ಪುತ್ತೂರು (ಮೇ 9): ಕಾಶಿಯಿಂದಲೇ ತೀರ್ಥ ಹರಿದು ಬರುತ್ತಿದೆ ಎನ್ನುವ ನಂಬಿಕೆಯ ವಿಭಿನ್ನ ತೀರ್ಥಸ್ನಾನವೊಂದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಎಂಬಲ್ಲಿದೆ. ಪಾರ್ಪಿಕಲ್ಲುವಿನಲ್ಲಿರುವ ಅಮವಾಸ್ಯೆ ಗುಂಡಿ (Amavase Gundi) ಎನ್ನುವ ಈ ಹೊಂಡವು ಬೆಳ್ತಂಗಡಿ (Beltangadi) ತಾಲೂಕಿನ ಪವಿತ್ರ ನದಿಯೆಂದೇ ಗುರುತಿಸಿಕೊಂಡಿರುವ ಕಪಿಲಾ ನದಿಯ (Kapila River) ಒಡಲಲ್ಲಿದೆ. ಪವಿತ್ರ (Sacred) ಗುಂಡಿ ಎನ್ನುವ ಕಾರಣಕ್ಕೆ ಈ ಗುಂಡಿಯಲ್ಲಿ ಭಕ್ತಾಧಿಗಳಿಗೆ ವರ್ಷಕ್ಕೆ ಒಂದು ಬಾರಿ ತೀರ್ಥಸ್ನಾನಕ್ಕೆ ಅವಕಾಶವನ್ನು ನೀಡಲಾಗಿದೆ.
ತೀರ್ಥ ಸ್ನಾನದ ಅಮಾವಾಸ್ಯೆ ಗುಂಡಿ
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಧರ್ಮಸ್ಥಳಕ್ಕೆ ಹೋಗುವ ದಾರಿಯ ಪಾರ್ಪಿಕಲ್ ಎಂಬಲ್ಲಿ ಪವಿತ್ರ ನದಿ ಕಪಿಲೆಯು ಹರಿಯುತ್ತಿದ್ದಾಳೆ. ಕಪಿಲೆಯ ಒಡಲಲ್ಲಿದೆ ಈ ತೀರ್ಥ ಸ್ನಾನದ ಅಮಾವಾಸ್ಯೆ ಗುಂಡಿ. ಬಾವಿ ಆಕಾರದಲ್ಲಿ ಕಾಣುವ ಈ ಗುಂಡಿಯ ಆಳ ನಿಗೂಡ. ನದಿ ಪ್ರದೇಶದಲ್ಲಿ ನದಿ ನೀರು ಇಲ್ಲಿ ಜಲಪಾತದಂತೆ ಬೀಳುತ್ತದೆ. ಘಟ್ಟ ಪ್ರದೇಶದಲ್ಲಿ ಹುಟ್ಟಿ ಹರಿಯುವ ಕಪಿಲೆಯ ನೀರು ಅತ್ಯಂತ ಶುಭ್ರವಾಗಿ ಈ ಭಾಗದಲ್ಲಿ ಹರಿಯುತ್ತಿದ್ದು, ಈ ಕಪಿಲೆ ನದಿಯ ಒಡಲಲ್ಲಿ ಅತ್ಯಂತ ವಿಶಿಷ್ಟವಾದ ಹಾಗೂ ಆಕರ್ಷಕವಾದ ಕಲ್ಲುಗಳೂ ಇದ್ದು, ಈ ಕಲ್ಲುಗಳನ್ನು ಸ್ಥಳೀಯ ಜನ ಒಂದೊಂದು ಹೆಸರಿನಿಂದ ಕರೆಯುತ್ತಾರೆ.
ತೀರ್ಥ ಸ್ಥಾನದ ಹಿನ್ನೆಲೆ ಎಲ್ಲಾ ವ್ಯವಸ್ಥೆ
ಆನೆಕಲ್ಲು, ಕುದುರೆ ಕಲ್ಲು ಎಂಬ ಹೆಸರಿನಿಂದ ಈ ಕಲ್ಲುಗಳು ಕರೆಯಲಾಗುತ್ತಿದ್ದು, ಈ ಕಲ್ಲುಗಳ ಜೊತೆ , ಆಳವಾದ ಹೊಂಡಾದ ಬಳಿ ಜಾರುವ ಕಲ್ಲುಗಳು ಇರುವುದರಿಂದ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ತೀರ್ಥ ಸ್ನಾನದ ಹಿನ್ನೆಲೆ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮವನ್ನು ಕೈಗೊಂಡು ಪವಿತ್ರ ಸ್ನಾನವನ್ನು ಮಾಡಲಾಗುತ್ತದೆ. ಜಾತಿ ಲಿಂಗಭೇದವಿಲ್ಲದೆ ಇಲ್ಲಿ ತೀರ್ಥಸ್ನಾನ ಮಾಡುವುದು ಜನರ ನಂಬಿಕೆಯಾಗಿ ನೂರಾರು ವರ್ಷಗಳ ಕಾಲದಿಂದ ನಡೆಯುತ್ತಾ ಬಂದಿದೆ.
ಇದನ್ನೂ ಓದಿ: Mango Price: ಈ ಬಾರಿ ಮಾವಿನ ಹಣ್ಣು ಬಲು ದುಬಾರಿ; ರೇಟ್ ಕೇಳಿ ಶಾಕ್ ಆಗ್ತಿದ್ದಾನೆ ಗ್ರಾಹಕ
ಮೇಷ ಮಾಸದ ಅಮಾವಾಸ್ಯೆಯ ದಿನ
ಮೇಷ ಮಾಸದ ಅಮಾವಾಸ್ಯೆಯ ದಿನ ಈ ಪ್ರದೇಶದಲ್ಲಿ ಪಾಳಂದೆ ಎನ್ನುವ ಮನೆತನದವರು ಗಂಗಾಪೂಜೆಯನ್ನು ಮಾಡಿ ಬಳಿಕ ಅಣತಿ ದೂರದಲ್ಲಿರುವ ಕೆರೆಕಂಡ ಹಾಗೂ ಸಣ್ಣಕಂಡ ಎನ್ನುವ ಜಾಗದಲ್ಲಿ ಇರುವ ನೆತ್ತರಮುಗುಳಿ ಎನ್ನುವ ದೈವಕ್ಕೆ ಇಲ್ಲಿನ ಮೊದಲ ತೀರ್ಥವನ್ನು ಅರ್ಪಿಸಲಾಗುತ್ತದೆ. ನೆತ್ತರಮುಗುಳಿ ದೈವಕ್ಕೆ ಅಮಾವಾಸ್ಯೆ ಗುಂಡಿ ಸಂಬಂಧಪಟ್ಟ ಹಿನ್ನಲೆಯಲ್ಲಿ ಈ ಗುಂಡಿಯಿಂದ ತೆಗೆದ ಮೊದಲ ತೀರ್ಥವನ್ನು ದೈವಕ್ಕೆ ಅರ್ಪಿಸುವ ಸಂಪ್ರದಾಯ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ನೆತ್ತರ ಮುಗುಳಿ ದೈವದ ಆರಾಧನಾ ಸ್ಥಳ
ಪಾಳಂಬೆ ಮನೆತನದ ಜನಾರ್ದನ ಗೌಡರ ಜಾಗದಲ್ಲಿರುವ ನೆತ್ತರ ಮುಗುಳಿ ದೈವದ ಆರಾಧನಾ ಸ್ಥಳವಿದೆ. ಮೊದಲ ತೀರ್ಥ ದೈವಕ್ಕೆ ಸಮರ್ಪಿಸಿದ ಬಳಿಕ ಗುಂಡಿಯಿಂದ ನೀರು ತೆಗೆದು ಭಕ್ತಾಧಿಗಳು ತೀರ್ಥಸ್ನಾನ ಮಾಡಲು ಅವಕಾಶವನ್ನು ನೀಡಲಾಗುತ್ತದೆ. ಕೇವಲ ತೀರ್ಥಸ್ನಾನ ಮಾಡುವುದಲ್ಲದೆ, ಬಂದ ಭಕ್ತಾಧಿಗಳು ಇಲ್ಲಿನ ನೀರನ್ನು ತಮ್ಮ ತಮ್ಮ ಮನೆಗಳಿಗೂ ಇಲ್ಲಿನ ತೀರ್ಥ ರೂಪದಲ್ಲೂ ಕೊಂಡೊಯ್ಯುತ್ತಾರೆ.
ಅಮಾವಾಸ್ಯೆ ದಿನ ಗಂಗಾ ಪೂಜೆ
ಊರ ಭಕ್ತರು ಪಾರ್ಪಿ ಕಲ್ಲಿನಲ್ಲಿರುವ ಈ ಅಮಾವಾಸ್ಯೆ ಗುಂಡಿಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಾರೆ. ಬಳಿಕ ಕೊಕ್ಕಡದ ಇತಿಹಾಸ ಪ್ರಸಿದ್ಧ ಧನ್ವಂತರಿ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಅರ್ಚಕರು ಗಂಗಾ ಪೂಜೆಯನ್ನು ಮಾಡಿ ಇಲ್ಲಿನ ನೀರನ್ನು ಗಡಿಗೆಯಲ್ಲಿ ತುಂಬಿ ಕಾಲ್ನಡಿಗೆಯ ಮೂಲಕವೇ ದೇವಳಕ್ಕೆ ತರುತ್ತಾರೆ. ಇಲ್ಲಿ ಶ್ರೀ ವೈದ್ಯನಾಥೇಶ್ವರನಿಗೆ ಆ ನೀರಿನಿಂದಲೇ ಅಭಿಷೇಕವನ್ನು ಮಾಡುತ್ತಾರೆ.
ಇದನ್ನೂ ಓದಿ: PSI Recruitment Scam: ಅಕ್ರಮವಾಗಿ ಎಕ್ಸಾಂ ಬರೆದು ಸಕ್ಸಸ್ ಆಗಿದ್ದಕ್ಕೆ ಫೋಟೋಶೂಟ್, ಸಿಬ್ಬಂದಿಗೆ 4000 ಕೊಟ್ಟ ದಿವ್ಯಾ ಹಾಗರಗಿ
ಭಕ್ತರಿಂದ ತೀರ್ಥ ಸ್ನಾನ
ಬಳಿಕ ಈ ಅಭಿಷೇಕದ ನೀರನ್ನು ತೀರ್ಥವಾಗಿ ಭಕ್ತಾದಿಗಳು ಸ್ವೀಕರಿಸುತ್ತಾರೆ.
ಕೊಕ್ಕಡ ದೇವರ ಅಭಿಷೇಕಕ್ಕೆ ಎಂದು ನೀರನ್ನು ತೆಗೆದ ಬಳಿಕ ಮತ್ಯಾರು ಅಮಾವಾಸ್ಯೆ ಗುಂಡಿಯಲ್ಲಿ ಸ್ನಾನ ಮಾಡುವ ಹಾಗಿಲ್ಲ. ವರ್ಷಕ್ಕೆ ಒಂದೇ ಬಾರಿ ಈ ಗುಂಡಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶವಿರುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇತ್ತೀಚಿನ ದಿನಗಳಲ್ಲಿ ತೀರ್ಥ ಸ್ನಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೊಕ್ಕಡ ಜಾತ್ರೆಯ ವೇಳೆ ದೇವರು ಅಮಾವಾಸ್ಯೆ ಗುಂಡಿಯ ಸಮೀಪದಲ್ಲೇ ಅವಭೃತರಾಗುವ ಕಾರಣ ಸ್ಥಳದ ಮಹಿಮೆಯನ್ನು ಇಮ್ಮಡಿಗೊಳಿಸಿದೆ. ಅಮಾವಾಸ್ಯೆ ಗುಂಡಿಯಲ್ಲದೆ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯುವ ಜೊತೆಗೆ ಕಪಿಲೆಯು ಎತ್ತರದ ಬಂಡೆಗಳ ಮೂಲಕ ಹರಿಯುವಾಗ ನಿರ್ಮಾಣಗೊಳ್ಳುವ ಸಣ್ಣಪುಟ್ಟ ಜಲಪಾತಗಳೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ