ಬೆಂಗಳೂರು: ನಾಳೆ ಯುಗಾದಿ ಹಬ್ಬ. ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದಿಂದ ಯುಗಾದಿ ಶುಭಾಶಯ. ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಲಿ. ಕಳೆದ ವರ್ಷ ಜನರು ಅನೇಕ ನರಕ, ಸಂಕಷ್ಟ ಅನುಭವಿಸಿದ್ದಾರೆ. ಈ ವರ್ಷ ಆದರೂ ಕೂಡ ಭಗವಂತ ಕರುಣೆ ತೋರಿಸಿ, ಈ ದುಃಖದಿಂದ ಜನರು ದೂರ ಆಗಲೆಂದು ಹಾರೈಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಡಿಕೊಂಡರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ದುಸ್ಥಿತಿಯ ಆಡಳಿತ ಕರ್ನಾಟಕದಲ್ಲಿ ಇದೆ. ಈ ವರ್ಷ ನಡೆದ ಚಳವಳಿ, ಹೋರಾಟ ಯಾವಾಗಲೂ ನಡೆದಿಲ್ಲ. ಜನರಿಗೆ ಮಾತು ಕೊಟ್ಟಂತೆ ಸರ್ಕಾರ ನಡೆದುಕೊಂಡಿಲ್ಲ. ನಾನು ಉಪ ಚುನಾವಣೆ ಕ್ಷೇತ್ರ ಸೇರಿದಂತೆ ರಾಜ್ಯ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಬದಲಾವಣೆ ತರಬೇಕು ಎಂದು ಜನರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಬಹಳಷ್ಟು ಸಿಟ್ಟು ಇದೆ. ಇದನ್ನೆಲ್ಲಾ ನೋಡಿದರೆ ನಾವು ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮಸ್ಕಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ವೀಡಿಯೋ ವೈರಲ್ ಆಗಿದೆ. ಪ್ರಚಾರಕ್ಕೆ ಕರೆತರುವ ಜನರಿಗೆ ಹಣ ಹಂಚಿಕೆ ಮಾಡಿರುವ ವಿಡಿಯೋ. ಹೀಗಾಗಿ ಕೂಡಲೇ ಅಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಅನರ್ಹ ಮಾಡಬೇಕು. ಯಡಿಯೂರಪ್ಪ ಸಿಎಂ ಆಗಿ ಜಾತಿವಾರು ಸಭೆ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಎಲ್ಲೋ ಒಂದು ಕಡೆ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಈ ಚುನಾವಣೆಯಲ್ಲಿ ಹಣದಿಂದ, ಸರ್ಕಾರಿ ನೌಕರರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಜಾತಿ ಸಭೆ ಮಾಡ್ತಿರುವ ಸಿಎಂ ಮೇಲೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆಗ್ರಹಿಸಿದರು.
ಇದನ್ನು ಓದಿ: ಒಂದು ವಾರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆ ಮೀಸಲು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಡಿಕೆಶಿ, ಸಾರಿಗೆ ನೌಕರರ ನೋವಿನ ಬಗ್ಗೆ ಸರ್ಕಾರ ಕರೆದು ಚರ್ಚಿಸಬೇಕು. ಆದರೆ ಯಾಕೆ ಈಗ ಸರ್ಕಾರಕ್ಕೆ ಪ್ರತಿಷ್ಠೆ ಬಂದಿದೆ. ಮಂತ್ರಿಯೊಬ್ಬರು ಯಾವ ಕಾರಣಕ್ಕೂ ನಾವು ಮಾತಾಡೋಲ್ಲ ಎಂದಿದ್ದಾರೆ. ಅವರು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸರ್ಕಾರಿ ಸವಲತ್ತನ್ನು ಖಾಸಗಿಯವರಿಗೆ ಮಾರಲು ಪ್ಲಾನ್ ಮಾಡಿದ್ದಾರೆ. ಮುಷ್ಕರನಿರತ ಸಾರಿಗೆ ನೌಕರರನ್ನು ಕರೆದು ಅವರ ಸಮಸ್ಯೆ ಆಲಿಸೋದು ಬಿಟ್ಟು, ಪ್ರೈವೇಟ್ ನವರ ಕೈಯಲ್ಲಿ ಕೊಟ್ಟು ನಾವು ನಡೆಸುತ್ತೇವೆ ಅಂತಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಪ್ರೈವೇಟ್ ನವರಿಗೆ ಮಾರುವ ಒಳಸಂಚು ನಡೆದಿದೆ. ಎಲ್ಲಾ ಕಂಪನಿಗಳನ್ನು ಎನ್ಡಿಎ ಸರ್ಕಾರ ಮಾರುತ್ತಿದೆ. ಈಗ ಕೆಎಸ್ಆರ್ಟಿ ಸಿ ಪ್ರೈವೇಟ್ ನವರ ಕೈಗೆ ಕೊಡೋ ಸಂಚು ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲ ಆಗಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ಯಾವತ್ತು ನೋಡಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ಮಾಡಿ, ಅಲ್ಲಿನ ಜನರ ಸಮಸ್ಯೆ ಕೇಳಿಲ್ಲ. ಕೊರೋನಾ ಸಂದರ್ಭದಲ್ಲಿ ನೀವು ಏನು ಮಾತು ಕೊಟ್ಟಿದ್ರಿ. ಯಾರಿಗೆ ಎಷ್ಟು ಕೊಟ್ಟಿದ್ಸೀರಿ ಲೆಕ್ಕ ಕೊಡಿ. ಈಗ ಮತ್ತೆ ಕೊರೋನಾ, ಕೊರೋನಾ ಅಂತಿದ್ದಿರಿ. ಹಗಲು ಮಾತ್ರ ಕೊರೋನಾ ಹರಡಲ್ವಂತೆ, ರಾತ್ರಿ ಮಾತ್ರ ಕೊರೋನಾ ಹರಡುತ್ತಂತೆ. ಯಾರು ನಿಮಗೆ ಇದನ್ನು ಹೇಳಿಕೊಟ್ಟವರು. ಇಡೀ ಸಿನಿಮಾ ಕ್ಷೇತ್ರವೇ ಸಂಕಷ್ಟಕ್ಕೀಡಾಗಿದೆ. ಯಾರಿಗಾದರೂ ಆರ್ಥಿಕವಾಗಿ ಸಹಾಯ ಮಾಡಿದ್ದೀರಾ..? ಜನರ ದಿನಬಳಕೆ ವಸ್ತುಗಳು ಕೂಡ ದುಬಾರಿಯಾಗಿದೆ ಎಂದು ಕೊರೋನಾ ತಡೆ ಕುರಿತು ಸರ್ಕಾರದ ನಿರ್ಧಾರಗಳ ಬಗ್ಗೆ ಡಿಕೆಶಿ ಕಿಡಿ ಕಾರಿದರು.
ಸಾರಿಗೆ ಸಿಬ್ಬಂದಿಗಳಿಗೆ ಕೂಡಲೇ ವೇತನ ಕೊಡಬೇಕು. ಅವರಿಗೆ ಹಬ್ಬ ಬರ್ತಿದೆ. ಅಲ್ಲಿ ಏನೋ ಯಾರೋ ಪ್ರತಿಭಟನೆ ಮಾಡೋಕೆ ಹೋದ್ರೆ, ಅವರನ್ನು ಬಂಧಿಸುವ ಕೆಲಸ ಮಾಡ್ತಿದ್ದಾರೆ. ಯಾಕೆ ಯಾರು ಎಲ್ಲೂ ಹೋರಾಟ ಮಾಡಬಾರದಾ..? ನಿಮ್ಮ ವಿರುದ್ಧ ಯಾರು ಕೂಡ ಹೋರಾಟ ಮಾಡಬಾರದಾ..? ಇದುವರೆಗೂ ಯಾರು ಯಾರು ಹೋರಾಟ ಮಾಡ್ತಿದ್ದಾರೋ ಅವರ ಪರವಾಗಿ ಈ ಕಾಂಗ್ರೆಸ್ ನಿಲ್ಲಲಿದೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸಲೇಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ