• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಸಾಲು ಸಾಲು ರಾಜೀನಾಮೆಗಳಿಂದ ಇಳಿಮುಖವಾಗುತ್ತಿದೆ ಕರ್ನಾಟಕ ವಿಧಾನ ಪರಿಷತ್ತಿನ ಸಂಖ್ಯಾಬಲ

Karnataka Politics: ಸಾಲು ಸಾಲು ರಾಜೀನಾಮೆಗಳಿಂದ ಇಳಿಮುಖವಾಗುತ್ತಿದೆ ಕರ್ನಾಟಕ ವಿಧಾನ ಪರಿಷತ್ತಿನ ಸಂಖ್ಯಾಬಲ

ವಿಧಾನ ಪರಿಷತ್

ವಿಧಾನ ಪರಿಷತ್

Karnataka Legislative Council: ಮೇಲ್ಮನೆಯಲ್ಲಿ ಉಳಿದಿರುವ 69 ಸದಸ್ಯರ ಪೈಕಿ ಇನ್ನೂ ಮೂವರ ಅವಧಿ ಮೇ ಮಧ್ಯದಿಂದ ಜೂನ್ ಅಂತ್ಯದೊಳಗೆ ಕೊನೆಗೊಳ್ಳಲಿದೆ.

 • Trending Desk
 • 5-MIN READ
 • Last Updated :
 • Karnataka, India
 • Share this:

ಬೆಂಗಳೂರು: ರಾಜ್ಯದ ಈ ಬಾರಿಯ ವಿಧಾನಸಭೆ ಚುನಾವಣೆ (Karnataka Assembly Election) ಕಂಡುಕೇಳರಿಯದ ಹಲವು ರಾಜಕೀಯ ಮೇಲಾಟಕ್ಕೆ ಸಾಕ್ಷಿ ಆಯಿತು ಎಂದರೆ ತಪ್ಪಾಗಲ್ಲ. ಟಿಕೆಟ್‌ ಘೋಷಣೆ ಮಾಡಿದ್ದಾಗಿನಿಂದ ಪಕ್ಷದಲ್ಲಿ ಒಂದೊಂದೇ ವಿಕೆಟ್‌ಗಳು ಉರುಳುತ್ತಿದ್ದು, ರಾಜೀನಾಮೆ, ಪಕ್ಷಾಂತರ ಪರ್ವ ಹೀಗೆ ಹಲವು ರಾಜಕೀಯ ಬೆಳವಣಿಗೆ (Political Development) ನಡೆಯುತ್ತಲೇ ಇತ್ತು. ನಾಮಪತ್ರ ಸಲ್ಲಿಕೆಯವರೆಗೂ ಈ ಎಲ್ಲಾ ವಿದ್ಯಾಮಾನಕ್ಕೆ ರಾಜ್ಯ ಸಾಕ್ಷಿಯಾಗಿದೆ.


ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವವರೆಗೂ ಆಕಾಂಕ್ಷಿಗಳು ಪಕ್ಷದಿಂದ ಪಕ್ಕಕ್ಕೆ ಜಿಗಿತ, ಟಿಕೆಟ್‌ಗಾಗಿ ಲಾಭಿ, ಒತ್ತಡ, ಬೆದರಿಕೆ ಅಂತಾ ನಾನಾ ತಂತ್ರಗಳನ್ನು ಅನುಸರಿಸಿದರು. ಇದ್ಯಾವದೂ ಆಗದೇ ಇದ್ದ ಸಂದರ್ಭದಲ್ಲಿ ರಾಜೀನಾಮೆ ಅಸ್ತ್ರ ಬಳಸುವ ಮೂಲಕ ತಾರ್ಕಿಕ ಅಂತ್ಯ ನೀಡಿದರು.


ಕೊನೆ ದಿನದ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ರಾಜ್ಯ ರಾಜಕಾರಣ ಹಲವು ಮೊದಲುಗಳಿಗೆ, ರಾಜೀನಾಮೆಗಳಿಗೆ ಸಾಕ್ಷಿಯಾಯಿತು.


ರಾಜೀನಾಮೆ ಪರ್ವ, ವಿಧಾನಪರಿಷತ್‌ ಸಂಖ್ಯಾಬಲ ಇಳಿಮುಖ


ಈ ರಾಜೀನಾಮೆ ಪರ್ವ ನೇರವಾಗಿ ವಿಧಾನಪರಿಷತ್‌ನ ಸಂಖ್ಯಾಬಲದ ಮೇಲೆ ಪರಿಣಾಮ ಬೀರಿದ್ದು, ಒಟ್ಟಾರೆ ಸಂಖ್ಯಾಬಲವೇ ಇಳಿಮುಖವಾಗಿದೆ. ಈ ವಾರದ ಆರಂಭದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ರಾಜೀನಾಮೆಯೊಂದಿಗೆ, 75 ಸದಸ್ಯರಿರುವ ಸದನದಲ್ಲಿ ರಾಜೀನಾಮೆ ನೀಡಿದವರ ಸಂಖ್ಯೆ ಸುಮಾರು ಆರಕ್ಕೆ ತಲುಪಿದೆ.


ಈ ಮುಖಾಂತರ 75 ಸಂಖ್ಯಾಬಲವಿದ್ದ ವಿಧಾನಪರಿಷತ್‌ ಸದಸ್ಯರ ಸಂಖ್ಯೆ 69ಕ್ಕೆ ಇಳಿಕೆಯಾಗಿದೆ.


ರಾಜೀನಾಮೆ ನೀಡಿದವರು


ಮೇ 10ರ ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿಯ ಸಿ ಪುಟ್ಟಣ್ಣ, ಆರ್ ಶಂಕರ್, ಲಕ್ಷ್ಮಣ ಸವದಿ ಮತ್ತು ಬಾಬುರಾವ್ ಚಿಂಚನಸೂರ್ ಅವರು ರಾಜೀನಾಮೆ ನೀಡಿದ್ದರೆ, ಕಾಂಗ್ರೆಸ್‌ನ ಸಿಎಂ ಇಬ್ರಾಹಿಂ ಕಳೆದ ವರ್ಷ ರಾಜೀನಾಮೆ ನೀಡಿ ಜೆಡಿಎಸ್‌ಗೆ ಸೇರಿದ್ದರು.


ಅವರನ್ನು ಪ್ರಾದೇಶಿಕ ಸಂಘಟನೆಯ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಹೆಚ್ ವಿಶ್ವನಾಥ್ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ಸಹ ಅಧಿಕೃತವಾಗಿ ಈ ಬಗ್ಗೆ ಪತ್ರಗಳನ್ನು ಕಳುಹಿಸಿಲ್ಲ.


"ಇಷ್ಟು ದೊಡ್ಡ ಸಂಖ್ಯೆಯ ಶಾಸಕರು ರಾಜೀನಾಮೆ ಇದೇ ಮೊದಲು"


ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಈ ಬಗ್ಗೆ ಮಾತನಾಡಿ, ಇದು ಅಭೂತಪೂರ್ವ ಸಂಗತಿ ಮತ್ತು ಹೆಚ್ಚಿನ ಸದಸ್ಯರು ಒಂದೇ ನಿರ್ದಿಷ್ಟ ಪಕ್ಷಕ್ಕೆ ಸೇರಿದವರು ಎಂಬುದು ಹೆಚ್ಚು ಆಶ್ಚರ್ಯಕರ ಸಂಗತಿಯಾಗಿದೆ.


“ಪರಿಸ್ಥಿತಿ ಅತ್ಯಂತ ನಿರಾಶಾದಾಯಕವಾಗಿದೆ. ಪ್ರಸ್ತುತ, ಚುನಾವಣೆಯಲ್ಲಿ ಸೋತವರಿಗೆ ಅವಕಾಶ ಕಲ್ಪಿಸಲು ರಾಜಕೀಯ ಪಕ್ಷಗಳ ಪುನರ್ವಸತಿ ಕೇಂದ್ರದಂತೆ ಪರಿಷತ್ತು ಕಾಣುತ್ತಿದೆ" ಎಂದರು.


ಕರ್ನಾಟಕದ ಮೇಲ್ಮನೆಗೆ 115 ವರ್ಷಗಳ ಇತಿಹಾಸವಿದೆ. ಇಷ್ಟು ದೊಡ್ಡ ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿದ್ದನ್ನು ಎಂದೂ ನೋಡಿಲ್ಲ. ಸಾಮಾನ್ಯವಾಗಿ, ಸದಸ್ಯರು ಪರಿಷತ್ತಿಗೆ ಸೇರಲು ವಿಧಾನಸಭೆಗೆ ರಾಜೀನಾಮೆ ನೀಡುತ್ತಾರೆ. ಆದರೆ ಇಲ್ಲಿ ಎಲ್ಲಾ ಚಿತ್ರಣ ತಲೆಕೆಳಗಾಗಿದೆ ಎಂದು ಹೊರಟ್ಟಿ ತಿಳಿಸಿದರು.
ಜೂನ್ ಅಂತ್ಯದೊಳಗೆ 66ಕ್ಕೆ ತಲುಪಲಿದೆ ಸಂಖ್ಯಾಬಲ


ಮೇಲ್ಮನೆಯಲ್ಲಿ ಉಳಿದಿರುವ 69 ಸದಸ್ಯರ ಪೈಕಿ ಇನ್ನೂ ಮೂವರ ಅವಧಿ ಮೇ ಮಧ್ಯದಿಂದ ಜೂನ್ ಅಂತ್ಯದೊಳಗೆ ಕೊನೆಗೊಳ್ಳಲಿದೆ. ಕಾಂಗ್ರೆಸ್ ಪಕ್ಷದ ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ಪಿ.ಆರ್.ರಮೇಶ್ ಅವರ ಅವಧಿ ಮೇ ಮಧ್ಯದಲ್ಲಿ ಕೊನೆಗೊಳ್ಳಲಿದ್ದು, ಸಿಎಂ ಲಿಂಗಪ್ಪ ಅವರ ಅವಧಿ ಜೂನ್ ಆರಂಭದಲ್ಲಿ ಕೊನೆಗೊಳ್ಳಲಿದೆ.


ಇದು ಒಟ್ಟು ಎಂಎಲ್‌ಸಿಗಳ ಸಂಖ್ಯೆಯನ್ನು 66ಕ್ಕೆ ತಲುಪಿಸಲಿದೆ. "ನನ್ನ ಸುಮಾರು 42 ವರ್ಷಗಳ ಅನುಭವದಲ್ಲಿ, ನಾನು ಪರಿಷತ್ತಿನ ಸದಸ್ಯರಾಗಿ ಅನೇಕ ಒಳ್ಳೆಯ ಜನರನ್ನು ನೋಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಚರ್ಚೆಯ ಗುಣಮಟ್ಟದಲ್ಲಿ ಅಂತಹ ಕುಸಿತವನ್ನು ನಾನು ನೋಡಿಲ್ಲ. ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕಲೆ, ಸಂಸ್ಕೃತಿ, ಸಂಗೀತ ಹೀಗೆ ನಾನಾ ಕ್ಷೇತ್ರಗಳಲ್ಲಿರುವ ಬುದ್ಧಿಜೀವಿಗಳನ್ನು, ಪರಿಣಿತರನ್ನು ಈ ಹಿಂದೆ ಪರಿಷತ್ತಿಗೆ ಕರೆತರುತ್ತಿದ್ದವು, ಆದರೆ ಈಗ ಎಲ್ಲವೂ ವದಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.‌


ಇದನ್ನೂ ಓದಿ:  Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು


ಕರ್ನಾಟಕ ವಿಧಾನ ಪರಿಷತ್' ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ದಿಷ್ಟ ಕಾರ್ಯ ನಿರ್ವಹಿಸುತ್ತವೆ. ಮೇಲ್ಮನೆಯ ಒಟ್ಟು ಬಲಾಬಲ 75 ಸದಸ್ಯರಿಂದ ಕೂಡಿದೆ.

First published: