ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾರ್ಚ್ 31 ರವರೆಗೆ ಸಾರ್ವಜನಿಕರಿಗೆ ನಿರ್ಬಂಧ

ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕೋರಿದ್ದಾರೆ. ಒಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸದಂತೆ ಜಿಲ್ಲಾಡಳಿತ ಮಾರ್ಚ್ ಅಂತ್ಯದವರೆಗೆ ಅನ್ವಯವಾಗುವಂತೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದು ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್

  • Share this:
ಕೊಡಗು: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಮತ್ತೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಜೊತೆಗೆ ಕೊಡಗಿಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ. ಆ ರಾಜ್ಯದಿಂದಾಗಿ ಕೊಡಗಿಗೂ ಕೊರೊನಾ ಹರಡದಂತೆ ಕ್ರಮಕೈಗೊಳ್ಳುವುದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸದಂತೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾರ್ಚ್ 31 ರವರೆಗೆ ಈ ನಿರ್ಬಂಧ ವಿಧಿಸಲಾಗಿದೆ.

ಸಾಂಪ್ರದಾಯಿಕ ವಿಧಿ ವಿಧಾನಗಳ ಕಾರ್ಯಕ್ರಮವನ್ನು ಎಂದಿನಂತೆ ಮುಂದುವರೆಸಬಹುದು. ಆದರೆ ಸಾರ್ವಜನಿಕರು ಭಾಗವಹಿಸುವಂತಿಲ್ಲ. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಅರ್ಚಕರು, ದೇವಾಲಯದ ಪ್ರಮುಖರು ಕಡ್ಡಾಯವಾಗಿ ಮಾಸ್ಕ್ ಸ್ಯಾನಿಟೈಸರ್ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮಗಳನ್ನು ನೆರವೇರಿಸಬೇಕು. ಅಷ್ಟೇ ಅಲ್ಲ ಮುಖ್ಯವಾಗಿ 72 ಗಂಟೆ ಒಳಗಾಗಿ ಪಡೆದ ಆರ್‍ಟಿಪಿಸಿಆರ್ ಪರೀಕ್ಷೆಯ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಬಳಿಕವಷ್ಟೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾಡಳಿತ ಸೂಚಿಸಿದೆ.

ಆ ಮೂಲಕ ಕೊಡಗಿನಲ್ಲಿ ತಹಬದಿಯಲ್ಲಿರುವ ಕೋವಿಡ್ ಪ್ರಕರಣಗಳನ್ನು ಮತ್ತಷ್ಟು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಜಿಲ್ಲೆಯಲ್ಲಿ ವಿರೋಧವೂ ಕೂಡ ವ್ಯಕ್ತವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ 15 ರ ನಂತರ ಜಿಲ್ಲೆಯಲ್ಲಿ ಗ್ರಾಮ ದೇವತೆಗಳ ಹಬ್ಬಗಳು ಆರಂಭವಾಗುತ್ತವೆ. ಏಪ್ರಿಲ್ 15 ರವರೆಗೆ ಈ ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಮಾತ್ರ ಯಾಕೆ ಇಂತಹ ನಿರ್ಬಂಧ ಎಂದು ಸಾರ್ವಜನಿಕರಾದ ಮೈನಾ ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಈಗಾಗಲೇ ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರದ ನಿರ್ದೇಶನ ಇರುವುದರಿಂದ ನಿರ್ದೇಶನದ ಆಧಾರದಲ್ಲಿ ಈ ಕ್ರಮ ಕೈಗೊಂಡಿದ್ದೇವೆ.

ಈಗಾಗಲೇ ಜಿಲ್ಲೆಯ ಗಡಿಭಾಗವಾಗಿರುವ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿಗಳನ್ನು ಒಳಗೊಂಡ ತಪಾಸಣಾ ತಂಡಗಳನ್ನು ನೇಮಿಸಲಾಗಿದೆ. ಅವುಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದು, ಕೋವಿಡ್ ನೆಗೆಟಿವ್ ವರದಿ ಇಲ್ಲದಿರುವವರಿಗೆ ಜಿಲ್ಲೆಗೆ ಎಂಟ್ರಿಗೆ ಅವಕಾಶ ನೀಡುತ್ತಿಲ್ಲ. ಇದಕ್ಕೆಲ್ಲಾ ಜಿಲ್ಲೆಯ ಸಾರ್ವಜನಿಕರು ಬೆಂಬಲ ನೀಡಿ ಕೊರೊನಾ ಹರಡದಂತೆ ತಡೆಯುವಲ್ಲಿ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಕೂಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸದೆ ಆದೇಶಕ್ಕೆ ಸಹಕಾರ ನೀಡಬೇಕು.

ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕೋರಿದ್ದಾರೆ. ಒಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸದಂತೆ ಜಿಲ್ಲಾಡಳಿತ ಮಾರ್ಚ್ ಅಂತ್ಯದವರೆಗೆ ಅನ್ವಯವಾಗುವಂತೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದು ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
Published by:zahir
First published: