ್ಲಿ ಸರ್ಕಾರಿ ಡೈರಿಯಾದರೆ ರೈತರಿಗೆ ಉಪಕಾರಿಯಾಗಲಿದ್ದು ಸ್ವಾವಲಂಬಿ ಜೀವನಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಗ್ರಾಮದ ರೈತರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: Koppal Teacher: ವಿಡಿಯೋಗಳನ್ನು ಮಾಡಿದ್ದು ನಾನೇ; ತಪ್ಪೊಪ್ಪಿಕೊಂಡ ಕಾಮುಕ ಶಿಕ್ಷಕ
ಡೈರಿ ತೆರೆಯದಿರಲು ಕಾರಣವೇನು?
ಆದರೆ ಈ ಬಗ್ಗೆ ನ್ಯೂಸ್ 18 ಜೊತೆಗೆ ಮಾತನಾಡಿರುವ ಎಂ.ವಿ ಕೃಷ್ಣಪ್ಪ ಅವರ ಮಗ ಜಯಸಿಂಹ ಕೃಷ್ಣಪ್ಪ ಅವರು, ಮೋತಕಪಲ್ಲಿ ಗ್ರಾಮದಲ್ಲಿ ಹಾಲಿನ ಡೈರಿ ಇಲ್ಲದಿರುವುದು ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿನ ವೈಮನಸ್ಸುಗಳಿಂದಲೆ ಹಾಲಿನ ಡೇರಿ ಮುಚ್ಚಿದೆ, ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ನಾನು ನಿಷ್ಟೂರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದೇನೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಳಬಾಗಿಲು ತಾಲೂಕಿನ ಹಾಲು ಒಕ್ಕೂಟ ನಿರ್ದೇಶಕ ನಾಗರಾಜ್, ಗ್ರಾಮಸ್ಥರು ಮುಂದೆ ಬಂದು ಜವಾಬ್ದಾರಿ ಒಪ್ಪಿಕೊಂಡರೆ ಹಾಲಿನ ಡೇರಿ ಆರಂಭಿಸೋದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸಲು, ರೈತರು ಹಾಲು ಉತ್ಪಾದನೆಯಿಂದ ಜೀವನ ನಡೆಸಲು ಸಹಕಾರಿಯಾಗಿರುವುದು ಈಗಿನ ಸೀಮೆ ಹಸುಗಳಿಂದಲೇ ಸಾಧ್ಯವಾಗಿದೆ, ಡೆನ್ಮಾರ್ಕ್ ದೇಶದಿಂದ ಹಸುಗಳನ್ನು ತಂದು ಹಾಲು ಉತ್ಪಾದನೆ ಹೆಚ್ಚಿಸಲು ಹೆಜ್ಜೆಯಿಟ್ಟ ನಾಯಕರ ತವರೂರಿನಲ್ಲೆ ಸರ್ಕಾರಿ ಹಾಲಿನ ಡೇರಿ ಇಲ್ಲದೆ, ಖಾಸಗಿ ಡೇರಿಗಳಿಗೆ ರೈತರು ಹಾಲು ಮಾರಾಟ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ