HOME » NEWS » State » THE UK GOVERNMENT WILL PROVIDE EMPLOYMENT TO 1000 NURSES IN THE STATE RHHSN SHTV

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಹೊಶ ಆಶಾಕಿರಣ: ರಾಜ್ಯದ 1000 ನರ್ಸ್​ಗಳಿಗೆ ಉದ್ಯೋಗ ನೀಡಲಿದೆ ಬ್ರಿಟನ್‌ ಸರಕಾರ

ಕೆವಿಟಿಎಸ್‌ಡಿಸಿ ಮೂಲಕ ವಿದೇಶದಲ್ಲಿ ಸೂಕ್ತ ವಿದೇಶಿ ಉದ್ಯೋಗದಾತರನ್ನು ಗುರುತಿಸುವ, ಸಂಪರ್ಕವನ್ನು ಸ್ಥಾಪಿಸಲು ಮತ್ತು ಕರ್ನಾಟಕ ರಾಜ್ಯದಿಂದ ಸುರಕ್ಷಿತ ವಲಸೆ ಕಾರ್ಯ ವಿಧಾನವನ್ನು ಉತ್ತೇಜಿಸಲು ವಿವಿಧ ದೇಶಗಳಲ್ಲಿನ ಕನ್ನಡ ಸಂಘಗಳ ಜತೆ ಸಂಪರ್ಕದಲ್ಲಿದೆ ಎಂದು ತಿಳಿಸಿದರು.

news18-kannada
Updated:January 1, 2021, 6:52 AM IST
ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಹೊಶ ಆಶಾಕಿರಣ: ರಾಜ್ಯದ 1000 ನರ್ಸ್​ಗಳಿಗೆ ಉದ್ಯೋಗ ನೀಡಲಿದೆ ಬ್ರಿಟನ್‌ ಸರಕಾರ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
  • Share this:
ಬೆಂಗಳೂರು: ಇಡೀ ರಾಜ್ಯವು ಕೊರೋನಾ ಹೊಸ ಅಲೆಯ ಆತಂಕದಲ್ಲಿದ್ದರೆ ಕೌಶಲ್ಯಾವೃದ್ಧಿ ಖಾತೆ ಮಂತ್ರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯಕ್ಕೆ ನಮ್ಮ ರಾಜ್ಯದ ನರ್ಸುಗಳಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು, ಯುರೋಪ್‌ ಸೇರಿದಂತೆ ಅನೇಕ ದೇಶಗಳ ಆಸ್ಪತ್ರೆಗಳು ಅವರಿಗೆ ಉದ್ಯೋಗಾವಕಾಶ ನೀಡಲು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಮೊದಲಿಗೆ ಬ್ರಿಟನ್‌ ಸರಕಾರ 1,000 ಮಂದಿ ನರ್ಸುಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟು ಮಂದಿ ಶುಶ್ರೂಶಕಿಯರನ್ನು ಆ ದೇಶಕ್ಕೆ ಕಳಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಗುರುವಾರ ಈ ಬಗ್ಗೆ ಸಚಿವರು ಮಾಹಿತಿ ನೀಡಿದರು. ಬ್ರಿಟನ್‌ಗೆ ಕಳಿಸಲಾಗುತ್ತಿರುವ ಶುಶ್ರೂಶಕಿಯರಿಗೆ ಸಂವಹನ ಕಲೆ ಸೇರಿದಂತೆ ಅವರ ವೃತ್ತಿಗೆ ಸಂಬಂಧಿಸಿದ ಎಲ್ಲ ರೀತಿಯ ಕುಶಲ ತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ವತಿಯಿಂದ ನೀಡಲಾಗುತ್ತದೆ. ಬ್ರಿಟನ್‌ ಸರಕಾರ ಈ ನರ್ಸುಗಳಿಗೆ ವಾರ್ಷಿಕ ತಲಾ 20 ಲಕ್ಷ ರೂ. ಪ್ಯಾಕೇಜ್‌ ನಿಗದಿ ಮಾಡಿದೆ. ಈ ಉದ್ದೇಶಕ್ಕಾಗಿ ಅರ್ಹ ಹಾಗೂ ನುರಿತ ಶುಶ್ರೂಶಕಿಯರನ್ನು ನೇಮಕಾತಿ ಮಾಡಿಕೊಳ್ಳಲು‌ ಆ ದೇಶದ ಹೆಲ್ತ್‌ ಎಜ್ಯುಕೇಶನ್‌ ಇಂಗ್ಲೆಂಡ್‌ (ಎಚ್‌ಇಇ), ನ್ಯಾಷನಲ್‌ ಹೆಲ್ತ್‌ ಸರ್ವೀಸಸ್‌ (ಎನ್‌ಎಚ್‌ಎಸ್) ಸಂಸ್ಥೆಗಳ ಜತೆ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ವಿದೇಶದಲ್ಲಿ ಉದ್ಯೋಗ‌ ಕೊಡಿಸುವ ಸಲುವಾಗಿ ಸರ್ಕಾರವೇ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪಿಸಿದೆ. ಇದರ ಮೂಲಕ ಇಷ್ಟೂ ಶುಶ್ರೂಶಕಿಯರನ್ನು ಕಳಿಸಲಾಗುತ್ತಿದ್ದು, ಅವರ ಜತೆ ನಿರಂತರವಾಗಿ ಈ ಕೇಂದ್ರವು ಸಂಪರ್ಕದಲ್ಲಿರುತ್ತದೆ ಹಾಗೂ ಅವರ ಕುಂದುಕೊರತೆಗಳ ಬಗ್ಗೆ ನಿಗಾ ಇರಿಸುತ್ತದೆ. ಯಾವುದೇ ಸಮಸ್ಯೆ ಅಥವಾ ದೂರು ಇದ್ದರೆ ಬ್ರಿಟನ್‌ನಿಂದಲೇ ಇಲ್ಲಿಗೆ ತಿಳಿಸಬಹುದು. ಕೂಡಲೇ ಅವರಿಗೆ ಸೂಕ್ತ ಸಹಕಾರ ಒದಗಿಸಲಾಗುವುದು ಎಂದು ಹೇಳಿದರು.

ಸದ್ಯಕ್ಕೆ ರಾಜ್ಯದಲ್ಲಿ ಕುಶಲತೆಯುಳ್ಳ ಮಾನವ ಸಂಪನ್ಮೂಲ ವಿಫುಲವಾಗಿದ್ದು, ಇಂಥ ನಿರುದ್ಯೋಗಿ ಯುವಜನರಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ವಲಸೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಯುವಜನರಿಗೆ ಸೂಕ್ತ ಮಾರ್ಗದರ್ಶನ, ತಾಂತ್ರಿಕ ಬೆಂಬಲ ಹಾಗೂ ಪೂರಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪಬ್ಲಿಕ್‌ ಅಫೇಯರ್ಸ್‌ ಸೆಂಟರ್‌ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಇದನ್ನು ಓದಿ: ಕೊಡಗು ಪ್ರವಾಸಿಗರಿಗೆ ನಿರಾಸೆ ಮೂಡಿಸಿದ 2020ರ ಕೊನೆಯ ಸೂರ್ಯಾಸ್ತ!

ಶುಶ್ರೂಶಕಿಯರ ಜತೆಗೆ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲಾಭಿವೃದ್ಧಿ ನಿಗಮವು (ಕೆವಿಟಿಎಸ್‌ಡಿಸಿ) ಕುವೈತ್‌ನ ಅರೆ ಸರಕಾರಿ ಸಂಸ್ಥೆಯಾದ ಅಲ್‌-ದುರಾ ಮ್ಯಾನ್‌ಪವರ್‌ ಸಪ್ಲೈ (Al-Durra Manpower Supply) ಜತೆ ಇನ್ನೊಂದು ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಪ್ರಕಾರ ಕುವೈತ್‌ನಲ್ಲಿ ರಾಜ್ಯದ ಅನುಭವಿ ವಾಹನ ಚಾಲಕರು, ಹೌಸ್‌ ಬಾಯ್ಸ್‌ ಹಾಗೂ ಅಡುಗೆ ಮಾಡುವವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆವಿಟಿಎಸ್‌ಡಿಸಿ ಮತ್ತು ಕೆನಡಾ ಸರಕಾರದ ನಡುವೆ ಹೊಸ ಒಪ್ಪಂದ ಮಾತುಕತೆ ಪ್ರಗತಿಯಲ್ಲಿದ್ದು, ಅದರ ಪ್ರಕಾರ ಐಟಿ, ವಿಡಿಯೋ ಗೇಮ್ ಮತ್ತು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ವಲಯಕ್ಕೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ಕ್ಯುಬೆಕ್‌ನ ಮಾಂಟ್ರಿಯಲ್‌ಗೆ ಉದ್ಯೋಗ ಮತ್ತು ವಲಸೆಗೆ ಅನುಕೂಲವಾಗುವಂತೆ ಇಲಾಖೆಯು ಈ ಒಪ್ಪಂದ ಮಾಡಿಕೊಳ್ಳುವ ಕಾರ್ಯದಲ್ಲಿ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
Youtube Video
ಕೆವಿಟಿಎಸ್‌ಡಿಸಿ ಮೂಲಕ ವಿದೇಶದಲ್ಲಿ ಸೂಕ್ತ ವಿದೇಶಿ ಉದ್ಯೋಗದಾತರನ್ನು ಗುರುತಿಸುವ, ಸಂಪರ್ಕವನ್ನು ಸ್ಥಾಪಿಸಲು ಮತ್ತು ಕರ್ನಾಟಕ ರಾಜ್ಯದಿಂದ ಸುರಕ್ಷಿತ ವಲಸೆ ಕಾರ್ಯ ವಿಧಾನವನ್ನು ಉತ್ತೇಜಿಸಲು ವಿವಿಧ ದೇಶಗಳಲ್ಲಿನ ಕನ್ನಡ ಸಂಘಗಳ ಜತೆ ಸಂಪರ್ಕದಲ್ಲಿದೆ ಎಂದು ತಿಳಿಸಿದರು.
Published by: HR Ramesh
First published: January 1, 2021, 6:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories