HOME » NEWS » State » THERE HAVE BEEN NO NEGOTIATIONS BETWEEN THE TRANSPORT EMPLOYEES AND THE GOVERNMENT SAYS LAXMAN SAVADI RHHSN SHTV

ಮುಷ್ಕರನಿರತ ಸಾರಿಗೆ ನೌಕರರು, ಸರ್ಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

ಮುಷ್ಕರದ ನೆಪದಲ್ಲಿ ಕೆಲವರು ನೌಕರ ವರ್ಗದವರಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸಿ ಸರ್ಕಾರದ ವಿರುದ್ಧ ಹಾಗೂ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ನಮ್ಮ ಸಾರಿಗೆ ನೌಕರರ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಈ ರೀತಿಯ ಕಾನೂನುಬಾಹಿರ ಕೃತ್ಯಗಳಿಗೆ ಮುಂದಾಗುವವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

news18-kannada
Updated:April 19, 2021, 9:25 PM IST
ಮುಷ್ಕರನಿರತ ಸಾರಿಗೆ ನೌಕರರು, ಸರ್ಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ
ಡಿಸಿಎಂ ಲಕ್ಷ್ಮಣ ಸವದಿ
  • Share this:
ಬೆಂಗಳೂರು; ಮುಷ್ಕರ ನಿರತ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನದ ಮಾತುಕತೆ ನಡೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ,  ಆದರೆ ಆ ರೀತಿಯ ಯಾವುದೇ ಸಂಧಾನದ ಪ್ರಕ್ರಿಯೆ ನಡೆದಿಲ್ಲ ಎಂದು ಮತ್ತೊಮ್ಮೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಪ್ರಾರಂಭದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಯಾವುದೇ ಮಾತುಕತೆ, ಸಂಧಾನದ ಅವಶ್ಯಕತೆ ಇರುವುದಿಲ್ಲ. ಮೊದಲು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ತಾಕೀತು ಮಾಡಿದ್ದರು. ಕೆಲವು ಮುಖಂಡರು ತಾವು ಮುಷ್ಕರ ನಿರತರ ಪರವಾಗಿ ಇಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ನಾನು ಬೊಮ್ಮಾಯಿ ಅವರನ್ನು ಕೇಳಿದಾಗ “ಮುಖ್ಯಮಂತ್ರಿಗಳ ಮಾತನ್ನು ಮೀರಿ ಈಗ ಸಂಧಾನದ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿಗಳು ತಿಳಿಸಿದಂತೆ ಮೊದಲು ಅವರು ಕರ್ತವ್ಯಕ್ಕೆ ಹಾಜರಾಗಲಿ” ಎಂದು ಅವರು ತಿಳಿಸಿದ್ದಾರೆ. ಆದರೆ ಇದನ್ನು ತಿರುಚಿ ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು ಸರಿಯಲ್ಲ. ಕಾಲ ಇನ್ನೂ ಮಿಂಚಿಲ್ಲ. ಎಲ್ಲಾ ಸಾರಿಗೆ ನೌಕರ ಬಂಧುಗಳೂ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.

ಇದು ಕೋವಿಡ್ ಸಂಕಷ್ಟದ ಕಾಲ. ಮುಷ್ಕರದ ಕಾಲವಲ್ಲ. ಪ್ರಸ್ತುತ ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿರುವ ಕೋವಿಡ್ 2ನೇ ಅಲೆಯ ತೀವ್ರ ಅಪಾಯದ ನಡುವೆಯೂ ನಮ್ಮ ಸಾರಿಗೆ ನೌಕರ ಮಿತ್ರರು ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಮತ್ತು ನೌಕರರ ಹಿತದೃಷ್ಟಿಯಿಂದಲೂ ಸೂಕ್ತವಲ್ಲ.  ಕಳೆದ ವರ್ಷ ಕೋವಿಡ್ ಸಮಸ್ಯೆ ಉಲ್ಬಣವಾದಾಗ ನಮ್ಮ ಸಾರಿಗೆ ನೌಕರರೂ ಸಹ ಕೊರೋನಾ ವಾರಿಯರ್ಸ್‍ಗಳಾಗಿ ಹಗಲಿರುಳೂ ಕೆಲಸ ಮಾಡಿದ್ದನ್ನು ಯಾರೂ ಮರೆತಿಲ್ಲ. ಸರ್ಕಾರವೂ ಈ ಸೇವೆಯನ್ನು ಗೌರವಿಸಿ ಸಾರಿಗೆ ನೌಕರರ ಸಂಕಷ್ಟಗಳಿಗೆ ಸ್ಪಂದಿಸಿತ್ತು.  ಆದರೆ ಈಗ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ಅದೇ ರೀತಿ ಕೊರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರೂ ಮುಷ್ಕರದ ಕಾರಣದಿಂದ ಇದೇ ಸಾರಿಗೆ ನೌಕರರಿಗೆ ಕೆಟ್ಟ ಹೆಸರು ಬರುವಂತಾಗಿ ಅವರ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗದೇ ಬಸ್ಸುಗಳ ಸುಗಮ ಸಂಚಾರಕ್ಕೆ ಕೈಜೊಡಿಸುವ ಮೂಲಕ ಮತ್ತೊಮ್ಮೆ ತಾವು ಸಾರ್ವಜನಿಕ ಸ್ನೇಹಿ ನೌಕರರು ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ. ಆದ್ದರಿಂದ ಕೂಡಲೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಕೋವಿಡ್ ಮಹಾಮಾರಿಯ ಪಿಡುಗಿನಿಂದ ಜನಜೀವನ ತತ್ತರಿಸಿ ಹೋಗುತ್ತಿರುವ ದೃಶ್ಯ ನಮ್ಮ ಕಣ್ಮುಂದೆಯೇ ಇದೆ. ಇಂಥ ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಹೆಚ್ಚಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರಿ ಸಾರಿಗೆ ಸೇವೆಯ ಅಗತ್ಯ ತೀರಾ ಹೆಚ್ಚಾಗಿರುತ್ತದೆ. ಆದಾಗ್ಯೂ 13ನೆಯ ದಿನದವರೆಗೂ ಈ ಮುಷ್ಕರವನ್ನು ಮುಂದುವರೆಸಿರುವುದು ಎಷ್ಟರ ಮಟ್ಟಿಗೆ ಸರಿ?ಈ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ. ಸರ್ಕಾರದ ಈ ಪ್ರಯತ್ನಕ್ಕೆ ಅನೇಕ ಇಲಾಖೆಗಳ ಸಿಬ್ಬಂದಿಗಳು ಕೈಜೋಡಿಸಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಮ್ಮ ಸಾರಿಗೆ ನಿಗಮಗಳ ನೌಕರರು ಮಾತ್ರ ಇಂಥ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲೂ ಈ ರೀತಿ ಮುಷ್ಕರ ನಿರತರಾದರೆ ಅವರಿಗೆ ಇದು ದೊಡ್ಡ ಕಪ್ಪು ಚುಕ್ಕೆಯಾಗುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಇನ್ನುಳಿದ ಒಂದು ಬೇಡಿಕೆಯಾದ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಮೇ-04 ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆಯು ಮುಗಿದ ನಂತರ ವೇತನ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಮತ್ತೊಮ್ಮೆ ಸಾರಿಗೆ ನೌಕರ ಮಿತ್ರರಿಗೆ ತಿಳಿಸ ಬಯಸುತ್ತೇನೆ ಎಂದೇಳಿದ್ದಾರೆ.

ಇದನ್ನು ಓದಿ: Karnataka Covid: ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲ; ರಾತ್ರಿ ಕರ್ಫ್ಯೂ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಹಿಂಸಾ ಕೃತ್ಯಗಳಿಂದ ಬೇಡಿಕೆ ಈಡೇರುವುದಿಲ್ಲ. ಪ್ರಸ್ತುತ ಸಹಸ್ರಾರು ಮಂದಿ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.  ಇದರ ಫಲಶೃತಿಯಾಗಿ ಈಗ ಪ್ರತಿನಿತ್ಯವೂ ಸುಮಾರು 7 ಸಾವಿರ ಸರ್ಕಾರಿ ಬಸ್ಸುಗಳು ಸಂಚರಿಸುವಂತಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳೂ ಸಂಚಾರ ಸೇವೆಗೆ ಲಭ್ಯವಾಗಿ ಒಟ್ಟಾರೆ ಬಸ್ಸುಗಳ ಸಂಚಾರದ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕೆಲವು ಮುಷ್ಕರ ನಿರತರ ಮುಖಂಡರು ಹತಾಶರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಪ್ರಚೋದಿಸುತ್ತಿರುವುದು ಖಂಡನೀಯ.  ಈಗಾಗಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪ ನಿಷ್ಠಾವಂತ ಚಾಲಕರಾಗಿದ್ದ ಅವಟಿ ಅವರು ಕರ್ತವ್ಯದಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಅವರ ಜೀವವನ್ನೇ ಬಲಿ ತೆಗೆದುಕೊಂಡಿದ್ದು ಅತ್ಯಂತ ಹೀನ ಘಟನೆಯಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟಕ್ಕೀಡಾದ ಅವಟಿ ಅವರ ಕುಟುಂಬಸ್ಥರಿಗೆ ಈಗಾಗಲೇ 30 ಲಕ್ಷ ರೂಪಾಯಿ ಪರಿಹಾರ ನೀಡಿದ್ದಲ್ಲದೇ, ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸೂಕ್ತ ಉದ್ಯೋಗವನ್ನು ನಮ್ಮ ಸಾರಿಗೆ ನಿಗಮದಲ್ಲೇ ಕಲ್ಪಿಸಲು ಸೂಚಿಸಿದ್ದೇನೆ. ಈ ಮುಷ್ಕರದ ನೆಪದಲ್ಲಿ ಈಗಾಗಲೇ ಒಟ್ಟು 110ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರಿಗೆ ನಿಗಮಗಳಿಗೆ ಅಪಾರ ಹಾನಿ ಉಂಟು ಮಾಡಲಾಗಿದೆ. ಇಂದು ಕೂಡ ಕೆ.ಎಸ್.ಆರ್.ಟಿ.ಸಿ.ಯ 3 ಬಸ್ಸುಗಳಿಗೆ ಕನಕಪುರ-ಹಾರೋಹಳ್ಳಿ ಮಾರ್ಗದಲ್ಲಿ ಕಲ್ಲು ಹೊಡೆದು, ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು ತೀವ್ರ ಖಂಡನೀಯ ಎಂದು ವಿಷಾದ ವ್ಯಕ್ತಪಡಿಸಿದರು.
Youtube Video
ಮುಷ್ಕರದ ನೆಪದಲ್ಲಿ ಕೆಲವರು ನೌಕರ ವರ್ಗದವರಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸಿ ಸರ್ಕಾರದ ವಿರುದ್ಧ ಹಾಗೂ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ನಮ್ಮ ಸಾರಿಗೆ ನೌಕರರ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಈ ರೀತಿಯ ಕಾನೂನುಬಾಹಿರ ಕೃತ್ಯಗಳಿಗೆ ಮುಂದಾಗುವವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Published by: HR Ramesh
First published: April 19, 2021, 9:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories