ಬೆಂಗಳೂರಿನಲ್ಲಿ ಅಕ್ರಮ ವಲಸಿಗರದ್ದು ಭಾರೀ ಸಮಸ್ಯೆ ಇದೆ, ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ತಾರೆ; ಗೃಹ ಸಚಿವ ಅರಗ ಜ್ಞಾನೇಂದ್ರ

ಅಕ್ರಮ ವಲಸಿಗರು ಉದ್ದೇಶಪೂರ್ವಕವಾಗಿ ಕೇಸ್ ಹಾಕಿಸಿಕೊಳ್ಳುತ್ತಾರೆ. ಕೇಸು ಪೂರ್ಣಗೊಳ್ಳಲು ತಡವಾಗುವ ಕಾರಣಕ್ಕೆ ಅವರು ಹೊರ ಹೋಗುವಂತಿಲ್ಲ. ಬೆಂಗಳೂರಿನಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆದಿದ್ದು, ಸಮಸ್ಯೆ ಪರಿಹಾರಕ್ಕೆ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

  • Share this:
ಚಿಕ್ಕಮಗಳೂರು: ಬೆಂಗಳೂರಲ್ಲಿ ಅಕ್ರಮ ವಲಸಿಗರ ಸಮಸ್ಯೆ ಎದುರಾಗಿದ್ದು, ಅವರನ್ನ ಹೊರಕಳಿಸುವ ಪ್ರಯತ್ನ ನಡೀತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಸಚಿವರು, ಅಕ್ರಮ ವಲಸಿಗರು ಇಲ್ಲೇ ನೆಲೆಸಬೇಕು ಎಂಬ ಉದ್ದೇಶದಿಂದ ಬೇಕೆಂದೇ ಸಣ್ಣ ಪುಟ್ಟ ಕೇಸ್ ಹಾಕಿಸಿಕೊಳ್ತಾರೆ. ಕೇಸ್ ಮುಗಿಯುವವರೆಗೂ ಹೊರಗೆ ಹೋಗೋ ಹಾಗಿಲ್ಲ. ಇಲ್ಲಿ ನೆಲೆಸುವ ಪ್ರಯತ್ನ ಮಾಡ್ತಿದ್ದಾರೆ. ವೀಸಾ ಅವಧಿ ಮುಗಿದಿರುವವರನ್ನ ಅರೆಸ್ಟ್ ಮಾಡಬೇಕು. ಇಲ್ಲಾ ಹೊರ ದೂಡಬೇಕು. ಇದನ್ನ ವಿಶೇಷವಾಗಿ ಹೇಳಿದ್ದೀನಿ. ಬೆಂಗಳೂರಲ್ಲಿ ಇದು ದೊಡ್ಡ ಸಮಸ್ಯೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶಾದ್ಯಂತ ಇತ್ತೀಚೆಗೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಅಪರಾಧ ಮಾಡುವವರಿಗಿಂತ ಅಪರಾಧಿಗಳನ್ನು ಪತ್ತೆ ಹಚ್ಚುವ ಪೊಲೀಸ್ ಇಲಾಖೆ ಮುಂದಿರಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಿರುವ  ಉಪಕರಣಗಳನ್ನು ಒದಗಿಸುವುದರೊಂದಿಗೆ ಇಲಾಖೆಯನ್ನು ತಾಂತ್ರಿಕವಾಗಿ ಬಲಪಡಿಸುವ ಮತ್ತು ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವ ತರಬೇತಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪ್ರೆಸ್‍ಕ್ಲಬ್‍ನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಎಲ್ಲಾ ರೀತಿ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತದೆ. ಪ್ರಾಮಾಣಿಕ ಪೊಲೀಸರು ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ರಕ್ಷಣೆಯೊಂದಿಗೆ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯನ್ನು ತಾಂತ್ರಿಕವಾಗಿ ಬಲಪಡಿಸಲು ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.

ಅಕ್ರಮ ವಲಸಿಗರ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಅಕ್ರಮ ವಲಸಿಗರು ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲೂ ತೊಡಗಿದ್ದಾರೆ. ಇವರನ್ನು ಹೊರ ದೂಡುವ ಸಂದರ್ಭದಲ್ಲಿ ಅಕ್ರಮ ವಲಸಿಗರು ಉದ್ದೇಶಪೂರ್ವಕವಾಗಿ ಕೇಸ್ ಹಾಕಿಸಿಕೊಳ್ಳುತ್ತಾರೆ. ಕೇಸು ಪೂರ್ಣಗೊಳ್ಳಲು ತಡವಾಗುವ ಕಾರಣಕ್ಕೆ ಅವರು ಹೊರ ಹೋಗುವಂತಿಲ್ಲ. ಬೆಂಗಳೂರಿನಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆದಿದ್ದು, ಸಮಸ್ಯೆ ಪರಿಹಾರಕ್ಕೆ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ರಾಜ್ಯದಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗೃಹ ಸಚಿವನಾಗಿ ಇಲಾಖೆಯೊಳಗಿರುವ ಬೇರೆ ಬೇರೆ ಘಟಕಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಹಿರಿಯ ಅಧಿಕಾರಿಗಳ ಜೊತೆ ಅನೇಕ ಸಭೆ ಮಾಡಿದ್ದೇನೆ. ಇಲಾಖೆಯ ಸುಧಾರಣೆ ನಿಟ್ಟಿನಲ್ಲಿ ನನಗೆ ನನ್ನದೇಯಾದ ಕಲ್ಪನೆಗಳಿವೆ. ಇಲಾಖೆಯ ಸುಧಾರಣೆ ಜೊತೆ ಪೊಲೀಸ್ ಇಲಾಖೆಗೆ ಬಲ ತುಂಬುವ ಪ್ರಯತ್ನ ಮಾಡುತ್ತೇನೆ. ಸಿಎಂ ಬೊಮ್ಮಾಯಿ ಅವರೇ ಕಳೆದ ಬಾರಿ ಗೃಹಸಚಿವರಾಗಿ ಸಾಕಷ್ಟು ಹಣಕಾಸು ನೆರವನ್ನು ನೀಡಿದ್ದು, ಈ ಬಾರಿಯೂ ಇಲಾಖೆಗೆ ಶಕ್ತಿ ತುಂಬಲು ಅವರು ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಪ್ರೀತಿಸಿದ ಯುವತಿಯ ಜೊತೆಗಿದ್ದ ಖಾಸಗಿ ದೃಶ್ಯ ಸೆರೆ ಹಿಡಿದು ಬೆದರಿಕೆ; ಯುವಕ ಆತ್ಮಹತ್ಯೆ

ಪೊಲೀಸರ ಉತ್ತಮ ಕಾರ್ಯನಿರ್ವಹಣೆಗೆ ಅಧಿಕಾರಿ, ಸಿಬ್ಬಂದಿ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಿದೆ. ಇಲಾಖೆ ಸಿಬ್ಬಂದಿಗೆ ವಸತಿಗೃಹಗಳ ಕೊರತೆ ಇತ್ತು. ಸದ್ಯ ಶೇ.48ರಷ್ಟು ವಸತಿ ಸೌಲಭ್ಯವನ್ನು ಇಲಾಖೆ ಸಿಬ್ಬಂದಿಗೆ ಕಲ್ಪಿಸಲಾಗಿದ್ದು, ಇದನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಪೊಲೀಸರಿಗೆ ನೀಡುತ್ತಿದ್ದ ಭತ್ಯೆಯನ್ನು ಹೆಚ್ಚಿಸಲಾಗಿದೆ. ಎರಡು ಪಾಳಿ ಇದ್ದ ಕೆಲವನ್ನು ಮೂರು ಪಾಳಿಗೆ ಹೆಚ್ಚಿಸಿ ಕೆಲಸದ ಒತ್ತಡವನ್ನು ಕಡಿಮೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರ ನೇಮಕಕ್ಕೆ ಕ್ರಮವಹಿಸಲಾಗುತ್ತಿದೆ. ಒಟ್ಟಾರೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕೆಲಸದ ಒತ್ತಡವಿಲ್ಲದಂತೆ ಕಾರ್ಯನಿರ್ವಹಿಸಲು ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು ಎಂದರು.

ಈ ವೇಳೆ ಶಾಸಕರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಜಿಲ್ಲಾಧಿಕಾರಿ ರಮೇಶ್, ಎಸ್ಪಿ ಅಕ್ಷಯ್, ಎಡಿಸಿ ರೂಪಾ, ಜಿಪಂ ಸಿಇಒ ಜಿ.ಪ್ರಭು, ಎಸಿ ಡಾ.ನಾಗರಾಜ್ ಉಪಸ್ಥಿತರಿದ್ದರು.
Published by:HR Ramesh
First published: