ಇಲ್ಲಿ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ನೀರು ಸಿಗುತ್ತೆ; ಸನ್ಮಾರ್ಗ ಗೆಳೆಯರ ಬಳಗದ ಕಾರ್ಯಕ್ಕೆ ಮೆಚ್ಚುಗೆ

news18
Updated:April 9, 2018, 11:45 PM IST
ಇಲ್ಲಿ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ನೀರು ಸಿಗುತ್ತೆ; ಸನ್ಮಾರ್ಗ ಗೆಳೆಯರ ಬಳಗದ ಕಾರ್ಯಕ್ಕೆ ಮೆಚ್ಚುಗೆ
news18
Updated: April 9, 2018, 11:45 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಏ.09 ):  ಬೇಸಿಗೆ ಬಂತಂದ್ರೆ ಸಾಕು ಎಷ್ಟು ನೀರು ಕುಡಿದರೂ ದಾಹ ತಣಿಯೋದೇ ಇಲ್ಲ. ಸ್ಲೀಪರ್, ಎಸಿ ಬಸ್ ನಲ್ಲಿ ಕುಡಿಯಲು ನೀರಿನ ಬಾಟಲ್ ಸಿಗುತ್ತೆ. ಅಪ್ಪಿತಪ್ಪಿ ನೀವು ಸಾಮಾನ್ಯ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಹತ್ತು ನಿಮಿಷ ನೀರು ಕುಡಿಯದೇ ಹೋದ್ರೆ ಪ್ರಾಣನೇ ಹೋಗುತ್ತೆ ಎಂದನಿಸುತ್ತೆ. ಆದರೆ ಗಣಿನಾಡು ಬಳ್ಳಾರಿಯ ಗ್ರಾಮಾಂತರ ಬಸ್ ಗಳಲ್ಲಿ ಪ್ರಯಾಣಿಸಿದ್ರೆ ನಿಮಗೆ ಆ ಕಷ್ಟ ಅನುಭವಿಸಲ್ಲ. ಬೆಂಕಿಯಂಥ ಬಿಸಿಲಿನಲ್ಲಿ ಬಳಲಿ ಬಂದ ಪ್ರಯಾಣಿಕರಿಗೆ ತಮ್ಮೂರಿನ ಸಾರಿಗೆ ಬಸ್ ನಲ್ಲಿ ತಣ್ಣನೆಯ ನೀರಿನ ವ್ಯವಸ್ಥೆ ಉಚಿತವಾಗಿ ಸಿಗುತ್ತೆ.

ಬಳ್ಳಾರಿ ಜಿಲ್ಲೆ ಹೇಳಿಕೇಳಿ ಬಿಸಿಲೂರು. ಇಲ್ಲಿ ಬಿರುಬಿಸಿಲಿಗೆ ಜನರು ಹತ್ತು ನಿಮಿಷಕ್ಕೊಮ್ಮೆಯಾದ್ರೂ ನೀರು ಕುಡಿಯದೇ ಹೋದರೆ ಚಡಪಡಿಸುತ್ತಾರೆ. ಅದರಲ್ಲೂ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರು ನೀರಿನ ಬಾಟಲ್ ತೆಗೆದುಕೊಂಡು ಹೋಗದೇ ಹೋದರೆ ಅವರ ಪರಿಸ್ಥಿತಿ ದೇವರಿಗೇ ಪ್ರೀತಿ. ಸಾರಿಗೆ ಬಸ್ ಗಳಲ್ಲಿ ನೀರಿಲ್ಲದೇ ಪರದಾಡುವ ಕಷ್ಟವನ್ನು ಅರಿತು ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ನಿತ್ಯ ಕುಡಿವ ನೀರಿನ ಕ್ಯಾನ್​ಗಳ ವ್ಯವಸ್ಥೆ ಮಾಡಿದೆ.

ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಹೋಗುವ ಕಪ್ಪಗಲ್, ಸಿರಿವಾರ, ಚಾಗನೂರ್ ಸೇರಿದಂತೆ ಹಲವು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಿದ ನೀರಿನ ಕ್ಯಾನ್ ವ್ಯವಸ್ಥೆ ಮಾಡಲಾಗಿದೆ. ಬಸ್ ಡ್ರೈವರ್ ಸೀಟ್ ಪಕ್ಕದಲ್ಲಿ 25 ಲೀಟರ್ ಕುಡಿಯುವ ನೀರಿನ ಬಾಟೆಲ್ ಕಾಣಸಿಗುತ್ತೆ. ಬಸ್ ಮುಂಭಾಗದಲ್ಲಿ ನೀರಿನ ವ್ಯವಸ್ಥೆಯಿದೆ ಎಂಬ ಬೋರ್ಡ್ ಹಾಕಲಾಗಿದೆ.

ಈ ಬೋರ್ಡ್ ನೋಡಿ ಅದೆಷ್ಟೋ ಜನ ಬಳ್ಳಾರಿಯಲ್ಲಿ ಬಸ್ ಹತ್ತುತ್ತಿದ್ದಾರೆ. ಇಂಥ ಸರ್ಕಾರಿ ಬಸ್ಗಳಲ್ಲಿ ಶುದ್ಧ ಕುಡಿವನೀರಿನ ವ್ಯವಸ್ಥೆ ಮಾಡಿರುವ ಸನ್ಮಾರ್ಗ ಗೆಳೆಯರ ಬಳಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಕಳೆದೆರಡು ವರುಷಗಳ ಹಿಂದೆ ಪ್ರಾಥಮಿಕ ಹಂತದಲ್ಲಿ ಬಳ್ಳಾರಿ ಗ್ರಾಮಾಂತರ ಪ್ರದೇಶದ ಆಸಕ್ತ ಬಸ್ ಚಾಲಕ-ನಿರ್ವಾಹಕರ ಮೇರೆಗೆ ನೀರಿನ ಟ್ಯಾಂಕ್ ಇಡಲಾಗಿತ್ತು. ಪ್ರಾಯೋಗಿಕವಾಗಿ ಇದು ಯಶಸ್ಸು ಕಂಡ ಹಿನ್ನೆಲೆ ಮೂರನೇ ವರುಷ ಬೇಸಿಗೆ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಎಲ್ಲ ಸಾರಿಗೆ ಬಸ್ ಗಳಲ್ಲು ಬಸ್ ಚಾಲಕ-ನಿರ್ವಾಹಕರ ನೆರವಿನೊಂದಿಗೆ ಬಸ್ ನಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ.

ಕೆಲವೊಂದು ನಿಗಧಿತ ಪಾಯಿಂಟ್ ಗಳಲ್ಲಿ ಬಸ್ ಕ್ಯಾನ್ ಗಳಲ್ಲಿ ನೀರು ತುಂಬಿಸಲಾಗುತ್ತಿದೆ. ಈ ಬಾರಿ ಗಂಗಾವತಿ, ಹೊಸಹಳ್ಳಿ, ವಿಠಲಾಪುರ, ಉಡೇಗೋಳ, ಶಿರಿಗೇರಿ, ಕೂರಿಗನೂರು, ಚನ್ನಪಟ್ಟಣ, ಅಸುಂಡಿ, ಹರಗಿನಡೋಣಿ ಹಾಗೂ ದೂರದ ಆಂದ್ರಪ್ರದೇಶಕ್ಕೆ ತೆರಳುವ ಹೈದ್ರಾಬಾದ್, ಶ್ರೀಶೈಲ, ಕರ್ನೂಲ್ ಸೇರಿದಂತೆ ಒಟ್ಟು ೬೦ಕ್ಕೂ ಹೆಚ್ಚು ಸಾರಿಗೆ ಬಸ್ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಪಂಪಾಪತಿ ತಿಳಿಸುತ್ತಾರೆ.
Loading...ಪ್ರಯಾಣಿಕರ ದಾಹವನ್ನು ನೀಗಿಸಲು ಸಾರಿಗೆ ಇಲಾಖೆಯ ಚಾಲಕ-ನಿರ್ವಾಹಕರು ಟ್ಯಾಂಕರ್ ನಿರ್ವಹಣೆಗೆ ಆಸಕ್ತಿ ತೋರುತ್ತಿದ್ದಾರೆ. ನೀರನ್ನು ಪೋಲುಮಾಡದೆ ಮಿತ ಬಳಕೆಯ ಬಗ್ಗೆ ಹಾಗು ನೀರಿನ ಬಳಕೆ, ಅದರ ಅಗತ್ಯತೆಯ ಕುರಿತು ಮಾಡುತ್ತಿರುವ ಸನ್ಮಾರ್ಗ ಗೆಳೆಯರ ಬಳಗ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
First published:April 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...