ಮಳೆಗಾಲದಲ್ಲಿ ಮಾತ್ರ ಹರಿಯುವ ಈ ನದಿಗೆ ದಿಕ್ಕು ದೆಸೆಯಿಲ್ಲ, ಕುಡಿಯಲೂ ಯೋಗ್ಯವಲ್ಲ; ಎಲ್ಲಿದೆ ಆ ಉಪ್ಪು ನೀರ ನದಿ?

ನದಿಯಲ್ಲಿನ ಉಪ್ಪಿನ ಅಂಶ ಒಂದೆಡೆಯಾದರೆ, ಈ ನದಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳು ಡೋಣಿ ನದಿ ನದಿ ಬೇಕಾಬಿಟ್ಟಿ ಹರಿಯಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.  ಈ ನದಿಯ ಹೂಳೆತ್ತುವ ವಿಚಾರ ಹಲವಾರು ದಶಕಗಳಿಂದ ಪ್ರಾಯೋಗಿಕವಾಗಿ ಯೋಜನೆಗಳು ಜಾರಿಯಾಗಿವೆಯಾದರೂ ಅವು ಕೇವಲ ಹೆಸರಿಗಷ್ಟೇ ಸೀಮಿತವಾಗಿರುವುದು ಮಾತ್ರ ವಿಪರ್ಯಾಸ.

news18india
Updated:January 8, 2020, 7:25 AM IST
ಮಳೆಗಾಲದಲ್ಲಿ ಮಾತ್ರ ಹರಿಯುವ ಈ ನದಿಗೆ ದಿಕ್ಕು ದೆಸೆಯಿಲ್ಲ, ಕುಡಿಯಲೂ ಯೋಗ್ಯವಲ್ಲ; ಎಲ್ಲಿದೆ ಆ ಉಪ್ಪು ನೀರ ನದಿ?
ವಿಜಯಪುರದ ಡೋನಿ ನದಿ.
  • Share this:
ವಿಜಯಪುರ (ಜ.8); ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಮೈದಳೆದು ಹರಿಯುವ ಸಾಕಷ್ಟು ನದಿಗಳು ಈ ಭೂಮಿಯ ಮೇಲಿದೆ. ಆದರೆ, ಎಲ್ಲಾ ನದಿಗೂ ಹರಿಯುವ ದಿಕ್ಕು ಇದ್ದೇ ಇರುತ್ತದೆ. ಆದರೆ, ಈ ನದಿಗೆ ಮಾತ್ರ ದಿಕ್ಕು ದೆಸೆ ಇಲ್ಲ. ಇನ್ನೂ ಮಳೆ ನೀರಿನ ನದಿಯಾದರೂ ಈ ನದಿಯಲ್ಲಿರುವ ಉಪ್ಪಿನ ಅಂಶ ಸ್ವತಃ ವಿಜ್ಞಾನಿಗಳನ್ನೂ ಸಹ ಆಶ್ಚರ್ಯಕ್ಕೆ ದೂಡಿದೆ. ಇಷ್ಟಕ್ಕೂ ಈ ವಿಶಿಷ್ಟ ನದಿ ಎಲ್ಲಿದೆ? ಎಂಬ ಪ್ರಶ್ನೆಗೆ ಉತ್ತರ ವಿಜಯಪುರ ಮತ್ತು ಆ ನದಿಯ ಹೆಸರು ಡೋನಿ.

ಕರ್ನಾಟಕ ರಾಜ್ಯದಲ್ಲಿಯೇ ಹರಿಯುವ ಈ ಉಪ್ಪು ನೀರಿನ ನದಿಯ ಕುರಿತ ಒಂದು ರೋಚಕ ನೈಜ ಕಥೆ ಇಲ್ಲಿದೆ ನೋಡಿ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಬಳಿ ಹುಟ್ಟುವ ಈ ನದಿ ಹೊನವಾಡದ ಮೂಲಕ ವಿಜಯಪುರವನ್ನು ಪ್ರವೇಶಿಸುತ್ತದೆ. ಆದರೆ, ಈ ನೀರು ಕುಡಿಯಲು ಯೋಗ್ಯವಲ್ಲ.  ಸಮುದ್ರದ ನೀರಿನ ರುಚಿ ಹೊಂದಿರುವ ನದಿಯಿದು.

ಈ ಹಿಂದೆ ಪ್ರಚಲಿತವಾಗಿದ್ದ ಈ ನದಿ ಹರಿದರೆ ನಾಡೆಲ್ಲ ಕಾಳು ಎಂಬ ಗಾದೆ ಮಾತು ಈಗ ಬದಲಾಗಿದೆ.  ಇದೀಗ ಈ ನದಿ ಹರಿದರೆ ಊರೆಲ್ಲ ಹಾಳು ಎಂದು ಬದಲಾಗಿದೆ.  ಮಳೆಯಾದಾಗ ಮಾತ್ರ ಈ ನದಿಯಲ್ಲಿ ನೀರು ಹರಿಯುತ್ತದೆ. ಆ ಸಂದರ್ಭದಲ್ಲಿ ಸೃಷ್ಠಿಸುವ ಅನಾಹುತದಿಂದಾಗಿ ಮಳೆ ಬಂದರೆ ಈ ನದಿ ತೀರದ ಗ್ರಾಮಸ್ಥರು ಹೆದರುತ್ತಾರೆ.  ಪ್ರತಿ ಬಾರಿ ಮಳೆ ಬಂದಾಗ ತನ್ನ ದಿಕ್ಕು ಮತ್ತು ದಿಸೆಯನ್ನು ಬದಲಿಸುವ ಈ ನದಿ ಹಳಿ ತಪ್ಪಿದ ರೈಲಿನಂತೆ ಬೇಕಾ ಬಿಟ್ಟಿಯಾಗಿ ತನ್ನ ಹರಿವಿನ ಪಾತ್ರವನ್ನು ಬದಲಿಸುತ್ತದೆ.

ಹಲವೆಡೆ ನಾನಾ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದರೆ, ಬಹುತೇಕ ಕಡೆ ನದಿ ತೀರದ ಹೊಲಗಳನ್ನು ಮುಳುಗಡೆ ಮಾಡುತ್ತದೆ. ಜೊತೆಗೆ ಆ ಹೊಲದಲ್ಲಿರುವ ಫಲವತ್ತಾದ ಮಣ್ಣಲ್ಲೂ ಉಪ್ಪಿನ ಅಂಶವನ್ನು ಬಿತ್ತಿ ಕೃಷಿಯನ್ನೇ ನಾಶ ಮಾಡುತ್ತದೆ.  ಜಿಲ್ಲೆಯಲ್ಲಿ 36 ಗ್ರಾಮಗಳ ಮೂಲಕ ಸುಮಾರು 158 ಕಿಲೋ ಮೀಟರ್ ಹರಿಯುವ ಈ ನದಿ ಹಲವಾರು ಬಾರಿ ಜನ ಮತ್ತು ಜಾನುವಾರುಗಳನ್ನು ಬಲಿ ಪಡೆದಿದೆ.  ಆದರೆ, ಈ ನದಿ ಉಕ್ಕಿ ಹರಿದರೆ ರೈತರು ಹೆದರಲು ಪ್ರಮುಖ ಕಾರಣ ನದಿ ತನ್ನ ನೀರು ಹರಿಯುವ ಪಾತ್ರವನ್ನು ಆಗಿಂದಾಗ ಬದಲಿಸುವ ಪರಿ.

ಹೊಲದಲ್ಲಿ ಬೆಳೆದ ಬೆಳೆ ಕೊಚ್ಚಿಕೊಂಡು ಹೋಗುವ ಆತಂಕ.  ಕೈಗೆ ಬಂದ ತುತ್ತು ಬಾಯಿಗೆ ಬಾರದ ದುಸ್ಥಿತಿ. ವಿಜಾಪುರ ಜಿಲ್ಲೆಯ ಅನ್ನದಾತರ ಪಾಲಿಗೆ ಇದು ವರವೊ? ಶಾಪವೊ ಎಂಬಂತಾಗಿದೆ.  ಸಮುದ್ರದ ನೀರು ಉಪ್ಪು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.  ಆದರೆ, ರಾಜ್ಯದಲ್ಲಿ ಹರಿಯುವ ಈ ನದಿಯಲ್ಲಿ ಉಪ್ಪಿನ ಅಂಶ ಇಷ್ಟು ಗಾಢವಾಗಿರಲು ಏನು ಕಾರಣ? ಎಂಬುದು ಸ್ವತಃ ವಿಜ್ಞಾನಿಗಳಿಗಳನ್ನೂ ಆಶ್ಚರ್ಯಕ್ಕೆ ದೂಡಿದೆ.

ಉಪ್ಪಿನ ಅಂಶ ಒಂದೆಡೆಯಾದರೆ, ಈ ನದಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳು ಡೋಣಿ ನದಿ ನದಿ ಬೇಕಾಬಿಟ್ಟಿ ಹರಿಯಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.  ಈ ನದಿಯ ಹೂಳೆತ್ತುವ ವಿಚಾರ ಹಲವಾರು ದಶಕಗಳಿಂದ ಪ್ರಾಯೋಗಿಕವಾಗಿ ಯೋಜನೆಗಳು ಜಾರಿಯಾಗಿವೆಯಾದರೂ ಅವು ಕೇವಲ ಹೆಸರಿಗಷ್ಟೇ ಸೀಮಿತವಾಗಿರುವುದು ಮಾತ್ರ ವಿಪರ್ಯಾಸ.

ಇದನ್ನೂ ಓದಿ : ಮೂಲಭೂತ ಸೌಲಭ್ಯವಿದ್ದರಷ್ಟೇ ಹಾಸನದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ; ಶಾಸಕ ಪ್ರೀತಮ್ ಗೌಡ
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ