DK Shivakumar| ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಹಗರಣಗಳಿಂದಲೇ ಕೂಡಿದೆ; ಡಿ.ಕೆ. ಶಿವಕುಮಾರ್ ಆಕ್ರೋಶ

ಕೋವಿಡ್ ಸಮಯದಲ್ಲಿ, ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ, ಅವರಿಗೆ ಸ್ವೆಟರ್ ನೀಡದೇ ಹಗರಣ ನಡೆಸಲಾಗಿದೆ. ಈ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಗರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

 • Share this:
  ಬೆಂಗಳೂರು (ಆಗಸ್ಟ್​ 25) "ಈ ಸರ್ಕಾರ ಆರೋಗ್ಯ ಕ್ಷೇತ್ರ, ಔಷಧ, ವೆಂಟಿಲೇಟರ್, ಆಂಬುಲೆನ್ಸ್ ವಿಚಾರವಾಗಿ ಹಗರಣ ಮಾಡುತ್ತಿದೆ ಎಂದು ನಾನು ಆಂಭದಿಂದಲೇ ಹೇಳುತ್ತಾ ಬಂದಿದ್ದೇನೆ. ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರುಪಾಯಿಗೆ ಖರೀದಿಸಿದ್ದನ್ನು, ರಾಜ್ಯ ಸರ್ಕಾರ 22 ಕೋಟಿ ರುಪಾಯಿಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ಮಕ್ಕಳಿಗೆ ನೀಡುವ ಸ್ವೆಟರ್ ನಲ್ಲೂ ಹಗರಣ ಮಾಡಿರುವುದು ನಾಚಿಕೆಗೇಡಿನ ಸಂಗತಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಇಂದು ಮಾಧ್ಯಮಗಳ ಎದುರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಡಿ.ಕೆ. ಶಿವಕುಮಾರ್​, "ಕೋವಿಡ್ ಸಮಯದಲ್ಲಿ, ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ, ಅವರಿಗೆ ಸ್ವೆಟರ್ ನೀಡದೇ ಹಗರಣ ನಡೆಸಲಾಗಿದೆ. ಈ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಗರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಲಾ ಮಕ್ಕಳಿಗೆ ಸ್ವೆಟರ್ ನೀಡುವ ಹಗರಣದಲ್ಲಿ ಕೋಮಲ್, ಜಗ್ಗೇಶ್ ಅವರು ಭಾಗಿಯಾಗಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ.

  ಒಂದು ಸರ್ಕಾರ ಮಕ್ಕಳಿಗೆ ಸ್ವೆಟರ್ ನೀಡಲು ತೀರ್ಮಾನ ಮಾಡಿರುವುದು ಸಂತೋಷದ ವಿಚಾರ. ಆದರೆ ಅದಕ್ಕೆ ಒಂದು ಟೆಂಡರ್ ಕರೆಯುತ್ತಾರೆ, ಅಲ್ಲಿ ಟೆಂಡರ್ ಆಗಿ ಹಣ ನೀಡಲಾಗಿದೆ. ಹಾಗಾದರೆ ಆ ಸ್ವೆಟರ್ ಗಳು ಎಲ್ಲಿವೆ? ಯಾವ ಮಕ್ಕಳಿಗೆ ಸಿಕ್ಕಿವೆ? ಶಾಲೆ ಯಾವಾಗ ಆರಂಭವಾಗಿದೆ? ಎಂಬುದರ ಬಗ್ಗೆ ಪಾಲಿಕೆಯವರು ತಿಳಿಸಬೇಕು. ಈ ವಿಚಾರವಾಗಿ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊತ್ತು ಉತ್ತರ ನೀಡಬೇಕು" ಎಂದು ಒತ್ತಾಯಿಸಿದರು.

  ಇದನ್ನೂ ಓದಿ: Anand Singh| ಅಸಮಾಧಾನ ಕೈಬಿಟ್ಟ ಆನಂದ್​ ಸಿಂಗ್; ಇಂದು ಪರಿಸರ ಇಲಾಖೆ ಅಧಿಕಾರಿಗಳ ಜೊತೆ ಸಭೆ!

  "ಪ್ರತಿಭಟನೆ ನಡೆಸದಂತೆ ಆಯುಕ್ತರೇ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅವರಿಂದ ವೈಫಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಟ್ಟಕ್ಕೆ ಬಿಬಿಎಂಪಿ ಆಯುಕ್ತರು ಇಳಿಯಬಾರದು. ಈ ವಿಚಾರದಲ್ಲಿ ಎಲ್ಲವೂ ನ್ಯಾಯಸಮ್ಮತವಾಗಿದ್ದರೆ ಆಯುಕ್ತರು ಎಲ್ಲವನ್ನೂ ನಿರ್ಭೀತಿಯಿಂದ ಎದುರಿಸಬೇಕು. ಅದನ್ನು ಬಿಟ್ಟು ಸಂಧಾನ ಮಾಡಿರುವುದು ನೋಡಿದರೆ ಇಲ್ಲಿ ಏನೋ ತಪ್ಪು ನಡೆದಿದೆ ಎಂಬುದು ರುಜುವಾತಾಗುತ್ತದೆ" ಎಂದು ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

  ಇನ್ನು ಯತ್ನಾಳ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಬಂಧನವಾದರೂ ಚಿಂತೆಯಿಲ್ಲ, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಬೇರೆಯವರ ವಿರುದ್ಧವೂ ನಮ್ಮ ಕಾರ್ಯಕರ್ತರು ಹೋರಾಡುತ್ತಾರೆ" ಎಂದರು.

  ಇದನ್ನೂ ಓದಿ: CoronaVirus| ಲಾಮಾ ಪ್ರತಿಕಾಯಗಳು ಕೋವಿಡ್-19 ವಿರುದ್ಧ ಹೋರಾಡಲಿವೆ; ಅಧ್ಯಯನಗಳಿಂದ ಸಾಬೀತು

  "ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಾತಿ ಗಣತಿ ವರದಿ ವಿಚಾರವಾಗಿ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ನಮ್ಮ ಸರ್ಕಾರವೇ 160 ಕೋಟಿ ರುಪಾಯಿ ವೆಚ್ಚ ಮಾಡಿ ಈ ಜಾತಿ ಗಣತಿ ನಡೆಸಿದ್ದು, ಈ ಮಾಹಿತಿ ವ್ಯರ್ಥವಾಗದೇ, ಇದು ಜನರಿಗೆ ಸಿಗುವಂತಾಗಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: