ಕೊರೋನಾ ಸೋಂಕಿತ ಮೃತಪಟ್ಟ 16 ತಾಸು ಬಳಿಕವು ವೈರಸ್ ಜೀವಂತ: ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್

ಕೊರೋನಾ ಸೋಂಕಿನಿಂದ ಮೃತಪಟ್ಟ ರೋಗಿಯ ಜೊತೆ ವೈರಸ್ ಸಾಯುವುದಿಲ್ಲ. ರೋಗಿಗೆ ಸಾವು ಸಂಭವಿಸಿದ ನಂತರ 16 ಗಂಟೆಗಳ ವರೆಗೆ ಕೊರೋನಾ ವೈರಾಣು ರೋಗಿಯ ದೇಹದಲ್ಲಿ ಜೀವಂತವಾಗಿರುತ್ತದೆ.

news18-kannada
Updated:October 22, 2020, 10:34 PM IST
ಕೊರೋನಾ ಸೋಂಕಿತ ಮೃತಪಟ್ಟ 16 ತಾಸು ಬಳಿಕವು ವೈರಸ್ ಜೀವಂತ: ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್
ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್
  • Share this:
ಆನೇಕಲ್(ಅಕ್ಟೋಬರ್​. 22): ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಎಂದಾಕ್ಷಣ ಎಂತಹವರು ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಆದರಲ್ಲೂ ವೈದ್ಯರುಗಳೇ ಕೊರೋನಾ ಪೀಡಿತ ರೋಗಿಗೆ ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಇಲ್ಲೊಬ್ಬ ವಿಧಿ ವಿಜ್ಞಾನ ತಜ್ಞರು ಕೊರೋನಾ ಸೋಂಕಿನಿಂದ ಮೃತಪಟ್ಟ ರೋಗಿಯ ಶವ ಪರೀಕ್ಷೆ ನಡೆಸಿದ್ದಾರೆ. ಜೊತೆಗೆ ಕೊರೋನಾ ಸೋಂಕಿನ ಪರಿಣಾಮ ಗುಣ ಲಕ್ಷಣಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಮುಮ್ ಬಾಲ್ಮಿಂಗ್ ಎಂಬ ನೂತನ ತಂತ್ರಜ್ಞಾನ ಮೂಲಕ ವ್ಯಕ್ತಿಯೊಬ್ಬ ಸತ್ತ ಬಳಿಕ ಆತನ ಶವವನ್ನು ಕೆಡದಂತೆ ರಾಸಾಯನಿಕಗಳ ಉಪಚಾರದಿಂದ ಸಂರಕ್ಷಣೆ ಮಾಡುವಂತಹ ನೂತನ ಆವಿಷ್ಕಾರ ಸಂಶೋಧನೆ ಮಾಡಿದ್ದ ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್ ಇಂದು ಕೊರೋನಾ ಸೋಂಕಿನಿಂದ ಮೃತಪಟ್ಟ ರೋಗಿಯ ಶವ ಪರೀಕ್ಷೆ ನಡೆಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ತಜ್ಞ ವೈದ್ಯರು, ವಿಧಿ ವಿಜ್ಞಾನ ತಜ್ಞರು ಹಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಿದ್ದಾರೆ.

ಜೊತೆಗೆ ಕೊರೋನಾ ವೈರಸ್ ಬಗ್ಗೆ ಸಂಶೋಧನೆ ಸಹ ಮುಂದುವರಿಸಿದ್ದಾರೆ.‌ ಅದರ ಭಾಗವಾಗಿ ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಪರೀಕ್ಷೆ ನಡೆಸಿ ಕೊರೋನಾ ಸೋಂಕಿನಿಂದ ಮನುಷ್ಯ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಮತ್ತಷ್ಟು ಅತಂಕಕಾರಿ ಮತ್ತು ಅಪರೂಪದ ವಿಚಾರಗಳನ್ನು ಪತ್ತೆ ಹಚ್ಚಿದ್ದಾರೆ.

ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್ ಹೇಳುವ ಪ್ರಕಾರ ಕೊರೋನಾ ಸೋಂಕಿನಿಂದ ಮೃತಪಟ್ಟ ರೋಗಿಯ ಜೊತೆ ಕೊರೋನಾ ವೈರಸ್ ಸಾಯುವುದಿಲ್ಲ. ನಾಶವಾಗುವುದಿಲ್ಲ. ರೋಗಿಗೆ ಸಾವು ಸಂಭವಿಸಿದ ನಂತರ 16 ಗಂಟೆಗಳ ವರೆಗೆ ಕೊರೋನಾ ವೈರಾಣು ರೋಗಿಯ ದೇಹದಲ್ಲಿ ಜೀವಂತವಾಗಿರುತ್ತದೆ. ಹಾಗಾಗಿ ಕೊರೋನಾ ಸೋಂಕಿತರು ಸಾವು ಸಂಭವಿಸುದಾಗ ಸಾರ್ವಜನಿಕರಿಗೆ ಕೊರೋನಾ ನಿಯಮದಂತೆ ಶವ ಸಂಸ್ಕಾರ ಮಾಡಬೇಕಿದೆ. ಅದರಲ್ಲೂ ಮೃತ ರೋಗಿಯ ಬಾಯಲ್ಲಿ  ಮತ್ತು ಮೂಗಿನಲ್ಲಿ16 ಗಂಟೆಗಳ ಕಾಲ ಕೊರೋನಾ ವೈರಸ್ ಜೀವಂತವಾಗಿರಯತ್ತದೆ.

ಕೊರೋನಾ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಿಲ್ಲ ಕಿಡ್ನಿ, ಯಕೃತ್, ಹೃದಯ ಮತ್ತು ಮೆದುಳಿಗೂ ಹಾನಿ ಮಾಡುತ್ತದೆ. ಶವ ಪರೀಕ್ಷೆ ವೇಳೆ ಹೃದಯ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಕಂಡು ಬಂದಿದೆ. ಅಲ್ಲದೆ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶ್ವಾಸಕೋಶ ಸ್ಪಂಜಿನಂತೆ ಗಟ್ಟಿಯಾಗಿರುತ್ತದೆ. ಶ್ವಾಸಕೋಶದ ಗಾಳಿಯ ರಂದ್ರಗಳು ಸ್ಫೋಟಗೊಂಡು ರಕ್ತ ಹೆಪ್ಪುಗಟ್ಟುತ್ತದೆ. ವಿಚಿತ್ರವೆಂದರೆ ಕೆಲವೊಮ್ಮೆ ಶ್ವಾಸಕೋಶದಲ್ಲಿ ಕೊರೋನಾ ವೈರಸ್ ಪತ್ತೆಯಾಗುವುದಿಲ್ಲ. ಹಾಗಾಗಿ ಕೊರೋನಾ ಬಗ್ಗೆ ಜನ ಸಾಮಾನ್ಯರು ನಿರ್ಲಕ್ಷ್ಯ ಬೇಡ.

ಕೊರೋನಾ ವ್ಯಾಕ್ಸಿನ್ ಬರುವವರಿಗೆ ಸ್ವಯಂ ಜಾಗ್ರತೆ ಅತಿ ಮುಖ್ಯವಾಗಿದೆ. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, ಸ್ಯಾನಿಟರೈಸ್ ಕಟ್ಟುನಿಟ್ಟಾಗಿ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ 147 ರೂಗೆ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್? 50 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

ಕೊರೋನಾ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಹೋಮ್ ಐಸೋಲೇಷನ್ ಬದಲು ಆಸ್ಪತ್ರೆಯಲ್ಲಿ ವೈದ್ಯರ ನಿಗಾವಣೆಯಲ್ಲಿರಿ ಎಂದು ವಿಧಿ ವಿಜ್ಞಾನ ತಜ್ಞ ದಿನೇಶ್ ರಾವ್ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದಾರೆ.

ಕೊರೋನಾ ವೈರಸ್ ಬಗ್ಗೆ ದಿನ ಕಳೆದಂತೆ ಸಾಕಷ್ಟು ಆತಂಕಕಾರಿ ವಿಚಾರಗಳನ್ನು ದಿನೇಶ್ ರಾವ್ ರಂತಹ ತಜ್ಞ ವೈದ್ಯರು ಹೊರ ಹಾಕುತ್ತಿದ್ದಾರೆ. ಜೊತೆಗೆ ಸಾರ್ವಜನಿಕರಿಗೂ ಎಚ್ಚರಿಕೆ ನೀಡುತ್ತಿದ್ದಾರೆ. ಹಾಗಾಗಿ ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಜನ ಕೊರೋನಾ ವೈರಸ್ ಬಗ್ಗೆ ಅತಿ ಜಾಗೃತೆ ವಹಿಸಬೇಕಾದದ್ದು ಅತಿ ಅವಶ್ಯಕವಾಗಿದೆ.
Published by: G Hareeshkumar
First published: October 22, 2020, 10:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading