• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸ್ವಚ್ಛ ಗ್ರಾಮದಿಂದ ಸದೃಢ ಭಾರತ- ಕಸದಿಂದ ರಸ ತೆಗೆದು ಸ್ವಾವಲಂಭಿಯಾಗುತ್ತಿರುವ ಅಂಚಟಗೇರಿ ಗ್ರಾಮ

ಸ್ವಚ್ಛ ಗ್ರಾಮದಿಂದ ಸದೃಢ ಭಾರತ- ಕಸದಿಂದ ರಸ ತೆಗೆದು ಸ್ವಾವಲಂಭಿಯಾಗುತ್ತಿರುವ ಅಂಚಟಗೇರಿ ಗ್ರಾಮ

ಅಂಚಟಗೇರಿ ಗ್ರಾಮ  ಪಂಚಾಯತ್

ಅಂಚಟಗೇರಿ ಗ್ರಾಮ ಪಂಚಾಯತ್

ಗ್ರಾಮದಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆಗೆ ಪ್ರತಿ ಮನೆಗಳಿಗೆ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ನೀಡಲಾಗಿದೆ. ಪ್ರತಿಯೊಂದು ಮನೆಯಿಂದ ಕಸದ ಜೊತೆಗೆ ಒಂದು ರೂಪಾಯಿಯನ್ನು ಸಂಗ್ರಹಿಸಲಾಗುತ್ತಿದೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಮಾಡುವ ಘಟಕ ನಿರ್ಮಾಣವಾಗಿದೆ

  • Share this:

ಹುಬ್ಬಳ್ಳಿ(ಜ.28): ಉತ್ತರ ಕರ್ನಾಟಕದ ಗ್ರಾಮವೊಂದು ಘನತ್ಯಾಜ್ಯ ವಿಲೇವಾರಿಯಲ್ಲಿ ಮಾದರಿ ಗ್ರಾಮವಾಗಿ ರೂಪುಗೊಳ್ಳುತ್ತಿದೆ. ಕಸದಿಂದ ರಸ ತೆಗೆದು ಸ್ವಾವಲಂಬಿ ಪಂಚಾಯಿತಿಯಾಗಿ ಹೊರಹೊಮ್ಮುತ್ತಿದೆ. ಸ್ವಚ್ಛ ಗ್ರಾಮದಿಂದ ಸದೃಢ ಭಾರತ ನಿರ್ಮಾಣದ ಪರಿಕಲ್ಪನೆ ಸಾಕಾರ ಗೊಳಿಸುತ್ತಿರುವ ಹಳ್ಳಿಯೊಂದರ ಯಶೋಗಾಥೆ ದೇಶದ ಗಮನ ಸೆಳೆಯುತ್ತಿದೆ.


ಘನತ್ಯಾಜ್ಯ ವಿಲೇವಾರಿ ಮಹಾನಗರಗಳಿಗೆ ಮಾದರಿ


ಮಹಾನಗರಗಳಲ್ಲಿ ಘನತ್ಯಾಜ್ಯ ವಿಲೇವಾರಿ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತ್ಯಾಜ್ಯ ನಿರ್ವಹಣೆಗೆ ತೋರಿದ ನಿರ್ಲಕ್ಷದ ಪರಿಣಾಮ ಬೃಹತ್‌ ನಗರಗಳು ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಿವೆ. ಕಸ ಸಂಗ್ರಹ ಮತ್ತು ವಿಲೇವಾರಿ ಎಂಬುದು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಹೊರೆಯಾಗಿದೆ. ಇಂತಹ ಸಮಸ್ಯೆ ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಬಾರದು ಎನ್ನುವುದು ಕೇಂದ್ರ ಸರ್ಕಾರದ ಆಶಯ. ಹೀಗಾಗಿ ಸ್ವಚ್ಛ ಭಾರತ್ ಮಿಷನ್‌ ಯೋಜನೆಯಡಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕ ನಿರ್ಮಾಣ ನಡೆಯುತ್ತಿದೆ. ಪೈಲೆಟ್‌ ಯೋಜನೆಯಡಿ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮದಲ್ಲಿ ನೂತನ ಘಟಕ ನಿರ್ಮಾಣವಾಗಿದೆ.


ಕಸದಲ್ಲಿ ಆದಾಯ ತೆಗೆದು ಗ್ರಾಮ ಸ್ವರಾಜ್ಯ


ಅಂಚಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 1247 ಕುಟುಂಬಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೆಗಳಿಂದ ನಿತ್ಯ 4.35 ಕ್ವಿಂಟಲ್‌ ಕೊಳೆಯುವ ತ್ಯಾಜ್ಯ ಮತ್ತು 2.31 ಕ್ವಿಂಟಲ್‌ ಕೊಳೆಯದೆ ಇರುವ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈಗಾಗಲೇ ಗ್ರಾಮದಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆಗೆ ಪ್ರತಿ ಮನೆಗಳಿಗೆ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ನೀಡಲಾಗಿದೆ. ಪ್ರತಿಯೊಂದು ಮನೆಯಿಂದ ಕಸದ ಜೊತೆಗೆ ಒಂದು ರೂಪಾಯಿಯನ್ನು ಸಂಗ್ರಹಿಸಲಾಗುತ್ತಿದೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಮಾಡುವ ಘಟಕ ನಿರ್ಮಾಣವಾಗಿದೆ. ಕಸ ವಿಂಗಡನೆ ಮತ್ತು ತರಬೇತಿ ಕೇಂದ್ರವನ್ನು ಈ ಘಟಕ ಒಳಗೊಂಡಿದೆ. ಮನೆಯಿಂದ ಸಂಗ್ರಹಿಸಿದ ತ್ಯಾಜ್ಯದಿಂದ ಬಾಟಲಿಗಳು, ಪ್ಲಾಸ್ಟಿಕ್‌ ಚೀಲಗಳು, ರಟ್ಟಿನ ಬಾಕ್ಸ್‌ಗಳು, ಟಿನ್‌ ಡಬ್ಬಗಳನ್ನು ಬೇರ್ಪಡಿಸಲಾಗುತ್ತಿದೆ. ಪ್ರತಿಯೊಂದನ್ನು ಸ್ವಚ್ಛಗೊಳಿಸಿ ಮಾರಾಟ ಮಾಡಲಾಗುತ್ತಿದೆ. ಬರುವ ಆದಾಯವನ್ನು ಕಾರ್ಮಿಕರ ಸಂಭಳ ಮತ್ತು ವಾಹನಗಳ ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಇದರಿಂದ ಅಂಚಟಗೇರಿ ಗ್ರಾಮ ಮತ್ತಷ್ಟು ಸ್ವಾವಲಂಭಿಯಾಗುತ್ತಿದೆ.


ಸ್ವಚ್ಛ ಭಾರತ್‌ ಮಿಷನ್‌ ಸಾಥ್‌


ತ್ಯಾಜ್ಯ ನಿರ್ವಹಣಾ ಘಟಕಕ್ಕೆ 20 ಲಕ್ಷ ಸ್ವಚ್ಛ ಭಾರತ್ ಮಿಷನ್‌ನಿಂದ ಮಂಜೂರು ಮಾಡಲಾಗಿದೆ. ಗಾಂಧಿ ಗ್ರಾಮ ಪುರಸ್ಕಾರದಿಂದ ಬಂದ 5 ಲಕ್ಷ ರೂಪಾಯಿಗಳನ್ನು ಕೂಡ ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಉಳಿದ ವೆಚ್ಚವನ್ನು ತೆರಿಗೆ ಹಣದಿಂದ ಭರಿಸಲಾಗಿದೆ. ಊರು ಸ್ವಚ್ಛ ಸುಂದರವಾಗಿ ಕಂಗೊಳಿಸುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆದು ಗಬ್ಬು ನಾರುತ್ತಿದ್ದ ರಸ್ತೆಗಳು ಸ್ವಂಚ್ಛಂದವಾಗಿ ಕಾಣಿಸುತ್ತಿವೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಇಲ್ಲವಾಗಿದೆ.


ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓಗಳಿಂದ ಅಧ್ಯಯನ


ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಮಾದರಿ ಹಾಗೂ ಮೊದಲ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ಲಾಸ್ಟಿಕ್‌ ಮುಕ್ತ ಗ್ರಾಮ ಯೋಜನೆಯಲ್ಲಿ ಅಂಚಟಗೇರಿ ಒಂದು ಹೆಜ್ಜೆ ಮುಂದಿದೆ. ಈಗ ಘನತ್ಯಾಜ್ಯ ವಿಲೇವಾರಿಯಿಂದ ಮತ್ತಷ್ಟು ಗಮನ ಸೆಳೆಯುತ್ತಿದೆ. ರಾಜ್ಯದ ವಿವಿದೆಡೆಯಿಂದ ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಪಿಡಿಓಗಳು ಅಂಚಟಗೇರಿ ಗ್ರಾಮಕ್ಕೆ ಆಗಮಿಸಿ ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮದ ಮಾದರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ :  ಸಾಹಿತಿ ಗೀತಾ ನಾಗಭೂಷಣರಿಂದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ, ಪ್ರಚಾರದ ಸಿಡಿ ಬಿಡುಗಡೆ


ಸರ್ಕಾರದ ಬಹುತೇಕ ಯೋಜನೆಗಳಲ್ಲಿ ಆರಂಭದಲ್ಲಿರುವ ಉತ್ಸಾಹ ನಿರ್ವಹಣಾ ಹಂತದಲ್ಲಿರಲ್ಲ. ಹೀಗಾಗಿ ಘನತ್ಯಾಜ್ಯ ವಿಲೇವಾರಿ ಯೋಜನೆ ನಿರಂತರ ಮುಂದುವರಿಯಬೇಕು ಎನ್ನುವ ದೂರದೃಷ್ಟಿಯಿಂದ ಸಮಗ್ರ ಯೋಜನೆ ರೂಪಿಸಲಾಗಿದೆ. ಘಟಕ ನಿರ್ವಹಣೆಗೆ ತಗಲುವ ವೆಚ್ಚವನ್ನು ಕಸದಿಂದ ಬರುವ ಆದಾಯದಲ್ಲಿಯೇ ರೂಪಿಸಿಕೊಳ್ಳಲಾಗುತ್ತಿದೆ. ಇದು ಮಹಾನಗರಗಳಿಗೂ ಒಂದು ಉತ್ತಮ ಮಾದರಿ ಎನ್ನಬಹುದು.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು