ಲವ್​ ಯೂ ರಚ್ಚು ದುರಂತ ಘಟನೆ; ನವೆಂಬರ್​ನಿಂದ ಜಾರಿಯಾಗಲಿದೆ ಹೊಸ ಶೂಟಿಂಗ್ ನಿಯಮ

ಸಿನಿಮಾ ಚಿತ್ರೀಕರಣದ ವೇಳೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಎಲ್ಲಾ ನಿಯಮಗಳನ್ನೂ ನವೆಂಬರ್​ ತಿಂಗಳಿಂದ ಪ್ರತಿಯೊಂದು ಚಿತ್ರ ತಂಡವೂ ಪಾಲಿಸಲೇಬೇಕು ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದ್ದಾರೆ.

ಲವ್​ ಯೂ ರಚ್ಚು ಚಿತ್ರದ ಪೋಸ್ಟರ್.

ಲವ್​ ಯೂ ರಚ್ಚು ಚಿತ್ರದ ಪೋಸ್ಟರ್.

 • Share this:
  ಬೆಂಗಳೂರು (ಆಗಸ್ಟ್​ 17); ನಾಯಕ ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್​ಅಭಿನಯದ ಸಿನಿಮಾ ಲವ್​ ಯೂ ರಚ್ಚು ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್​ ಅವರು ಸಾವನ್ನಪ್ಪಿದ್ದರು. ಪ್ರಕರಣದ ಬೆನ್ನಿಗೆ ಎಫ್​ಐಆರ್ ದಾಖಲಿಸಿದ್ದ ಪೊಲೀಸರು ದುರ್ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್ ಮತ್ತು ಚಿತ್ರದ ನಿರ್ದೇಶಕ ಶಂಕರ್​ ರಾಜ್ ವಿರುದ್ಧ ಎಫ್​ಐಆರ್​ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಹಿಂದೆಯೂ 2017ರಲ್ಲಿ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಖಳ ನಟರಾದ ಉದಯ್ ಮತ್ತು ಅನಿಲ್ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ವೇಳೆ ಹೊಸ ನಿಯಮ ಜಾರಿಯಾಗಬೇಕು ಎಂಬ ಕೂಗು ಕೇಳಿ ಬಂದಿತ್ತು. ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯೂ ಸಹ ಶೂಟಿಂಗ್ ವೇಳೆ ಕೆಲವು ಪಾಲಿಸಲೇಬೇಕಾದ ಅಗತ್ಯ ನಿಯಮಗಳನ್ನು ಇಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದೆ.

  ಸಿನಿಮಾ ಶೂಟಿಂಗ್ ವೇಳೆ ಎಚ್ಚರಿಕೆ ವಹಿಸುವ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್. ಸುರೇಶ್, "ಶೂಟಿಂಗ್ ಸಲುವಾಗಿ ಹೊಸ ಕಾನೂನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ, ಮೊದಲು ಫಿಲ್ಮ್ ಚೇಂಬರ್ ನಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರ ಮಾಡಲು ಹೇಳಿದ್ದರು. ಹೀಗಾಗಿ ಎಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ.

  ಸಿಎಂ ಹೇಳಿದಂತೆ ನಾವು ಎಲ್ಲಾ ವಿಭಾಗದ ಪದಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇವೆ. ಒಂದಷ್ಟು ನಿಯಮಗಳನ್ನ ಪಾಲನೆ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಇನ್ಮುಂದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಫೈಟರ್ ಗಳಿಗೆ ಸೇರಿ ಎಲ್ಲಾ ವಿಭಾಗದ ಕಾರ್ಮಿಕರಿಗೆ ಇನ್ಷ್ಯುರೆನ್ಸ್ ಕಡ್ಡಾಯ ಮಾಡಬೇಕು. ಇನ್ಸ್ಯುರೆನ್ಸ್ ಇರೋ ಕಾರ್ಮಿಕರನ್ನ ಮಾತ್ರ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಬೇಕು.

  ಸಾಹಸ ದೃಶ್ಯ ಶೂಟಿಂಗ್ ಸಮಯದಲ್ಲಿ ಸ್ಥಳದಲ್ಲಿ ಆ್ಯಂಬುಲೆನ್ಸ್ , ಡಾಕ್ಟರ್, ನರ್ಸ್ ಪ್ರಥಮ ಚಿಕಿತ್ಸಾ ಸೌಲಭ್ಯ ಇರಬೇಕು. ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಎಲ್ಲರಿಗೂ ನಿರ್ಮಾಪಕ ಗ್ರೂಪ್ ಇನ್ಸ್ಯೂರೆನ್ಸ್ ಮಾಡಿಸಬೇಕು. ಶೂಟಿಂಗ್ ನಲ್ಲಿ ಪಾಲ್ಗೊಳ್ಳೊ ಫೈಟರ್ಸ್, ಕಾರ್ಮಿಕರು ಸ್ವಯಂ‌ಪ್ರೇರಿತವಾಗಿ ಒಪ್ಪಿದ ಪತ್ರಕ್ಕೆ ಸಹಿ ಹಾಕಿ ಶೂಟಿಂಗ್ ಗೆ ಬರಬೇಕು. ಚಿತ್ರೀಕರಣ ಸ್ಥಳದಲ್ಲಿ ಯಾವುದೇ ಘಟನೆ ಆದರೆ ಆಯಾ ಸಂಘದ ಮುಖ್ಯಸ್ಥರೇ ನೇರ ಹೊಣೆ. ಈ ಮೇಲಿನ ನಿಮಯಗಳನ್ನ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.

  ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಸಾ. ರಾ ಗೋವಿಂದು ಮಾತನಾಡಿದ್ದು, "ಮೊನ್ನೆ ಸಿಎಂ ಬೊಮ್ಮಾಯಿ ಕರೆದು ಹೇಳಿದ್ದಾರೆ. ಇನ್ಮುಂದೆ ಶೂಟಿಂಗ್ ಸಮಯದಲ್ಲಿ ಆಗೋ ಅವಘಡಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ. ಹೊಸ ಶೂಟಿಂಗ್ ನಿಯಮಗಳನ್ನ ಜಾರಿಗೆ ತನ್ನಿ ಎಂದಿದ್ದಾರೆ. ಅದರಂತೆ ನಾವು ಈ ನಿಮಯಗಳನ್ನ ಶೂಟಿಂಗ್ ನಲ್ಲಿ ಸೇರಿಸುತ್ತಿದ್ದೇವೆ. ನವಂಬರ್ ನಿಂದ ಎಲ್ಲಾ ನಿಯಮಗಳು ಜಾರಿಯಾಗಲಿವೆ" ಎಂದು ಆಶ್ವಾಸನೆ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Vivek Death: ವಿವೇಕ್​ ಸಾವಿನ ಪ್ರಕರಣ: ಮೃತರ ಕುಟುಂಬದ ಕಣ್ಣೀರು ಒರೆಸುತ್ತೇವೆ ಎಂದ ನಿರ್ಮಾಪಕ ಗುರು ದೇಶಪಾಂಡೆ ಪತ್ನಿ

  ಮೃತ ವಿವೇಕ್ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಯಾವುದೇ ಪರಿಹಾರ; ತಾಯಿ ಕಣ್ಣೀರು!

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಳಲು ತೋಡಿಕೊಂಡ ಮೃತ ಸಾಹಸ ಕಲಾವಿದ ವಿವೇಕ್ ತಾಯಿ ಜಿ. ಉಮಾ, "ನಮ್ಮ ಸಹಾಯಕ್ಕೆ ಯಾರೂ ಬಂದಿಲ್ಲ.. ನಮಗೆ ನಿರ್ಮಾಪಕರು ಯಾವುದೇ ಹಣ ಕೊಟ್ಟಿಲ್ಲ. ನಿರ್ಮಾಪಕ ಗುರು ದೇಶ್ ಪಾಂಡೆ ಪತ್ನಿ 5 ಲಕ್ಷದ ಚೆಕ್‌ ಕೊಡೋದಾಗಿ ಮಾಧ್ಯಮದಲ್ಲಿ ಹೇಳಿದ್ದರು. ಆದರೆ, ಯಾವುದೇ ಹಣ ಕೊಟ್ಟಿಲ್ಲ.‌ ಜೀವನಕ್ಕೆ ಆಧಾರವಾಗಿದ್ದ ನನ್ನ ಮಗ ವಿವೇಕ್ ಈಗ ನಮ್ಮನ್ನು ಕೇಳೋರು ಯಾರು‌ ಇಲ್ಲ.

  ಚಿತ್ರರಂಗದ ವತಿಯಿಂದಲೂ ಯಾರೂ ಸಹಾಯ ಮಾಡಿಲ್ಲ, ಸಹಾಯ ಮಾಡೋದಿರಲಿ ಹೇಗಿದ್ದೀರಿ, ಜೀವನ ಹೇಗೆ ಮಾಡ್ತಿದ್ದೀರಿ ಅಂತನೂ ವಿಚಾರಿಸಿಲ್ಲ. ಫಿಲ್ಮ್‌ ಚೇಂಬರ್ ನವರಿಗೆ ಮನವಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಪರಿಹಾರ ಸಿಗೋ ಹಾಗೆ ಮಾಡುತ್ತೇವೆ ಎಂದಿದ್ದಾರೆ" ಎಂದು ವಿವೇಕ್ ತಾಯಿ ಉಮಾ‌ ಹೇಳಿಕೆ ನೀಡಿದ್ದಾರೆ.
  Published by:MAshok Kumar
  First published: