ಪುತ್ತೂರು (ಮಾ. 3): ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ದಕ್ಷಿಣಕನ್ನಡ ಜಿಲ್ಲೆಯ ಅತಿದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆ ಬೆಳೆದು ನಿಂತಿದೆ. ಆಸ್ಪತ್ರೆ ಬೆಳೆದು ನಿಂತಂತೆ ಹಲವಾರು ಮೂಲಭೂತ ವ್ಯವಸ್ಥೆಗಳ ಪಟ್ಟಿಯೂ ಬೆಳೆಯಲಾರಂಭಿಸಿದೆ. ಆಸ್ಪತ್ರೆಯಲ್ಲಿ ಇದೀಗ ಸಾಕಷ್ಟು ವೈದ್ಯರು, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 500ಕ್ಕೂ ಮಿಕ್ಕಿದ ಹೊರರೋಗಿಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಸರಿಯಾದ ಶವಾಗಾರದ ವ್ಯವಸ್ಥೆಯಿಲ್ಲದ ಕಾರಣ, ಅತೀ ಅಗತ್ಯದ ಸಂದರ್ಭದಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅಪರಾಧ ಕೃತ್ಯ, ಅಪರಿಚಿತ ಶವ ಮೊದಲಾದ ಶವಗಳನ್ನು ಸಂರಕ್ಷಿಸಿಡುವ ವ್ಯವಸ್ಥೆಯೂ ಈ ಆಸ್ಪತ್ರೆಗೆ ಬೇಕಾಗಿದೆ.
ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪುತ್ತೂರು ಸರಕಾರಿ ಆಸ್ಪತ್ರೆ ಪಾತ್ರವಾಗಿದೆ. ಕೊರೋನಾ ಮಹಾಮಾರಿಯಂತಹ ಕಠಿಣ ಸಂದರ್ಭದಲ್ಲೂ ಈ ಆಸ್ಪತ್ರೆಯ ಪ್ರತಿನಿತ್ಯ ಡಯಾಲಿಸೀಸ್ ರೋಗಿಗಳಿಗೆ ಡಯಾಲಿಸೀಸ್ ವ್ಯವಸ್ಥೆಯನ್ನು ಕಲ್ಪಿಸಿರುವುದಲ್ಲದೆ, ರೋಗ ಹರಡದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಪ್ರಶಂಸೆಗೂ ಪಾತ್ರವಾಗಿದೆ. ಪ್ರತಿ ದಿನ ಸರಾಸರಿ 500 ಕ್ಕೂ ಮಿಕ್ಕಿದ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆಗೆ ಪುತ್ತೂರು ಮಾತ್ರವಲ್ಲದೆ, ಹೊರ ತಾಲೂಕು ಕೇಂದ್ರಗಳಿಂದಲೂ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸಾಧಾರಣ ಎಲ್ಲಾ ವ್ಯವಸ್ಥೆಗಳು ಸರಿಯಿರುವ ಈ ಆಸ್ಪತೆಯಲ್ಲಿ ಸರಿಯಾದ ಶವಾಗಾರದ ಕೊರತೆ ಮಾತ್ರ ಎದ್ದು ಕಾಣಲಾರಂಭಿಸಿದೆ. ಆಸ್ಪತ್ರೆ ಕಟ್ಟಡದಿಂದ ಪ್ರತ್ಯೇಕವಾಗಿ ಇರುವ ಈ ಶವಾಗಾರ ಸಣ್ಣ ಕಟ್ಟಡದಲ್ಲಿದ್ದು, ಕಟ್ಟಡದ ಸುತ್ತ ಬಿರುಕುಗಳು ಬಿದ್ದಿವೆ. ಕೇವಲ ಎರಡು ಶವಗಳನ್ನು ಮಾತ್ರ ಇಡುವ ವ್ಯವಸ್ಥೆಯಿದ್ದು, ಅಫಘಾತ ಅಥವಾ ಇನ್ನಿತರ ಅಪರಾಧ ಕೃತ್ಯಗಳ ಕಾರಣ ಹೆಚ್ಚಿನ ಸಂಖ್ಯೆಯ ಶವಗಳು ಒಂದೇ ಸಮಯಕ್ಕೆ ಬಂದಾಗ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳು ಶವಗಳನ್ನು ಇಡಲು ಪರದಾಡಬೇಕಾದ ಸ್ಥಿತಿಯು ಸಾಕಷ್ಟು ಬಾರಿ ನಿರ್ಮಾಣಗೊಂಡಿದೆ. ಅಲ್ಲದೆ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲೂ ವೈದ್ಯರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಡ್ರೆಸ್ಸಿಂಗ್ ರೂಂ ನ ವ್ಯವಸ್ಥೆಯಿಲ್ಲ. ಅಪರಿಚಿತ ಶವ ಪತ್ತೆಯಾದಲ್ಲಿ ಆ ಮೃತದೇಹವನ್ನು ಸುರಕ್ಷಿತವಾಗಿ ಇಡುವ ಡೀಫ್ರೀಝರ್ ವ್ಯವಸ್ಥೆಯೂ ಈ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಈ ಎಲ್ಲಾ ವ್ಯವಸ್ಥೆಗೂ ಮಂಗಳೂರನ್ನೇ ಅವಲಂಭಿಸಬೇಕಾದ ಅನಿವಾರ್ಯತೆಯಿದೆ.
ಇದನ್ನು ಓದಿ: ಬಿಗ್ಬಾಸ್ ಮನೆ ಪ್ರವೇಶಕ್ಕೆ ಮುನ್ನ ಅಭಿಮಾನಿಗಳೊಂದಿಗೆ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ್ದ ಸನ್ನಿಧಿ
ಮೃತದೇಹಗಳನ್ನು ಸಂರಕ್ಷಿಸಿಡಲು ಬೇಕಾದ ವ್ಯವಸ್ಥೆಯಿಲ್ಲದ ಕಾರಣ,ಮಂಗಳೂರಿಗೇ ಸಾಗಿಸಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಸಂಬಂಧಪಟ್ಟ ವಾರೀಸುದಾರರು ಹಲವು ಬಾರಿ ಮೃತದೇಹದಕ್ಕಾಗಿ ತಾಸುಗಟ್ಟಲೆ ಕಾಯಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಯೋಜನೆಗಳು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಶವಾಗಾರವನ್ನೂ ಉನ್ನತೀಕರಣಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಪ್ರಸ್ತುತ ಶವಾಗಾರ ಎದುರಿಸುತ್ತಿರುವ ಸಮಸ್ಯೆಗಳು ಆಸ್ಪತ್ರೆಯ ಆಧುನೀಕರಣದ ವರೆಗೂ ಮುಂದುವರಿಯಲಿದೆಯೇ ಎನ್ನುವ ಗೊಂದಲವೂ ಮೂಡಲಾರಂಭಿಸಿದೆ. ಹಲವಾರು ಸಂಘ-ಸಂಸ್ಥೆಗಳು ಆಸ್ಪತ್ರೆಗೆ ಸುಸಜ್ಜಿತವಾದ ಶವಾಗಾರವನ್ನು ನಿರ್ಮಿಸಿಕೊಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರೂ, ಆಸ್ಪತ್ರೆಯ ಉನ್ನತೀಕರಣದ ಯೋಜನೆಯು ಚರ್ಚೆಯ ಹಂತದಲ್ಲಿರುವಾಗ, ಈ ಪ್ರಸ್ತಾವನೆಯನ್ನು ಪಡೆಯುವುದೋ, ಬಿಡುವುದೋ ಎನ್ನುವ ಗೊಂದಲದಲ್ಲೂ ಆರೋಗ್ಯ ಇಲಾಖೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ