ಹೈದ್ರಾಬಾದ್​ ಕರ್ನಾಟಕಕ್ಕೆ 371ಜೆ ಅಡಿಯಲ್ಲಿ ಮೀಸಲಾತಿ ಸಿಕ್ಕರೂ ರಾಯಚೂರಿಗೆ ಮಾತ್ರ ಅನ್ಯಾಯ; ಪರರ ಪಾಲಾಗುತ್ತಿರುವ ಸವಲತ್ತುಗಳು

ಈಗ ರಾಯಚೂರು ಜಿಲ್ಲೆಯ ರವೀಂದ್ರ ಬಂಡಿ ಎಂಬುವವರು ಸೇರಿದಂತೆ 3 ಜನರಿಗೆ ಬಡ್ತಿ ನೀಡಲು ಜೇಷ್ಠತಾ ಆಧಾರದಿಂದಾಗಿ ಆದೇಶಿಸಲಾಗಿದೆ. ಆದರೆ ಇದಕ್ಕೆ ಕಲ್ಯಾಣ ಕರ್ನಾಟಕ ಪದವಿ ಶಿಕ್ಷಣ ಇಲಾಖೆಯ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಶಿಕ್ಷಣ ಸಚಿವರಿಗೆ ಈ ಭಾಗದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಈ ಅನ್ಯಾಯ ಸರಿಪಡಿಸಲು ಮುಂದಾಗಿಲ್ಲ.

news18-kannada
Updated:January 12, 2020, 7:41 AM IST
ಹೈದ್ರಾಬಾದ್​ ಕರ್ನಾಟಕಕ್ಕೆ 371ಜೆ ಅಡಿಯಲ್ಲಿ ಮೀಸಲಾತಿ ಸಿಕ್ಕರೂ ರಾಯಚೂರಿಗೆ ಮಾತ್ರ ಅನ್ಯಾಯ; ಪರರ ಪಾಲಾಗುತ್ತಿರುವ ಸವಲತ್ತುಗಳು
ರಾಯಚೂರು (ಪ್ರಾತಿನಿಧಿಕ ಚಿತ್ರ)
  • Share this:
ರಾಯಚೂರು (ಜ.12): ರಾಜ್ಯದಲ್ಲೇ ತೀರಾ ಹಿಂದುಳಿದಿರುವ ಜಿಲ್ಲೆಗಳ ಪೈಕಿ ರಾಯಚೂರು ಸಹ ಒಂದು. ಹೈದ್ರಾಬಾದ್​ ಕರ್ನಾಟಕದ ಭಾಗವಾಗಿರುವ ಈ ಜಿಲ್ಲೆ ಅಭಿವೃದ್ಧಿಯ ವಿಚಾರದಲ್ಲಿ ಶತಮಾನಗಳಷ್ಟು ಹಿಂದೆ ಉಳಿದಿದೆ. ಇದೇ ಕಾರಣಕ್ಕೆ ದಶಕಗಳ ಹೋರಾಟದ ಫಲವಾಗಿ ಕಲಂ 371ಜೆ ಅಡಿಯಲ್ಲಿ ಹೈ. ಕರ್ನಾಟಕಕ್ಕೆ ವಿಶೇಷ ಮೀಸಲಾತಿ ದಕ್ಕಿತ್ತು. ಆದರೆ, ಇದೀಗ ಈ ಸವಲತ್ತೂ ಸಹ ಇಲ್ಲಿನ ಯುವಕರ ಕೈ ತಪ್ಪುತ್ತಿದ್ದು ಪರರ ಪಾಲಾಗುತ್ತಿದೆ. ಈ ಭಾಗದವರಿಗೆ ಸಿಗಬೇಕಾದ ಮೀಸಲಾತಿಯನ್ನು ಹೊರಗಿನವರು ಪಡೆಯುತ್ತಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ರಾಜ್ಯ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಜೇಷ್ಠತೆಯ ಆಧಾರದಲ್ಲಿ 52 ಜನರಿಗೆ ಹಾಗೂ ಹೈದ್ರಾಬಾದ್​ ಕರ್ನಾಟಕ ಭಾಗದ 25 ಜನರಿಗೆ ಬಡ್ತಿ ನೀಡಲು ಆದೇಶಿಸಲಾಗಿದೆ. ಈ ಸಂಬಂಧ ಜನವರಿ 13 ರಂದು ಆಯಾಯ ಉಪನಿರ್ದೇಶಕರು ಕೌನ್ಸಿಲಿಂಗ್ ನಡೆಸಲಿದ್ದಾರೆ. ಆದರೆ, ಹೈದ್ರಾಬಾದ್​ ಕರ್ನಾಟಕ ಭಾಗಕ್ಕೆ ಸೇರದವರೂ ಸಹ ಈ ಕೋಟಾದ ಅಡಿಯಲ್ಲಿ ಬಡ್ತಿ ನೀಡಲಾಗುತ್ತಿದೆ. ಈಗಾಗಲೇ ಮೂವರಿಗೆ ಬಡ್ತಿ ನೀಡಲು ಉದ್ದೇಶಿಸಲಾಗುತ್ತಿದೆ.

ಪರಿಣಾಮ ಹೈ. ಕರ್ನಾಟಕ ಭಾಗದವರು ಅರ್ಹತೆ ಹೊಂದಿದ್ದರೂ ಜೇಷ್ಠತಾ ಆಧಾರದಲ್ಲಿ ಸ್ಥಳೀಯ ವೃಂದದಲ್ಲಿ ಈ ಮೂವರೂ ಬಡ್ತಿ ಹೊಂದಲಿದ್ದಾರೆ. ಈ ಹಿಂದೆ ಸರಕಾರ 2013ರಲ್ಲಿ ಯಾರು ತಮ್ಮ ಸೇವಾ ಪುಸ್ತಕದಲ್ಲಿ ಸ್ಥಳೀಯರೆಂದು ದಾಖಲಿಸಿರುತ್ತಾರೋ ಅವರಿಗೆ ಮಾತ್ರ ಈ ಹಕ್ಕು ಲಭಿಸುತ್ತದೆ ಎಂದು ಆದೇಶಿಸಿದೆ. 2013 ರ ನಂತರ ಅವರಿಗೆ 371 ಜೆ ಪ್ರಮಾಣ ಪತ್ರ ನೀಡಿದ್ದರೂ ಸಹ ಅದು ಉರ್ಜಿತವಲ್ಲ.

ಈಗ ರಾಯಚೂರು ಜಿಲ್ಲೆಯ ರವೀಂದ್ರ ಬಂಡಿ ಎಂಬುವವರು ಸೇರಿದಂತೆ 3 ಜನರಿಗೆ ಬಡ್ತಿ ನೀಡಲು ಜೇಷ್ಠತಾ ಆಧಾರದಿಂದಾಗಿ ಆದೇಶಿಸಲಾಗಿದೆ. ಆದರೆ ಇದಕ್ಕೆ ಕಲ್ಯಾಣ ಕರ್ನಾಟಕ ಪದವಿ ಶಿಕ್ಷಣ ಇಲಾಖೆಯ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಶಿಕ್ಷಣ ಸಚಿವರಿಗೆ ಈ ಭಾಗದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಈ ಅನ್ಯಾಯ ಸರಿಪಡಿಸಲು ಮುಂದಾಗಿಲ್ಲ.

ಶಿಕ್ಷಣ ಸಚಿವರು ಸಹ ಈ ಭಾಗದ ಜನರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದಾರೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಇಲಾಖೆಯ ನಿರ್ದೇಶಕರನ್ನು ವಜಾಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಪದವಿ ಶಿಕ್ಷಣ ಇಲಾಖೆಯ ಉಪನ್ಯಾಸಕರ ಸಂಘ ಒತ್ತಾಯಿಸಿದೆ. ಈ ಭಾಗದವರಿಗೆ ಕಾನೂನು ಬದ್ದವಾಗಿ ಸಿಗಬಹುದಾದ ಮೀಸಲಾತಿಯನ್ನು ಯಾವ್ಯಾವುದೋ ಕಾರಣಕ್ಕೆ ಕಸಿದುಕೊಳ್ಳುತ್ತಿದ್ದು ಇದರಿಂದ ಈ ಭಾಗದ ಜನರು ಮತ್ತೆ ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಮತ್ತೆ ಮತ್ತೆ ಕೇಳಿಬರುತ್ತಿದೆ. ಈ ಕುರಿತು ಸರ್ಕಾರ ಯಾವ ಕ್ರಮ ಜರುಗಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಮಹಾರಾಷ್ಟ್ರದ ಪಲ್ಗಾರ್​ನಲ್ಲಿ ಕಾರ್ಖಾನೆ ಸ್ಪೋಟ; ಎಂಟು ಸಾವು, ಹಲವು ಮಂದಿಗೆ ಗಾಯ

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ