ನವದೆಹಲಿ(ನವೆಂಬರ್. 19): ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಅನುಮತಿ ನೀಡುವಂತೆ ಕೇಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ದೆಹಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ದೆಹಲಿಯಲ್ಲೇ ಇದ್ದರೂ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೌಜನ್ಯಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರಲಿಲ್ಲ. ಗುರುವಾರ ತಾವು ಭೇಟಿ ಮಾಡದೇ ಇದ್ದುದಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟೀಕರಣ ನೀಡಿದ್ದಾರೆ. ಗುರುವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ನನ್ನ ಇಲಾಖೆಯ ಕೆಲಸಗಳ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಭೇಟಿ ವಿಚಾರ ನನಗೆ ಗೊತ್ತಿರಲಿಲ್ಲ. ನಾನು ಬಂದ ಬಳಿಕ ಅವರು ದೆಹಲಿಗೆ ಬಂದಿದ್ದಾರೆ. ಹಾಗಾಗಿ ನಾನು ಮಾಹಿತಿ ಕೊರತೆಯಿಂದ ಭೇಟಿಯಾಗಲಿಲ್ಲವೇ ಹೊರತು ಬೇರೆ ಯಾವುದೇ ಕಾರಣ ಇಲ್ಲ ಎಂದು ಹೇಳಿದರು.
ಇದಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಗಧಿತ ಸಮಯಕ್ಕಿಂತ ಬೇಗನೇ ಬೆಂಗಳೂರಿಗೆ ವಾಪಸ್ ಆದರು. ಆದುದರಿಂದ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲವಷ್ಟೇ. ಉದ್ದೇಶ ಪೂರ್ವಕವಾಗಿ ಭೇಟಿ ಮಾಡಿಲ್ಲ ಎನ್ನುವುದು ಸುಳ್ಳು ಎಂದು ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ಇತ್ತೀಚೆಗಷ್ಟೇ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿದ್ದರೂ ಹೈಕಮಾಂಡ್ ನಾಯಕರ ಸಂಪರ್ಕ ಸಾಧಿಸಿದ್ದಾರೆ. ಅದೇ ಸಂಪರ್ಕವನ್ನು ಬಳಸಿಕೊಂಡು ಆಪರೇಷನ್ ಕಮಲ ಮಾಡುವ ವೇಳೆ ತಮ್ಮ ಜೊತೆಗಿದ್ದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಶ್ರಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಅಲ್ಲಗಳೆದ ಸಚಿವ ರಮೇಶ್ ಜಾರಕಿಹೊಳಿ, ನಾನು ಯಾರಿಗೂ ಸಚಿವ ಸ್ಥಾನ ಕೊಡಿಸಲು ದೆಹಲಿಗೆ ಬಂದಿಲ್ಲ ಎಂದರು.
ಇದನ್ನೂ ಓದಿ : ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ರದ್ದು: ಹೈಕೋರ್ಟ್ ಆದೇಶ
ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬಿ.ಎಲ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಸಿ.ಪಿ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದು ಬೇಡ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ'ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಬೇಡ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ವರಿಷ್ಠರು ನಿರ್ಧಾರ ಮಾಡಲಿದ್ದಾರೆ' ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ