ಜನರ ಜೀವನವನ್ನು ಹಿತಕರವಾಗಿಸುವುದೇ ವಿಜ್ಞಾನದ ಅಂತಿಮ ಗುರಿ: ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

ಭವಿಷ್ಯದ ಪೀಳಿಗೆಗೆ ಪ್ರಮುಖ ವೈಜ್ಞಾನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿರುವ ಅದ್ಭುತ ಕೆಲಸಗಳಿಗಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್​ಗಳಿಗೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒದಗಿಸಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಇಸ್ರೋ ಗಳಿಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ತಿಳಿಸಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.

  • Share this:
ಬೆಂಗಳೂರು ಗ್ರಾಮಾಂತರ: ಜನರ ಜೀವನವನ್ನು ಹಿತಕರವಾಗಿಸುವುದು ಮತ್ತು ಅವರ ಬದುಕಿನಲ್ಲಿ ಸಂತೋಷ ತರುವುದೇ ವಿಜ್ಞಾನದ ಅಂತಿಮ ಗುರಿಯಾಗಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು  ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೀಪದ ಭಾರತೀಯ ಖಗೋಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಹಾಗೂ ಶಿಕ್ಷಣ ಕೇಂದ್ರ (CREST)ಕ್ಕೆ  ಭೇಟಿ ನೀಡಿ, ಆಧುನಿಕ ಖಗೋಳ ಉಪಕರಣಗಳ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯು ರಾಷ್ಟ್ರ ಸೇವೆಯಲ್ಲಿ 50 ವರ್ಷಗಳನ್ನು ಆಚರಿಸುತ್ತಿರುವುದಕ್ಕೆ ಉಪ ರಾಷ್ಟ್ರಪತಿಯವರು ಅಭಿನಂದನೆ ತಿಳಿಸಿದರು.  ಖಗೋಳ ವಿಜ್ಞಾನವು ಹಲವಾರು ಅಂತರರಾಷ್ಟ್ರೀಯ ಯೋಜನೆಗಳ ಮೂಲಕ ಜನರು ಮತ್ತು ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತಿದ್ದು, ಖಗೋಳ ಅಧ್ಯಯನಗಳು ಭೂಮಿಯ ವಾತಾವರಣದ ವಿಕಸನ ಮತ್ತು ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂಶಗಳು ಮತ್ತು ಅದನ್ನು ಪರಿಹರಿಸಲು ಅಗತ್ಯವಾದ ಹಂತಗಳ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದು ಸಮಾಜ ಪ್ರಗತಿಗೆ ಮತ್ತು ಮಾನವ ಸಂಕುಲದ ಸುಸ್ಥಿರತೆಗೆ ಪ್ರಮುಖವಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಸಾಗುತ್ತಿದೆ. ಕ್ಷ-ಕಿರಣ ಮತ್ತು ಮತ್ತು ಅತಿ ನೇರಳೆ ಕಿರಣಗಳ ಬಗ್ಗೆ ಸಮೀಕ್ಷೆ ಮಾಡಲು ಇಸ್ರೋದ ಬಾಹ್ಯಾಕಾಶ ಮಿಷನ್ “ಮಂಗಳಯಾನ” ಮತ್ತು ಭಾರತದ ಖಗೋಳವಿಜ್ಞಾನ ವೀಕ್ಷಣಾಲಯ “ಆಸ್ಟ್ರೋಸಾಟ್ (ಖಗೋಳವಿಜ್ಞಾನ ಉಪಗ್ರಹ)" ಹಾಗೂ ಶೀಘ್ರದಲ್ಲೇ ಉಡಾವಣೆಯಾಗಲಿರುವ "ಆದಿತ್ಯ ಎಲ್-1, ಸೌರ ಅಧ್ಯಯನ ಮಿಷನ್" ಕುರಿತು ಹೆಚ್ಚು ಮಾತನಾಡಲಾಗುತ್ತಿದೆ ಎಂದರಲ್ಲದೆ, ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಬಾಹ್ಯಾಕಾಶದಲ್ಲಿ ಕಕ್ಷೆಗೆ ಸೇರಿಸಲಾಗುವ ಆದಿತ್ಯ ಮಿಷನ್ ಸೂರ್ಯನ ಬಗ್ಗೆ ಅಭೂತಪೂರ್ವವಾದ ತಿಳಿವಳಿಕೆಯನ್ನು ಒದಗಿಸುವ ಭರವಸೆ ಇದೆ ಎಂದು ಅವರು ಹೇಳಿದರು.

ಖಗೋಳ ಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನ ಸಂಸ್ಥೆಯ ಪರಿಸರ ಪರೀಕ್ಷಾ ಸೌಲಭ್ಯವು ಸಣ್ಣ ಪೇಲೋಡ್‍ಗಳನ್ನು ಬಾಹ್ಯಾಕಾಶಕ್ಕೆ ಸೇರಿಸಲು ನೆರವಾಗುತ್ತದೆ. ಸಣ್ಣ ಪೇಲೋಡ್‍ಗಳನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳು ಪ್ರಯೋಗಾಲಯವನ್ನು ಬಳಸಲು ಮುಕ್ತಗೊಳಿಸಲಾಗುತ್ತದೆ. ಈ ಸೌಲಭ್ಯಗಳು ಭವಿಷ್ಯದಲ್ಲಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.

ಭವಿಷ್ಯದ ಪೀಳಿಗೆಗೆ ಮೂಲಭೂತ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಬದ್ಧತೆಗೆ ಭಾರತೀಯ ಖಗೋಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಹಾಗೂ ಶಿಕ್ಷಣ ಕೇಂದ್ರವು ಅತ್ಯುತ್ತಮ ಉದಾಹರಣೆಯಾಗಿದೆ. ಇದು ಆತ್ಮನಿರ್ಭರ ಭಾರತಕ್ಕೆ ಅಡಿಪಾಯವಾಗಿದೆ.  2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಅಮೆರಿಕದ ಹವಾಯಿಯಲ್ಲಿ ಮೂವತ್ತು ಮೀಟರ್ ದೂರದರ್ಶಕವನ್ನು ನಿರ್ಮಿಸಲು ಜಪಾನ್, ಚೀನಾ, ಕೆನಡಾ ಮತ್ತು ಅಮೆರಿಕಾದೊಂದಿಗೆ ಭಾರತವೂ ಸೇರಿಕೊಳ್ಳಲು ಅನುಮೋದನೆ ನೀಡಿತು. ಈ ಅಂತರರಾಷ್ಟ್ರೀಯ ಪ್ರಯತ್ನದ ಸಾಕಾರಕ್ಕಾಗಿ ಆಪ್ಟಿಕ್ಸ್ ರೂಪಿಸುವ ಸೌಲಭ್ಯವನ್ನು ಇಂದು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದರು. ಬೃಹತ್ ವೈಜ್ಞಾನಿಕ ಯೋಜನೆಗಳಲ್ಲಿ ಭಾಗವಹಿಸುವಿಕೆಯು ಭಾರತೀಯ ವಿಜ್ಞಾನಿಗಳಿಗೆ ಉತ್ತಮ ಭೂಮಿಕೆಯನ್ನು ಒದಗಿಸುತ್ತದೆ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉದ್ಯಮಗಳಿಗೆ ಸಹಾಯ ಮಾಡುತ್ತದೆ. ಎಂದು ತಿಳಿಸಿದರು.

ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯು ಖಗೋಳ ಸಂಶೋಧನೆಯಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ವೈಜ್ಞಾನಿಕ ಜ್ಞಾನಕ್ಕೆ ಸಮೃದ್ಧ ಕೊಡುಗೆ. ಸೂರ್ಯನಲ್ಲಿ ಹೀಲಿಯಂ ಅಂಶದ ಉಪಸ್ಥಿತಿ ಮತ್ತು ಯುರೇನಸ್ ಗ್ರಹದ ಸುತ್ತ ಉಂಗುರಗಳು ಸೇರಿದಂತೆ ಅನೇಕ ಪ್ರಮುಖ ಆವಿಷ್ಕಾರಗಳಲ್ಲಿ ಈ ಸಂಸ್ಥೆ ಕೆಲಸ ಮಾಡಿದೆ. ಖಗೋಳ ವಿಜ್ಞಾನವು ಸಮಾಜಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡಿದ್ದು, ಕೈಗಾರಿಕೆ, ಬಾಹ್ಯಾಕಾಶ ಮತ್ತು ಇಂಧನ ಕ್ಷೇತ್ರಗಳಿಗೆ ಅಪಾರ ಪ್ರಮಾಣದ ತಂತ್ರಜ್ಞಾನ ವರ್ಗಾವಣೆಯಾಗಿದೆ ಎಂದರು.

ನಾವಿಂದು ಲೀಲಾಜಾಲವಾಗಿ ಬಳಸುವ ಅನೇಕ ತಂತ್ರಜ್ಞಾನಗಳಾದ ಎಕ್ಸ್-ರೇ ಯಂತ್ರಗಳು, ನಿಖರ ಗಡಿಯಾರಗಳು, ಸೂಪರ್ ಕಂಪ್ಯೂಟರ್‍ಗಳು, ಉಪಗ್ರಹ ಸಂಪರ್ಕ, ಜಿಪಿಎಸ್ ಇವೆಲ್ಲವೂ ಖಗೋಳ ವಿಜ್ಞಾನದ ಸಂಶೋಧನೆಯ ಫಲಗಳಾಗಿವೆ. ಪ್ರಾಚೀನ ಕಾಲದ ಆರ್ಯಭಟನಿಂದ ಆಧುನಿಕ ಕಾಲದವರೆಗೆ ಭೂಮಿಯ ಚಲನೆ, ಸೂರ್ಯನ ಸುತ್ತ ಗ್ರಹಗಳು ಸುತ್ತುವುದು ಸೇರಿದಂತೆ ಹಲವು ಮಹತ್ವದ ಸಂಶೋಧನೆಗಳನ್ನು ಭಾರತ ಕೈಗೊಂಡಿದೆ.  ಮಕ್ಕಳು ಮತ್ತು ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಈ ಕ್ಯಾಂಪಸ್‍ನಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.

ಇದನ್ನು ಓದಿ: Grama Panchayath Election Results; ಮತ ಎಣಿಕೆ ಕೇಂದ್ರದಲ್ಲಿ ನಿಂಬೆಹಣ್ಣು, ತಾಯಿತಗಳದ್ದೇ ಸದ್ದು!

ಬಾಹ್ಯಾಕಾಶ ಮತ್ತು ಇಂಧನ ಬೆಲೆಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ವಿಜ್ಞಾನಿಗಳಿಗೆ ಕರೆ ನೀಡಿದರು. ಭವಿಷ್ಯದ ಪೀಳಿಗೆಗೆ ಪ್ರಮುಖ ವೈಜ್ಞಾನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿರುವ ಅದ್ಭುತ ಕೆಲಸಗಳಿಗಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್​ಗಳಿಗೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒದಗಿಸಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಇಸ್ರೋ ಗಳಿಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ತಿಳಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಲೇಹ್ ಲಡಾಖ್‍ನ ವಿಜ್ಞಾನಿಗಳೊಂದಿಗೆ ನೇರ ಸಂವಾದವನ್ನ ನಡೆಸಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಸಂವಾದ ನಡೆಸಿದರು. ರಾಜ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ ಬಿ.ಎನ್‌.ಬಚ್ಚೇಗೌಡ, ಲೋಕಸಭಾ ಸದಸ್ಯರುಗಳಾದ ಪಿ.ಸಿ.ಮೋಹನ್, ಭಗವಂತ್ ಕೂಬಾ, ಶಿವಕುಮಾರ್ ಉದಾಸಿ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್‌  ಬಚ್ಚೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೇರಿದಂತೆ ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Published by:HR Ramesh
First published: