ಕೆಲಸ ಸಿಕ್ಕಿದ ಬಳಿಕ ಕಷ್ಟಪಟ್ಟು ಓದಿಸಿದ್ದ ಪೋಷಕರನ್ನೇ ಮರೆತ ಮಗ; ನ್ಯಾಯಮಂಡಳಿ ಮೆಟ್ಟಿಲೇರಿ ಗೆದ್ದ ತಂದೆ..!

ವಾದ ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ.

news18-kannada
Updated:February 22, 2020, 8:50 PM IST
ಕೆಲಸ ಸಿಕ್ಕಿದ ಬಳಿಕ ಕಷ್ಟಪಟ್ಟು ಓದಿಸಿದ್ದ ಪೋಷಕರನ್ನೇ ಮರೆತ ಮಗ; ನ್ಯಾಯಮಂಡಳಿ ಮೆಟ್ಟಿಲೇರಿ ಗೆದ್ದ ತಂದೆ..!
ಸಹಾಯಕ ಆಯುಕ್ತರ ಕಚೇರಿ
  • Share this:
ರಾಯಚೂರು (ಫೆ.22) : ತಂದೆ ಕೂಲಿ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಾರೆ. ತಂದೆಯ ಕಷ್ಟದ ದುಡಿಮೆಯ ಪ್ರತಿಫಲವಾಗಿ ಮಗ ವಿದ್ಯೆ ಪಡೆದು, ಉತ್ತಮ ಕೆಲಸಕ್ಕೂ ಸೇರುತ್ತಾನೆ. ಆದರೆ, ದೊಡ್ಡ ಕೆಲಸ ಸಿಕ್ಕಿದ ತಕ್ಷಣ ಆ ಮಗ ತನ್ನ ತಂದೆ-ತಾಯಿಯನ್ನು ಬಿಟ್ಟು ಐಷಾರಾಮಿ ಜೀವನ ನಡೆಸಿದಾಗ ಆ ತಂದೆ-ತಾಯಿ ಮನಸ್ಸಿಗೆ ಎಷ್ಟು ನೋವಾಗಬಾರದು. ಇಲ್ಲಿಯೂ ಆಗಿದ್ದು ಅದೆ. ಉತ್ತಮ ಕೆಲಸ ಸಿಕ್ಕೊಡನೆ ತಂದೆ ಬಿಟ್ಟು ಹೋದ ಮಗನ ವಿರುದ್ಧ ನ್ಯಾಯಮಂಡಳಿ ಮೆಟ್ಟಿಲೇರಿದ ತಂದೆಯೊಬ್ಬ ಮಗನಿಗೆ ಸರಿಯಾದ ಪಾಠ ಕಲಿಸಿದ್ದಾರೆ. 

ನಗರದ ನಿವಾಸಿ ಬೂದೆಪ್ಪ (ಹೆಸರು ಬದಲಾಯಿಸಿದೆ) ಕೂಲಿ ಮಾಡಿ ತನ್ನ ಐದು ಜನ ಮಕ್ಕಳನ್ನು ಓದಿಸುತ್ತಿದ್ದಾರೆ. ಅವರಲ್ಲಿ ಹಿರಿಯ ಮಗ ವರಪ್ರಸಾದ್ (ಹೆಸರು ಬದಲಾಯಿಸಿದೆ) ಓದು ಮುಗಿಸಿ, ಮೊಬೈಲ್ ಕಂಪನಿಯೊಂದರಲ್ಲಿ ನೆಟ್​ವರ್ಕ್ ಪ್ಲ್ಯಾನಿಂಗ್​ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ನಾಲ್ವರು ಈಗಲೂ ಓದುತ್ತಿದ್ದಾರೆ.

ತಿಂಗಳಿಗೆ 43 ಸಾವಿರ ಸಂಬಳ ಬರುತ್ತಿದ್ದರೂ ಆತ ಮನೆಗೆ ಒಂದು ನಯಾಪೈಸೆಯನ್ನು  ಕೊಡುತ್ತಿರಲಿಲ್ಲ. ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಭವಾದ ಮೇಲೆ ಹಿರಿಯ ಮಗ ಮನೆಗೆ ಬರುವುದನ್ನೇ ಬಿಟ್ಟಿದ್ದ. ಮೊದಲೇ ಕಷ್ಟದಲ್ಲಿರುವ ಕುಟುಂಬ ಮಗನ ನಡವಳಿಕೆಯಿಂದ ತಂದೆ-ತಾಯಿ ಮತ್ತಷ್ಟು ಕಂಗಾಲಾದರು. ಮಗ ಎಷ್ಟೇ ಬೇಡಿಕೊಂಡರೂ ಮನೆಗೆ ಬರಲಿಲ್ಲ. ಇದರಿಂದ ಬೇಸತ್ತ ತಂದೆ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಮೆಟ್ಟಿಲೇರಿ ಮಗನ ಮೇಲೆ ದೂರು ನೀಡಿದ್ದಾರೆ.

ಇದನ್ನೂ ಓದಿ :  ಕೂಲಿಯಾಳು ಸಿಗದೆ ಹೊಲದಲ್ಲಿಯೇ ಕೊಳೆಯುತ್ತಿದೆ ಹತ್ತಿ ಬೆಳೆ; ಸಮಸ್ಯೆಯ ಸುಳಿಯಲ್ಲಿ ರಾಯಚೂರಿನ ರೈತರು

ವಾದ ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ.

ಆದೇಶದಲ್ಲೇನಿದೆ..?

ಪ್ರತಿ ತಿಂಗಳು 10ನೇ ತಾರೀಕಿನ ಒಳಗೆ ಆರ್​ಟಿಜಿಎಸ್ ಮೂಲಕ 20 ಸಾವಿರ ರೂಪಾಯಿಯನ್ನು ತನ್ನ ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ತಿಂಗಳಿಗೆ ಒಮ್ಮೆ ತಂದೆ ತಾಯಿಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಬೇಕು. ಭಾನುವಾರ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು ಎಂದು ಆದೇಶ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತಂದೆ ಹಾಗೂ ಮಗ ಒಪ್ಪಿದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.

 
First published: February 22, 2020, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading