ಒಳ್ಳೆ ಕಾರ್ಯಕ್ಕೆ ಹಲವು ವಿಘ್ನಗಳು ಎದುರಾಗೋದು ಸಾಮಾನ್ಯವೇ. ಇಂಥಹ ಒಂದು ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಯೊಂದಕ್ಕೆ ಇಡೀ ಗ್ರಾಮದ ಒಂದೇ ಒಂದು ಕುಟುಂಬ (Family) ಆಕ್ಷೇಪ ವ್ಯಕ್ತಪಡಿಸಿದಾಗ ಇಡೀ ಗ್ರಾಮ ಆಕ್ಷೇಪವನ್ನು ಸವಾಲಾಗಿ ಸ್ವೀಕರಿಸಿ, ನಡೆಸಲು ಮುಂದಾಗಿದ್ದ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ (Public) ಉಪಯೋಗಕ್ಕೆ ನೀಡಿದ್ದಾರೆ. ಹೌದು ಇದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಎನ್ನುವ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ನಡೆದ ಸವಾಲಿನ ಫಲಿತಾಂಶ ಇದು.
2 ದಶಕದಿಂದ ಬಸ್ ನಿಲ್ದಾಣಕ್ಕೆ ಹೋರಾಟ
ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಎಂಬಲ್ಲಿನ ಗ್ರಾಮಸ್ಥರು ತಮಗೊಂದು ಬಸ್ ನಿಲ್ದಾಣ ಬೇಕೆಂದು ಕಳೆದ ಎರಡು ದಶಕಗಳಿಂದ ಅಧಿಕಾರಿಗಳ ಹಾಗು ಜನಪ್ರತಿನಿಧಿಗಳ ಹಿಂದೆ ದಂಬಾಲು ಬಿದ್ದಿದ್ದರು. ಪುತ್ತೂರು- ಉಪ್ಪಿನಂಗಡಿ ಮಧ್ಯೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಗ್ರಾಮದ ಜನ ಮಳೆ ಹಾಗು ಬಿಸಿಲಿನ ಸಂದರ್ಭದಲ್ಲಿ ಬಸ್ ಗಾಗಿ ಕಾಯುವ ಯಾವುದೇ ವ್ಯವಸ್ಥೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು.
ಪುತ್ತೂರು ಶಾಸಕರೇ ನೆರವಿಗೆ ಬಂದ್ರು ಸಾಗಲಿಲ್ಲ ಕೆಲಸ
ಇದೀಗ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ತನ್ನ ವಿಶೇಷ ಅನುದಾನದ ಮೂಲಕ ಐದು ಲಕ್ಷ ರೂಪಾಯಿಯನ್ನು ನೂತನ ಬಸ್ ನಿಲ್ದಾಣಕ್ಕಾಗಿ ಮೀಸಲಿಟ್ಟಿದ್ದರು. ಈ ಸಂಬಂಧ ಗ್ರಾಮಸ್ಥರೆಲ್ಲಾ ಸೇರಿ ಬಸ್ ನಿಲ್ದಾಣದ ಕಾಮಗಾರಿಗೆ ತಮ್ಮ ಕೈಯಲ್ಲಾದ ನೆರವನ್ನು ನೀಡಲೂ ಮುಂದಾಗಿದ್ದರು.
ಸ್ಥಳ ನಮ್ಮದೆಂದು ಕ್ಯಾತೆ ತೆಗೆದ ಕುಟುಂಬ
ಆದರೆ ಬಸ್ ನಿಲ್ದಾಣ ನಿರ್ಮಿಸುವ ಸ್ಥಳ ತಮ್ಮ ಜಾಗಕ್ಕೆ ಅಡ್ಡವಾಗುತ್ತಿದೆ ಎಂದು ಸ್ಥಳೀಯ ಕುಟುಂಬವೊಂದು ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಬಸ್ ನಿಲ್ದಾಣದ ಕನಸು ಮತ್ತೆ ಭಗ್ನವಾಗುತ್ತದೆ ಎನ್ನುವುದನ್ನು ಅರಿತ ಗ್ರಾಮಸ್ಥರು ಹೇಗಾದರೂ ಮಾಡಿ ಈ ಬಾರಿ ಬಸ್ ನಿಲ್ದಾಣವನ್ನು ಮಾಡಿಯೇ ಸಿದ್ಧ ಎಂದು ಪಣ ತೊಟ್ಟಿದ್ದರು.
ಆಕ್ಷೇಪವನ್ನು ಸವಾಲಾಗಿಸಿಕೊಂಡ ಗ್ರಾಮಸ್ಥರು
ಆಕ್ಷೇಪವನ್ನು ಸವಾಲಾಗಿ ಸ್ವೀಕರಿಸಿದ ಸ್ಥಳೀಯ ಗ್ರಾಮಸ್ಥರು ಸೀಮಿತ ಅವಧಿಯಲ್ಲಿ ಬಸ್ ನಿಲ್ದಾಣಕ್ಕಾಗಿ ಗುರುತಿಸಿಟ್ಟ ಜಾಗದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ವಿಜಯದಶಮಿಯ ದಿನ ತಂಗುದಾಣ ನೂರಾರು ಮಂದಿಯ ಸಮ್ಮುಖದಲ್ಲಿ ಉತ್ಸವದೊಂದಿಗೆ ಲೋಕಾರ್ಪಣೆಗೊಂಡಿದೆ.
ತಿಂಗಳೊಳಗೆ ತಂಗುದಾಣ ನಿರ್ಮಾಣ
ಬಸ್ ನಿಲ್ದಾಣವನ್ನು ಈ ಭಾಗದ ಗ್ರಾಮಸ್ಥರ ಬೇಡಿಕೆ, ಅಭಿಪ್ರಾಯದಂತೆ ಕಾಮಗಾರಿ ನಡೆಸಲಾಗಿದೆ. ತಿಂಗಳೊಳಗೆ ತಂಗುದಾಣ ನಿರ್ಮಾಣವಾಗುವ ಮೂಲಕ ದಾರಂದಕುಕ್ಕುವಿನಲ್ಲಿ ಇತಿಹಾಸ ನಿರ್ಮಾಣವಾಗಿದೆ. ನಿಲ್ದಾಣಕ್ಕೆ ಮುಂದಿನ ದಿನಗಳಲ್ಲಿ ಪಂಚಾಯತ್ನಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಬನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ಜಯ ಮಾಹಿತಿ ನೀಡಿದ್ದಾರೆ.ದಾರಂದಕುಕ್ಕು ಜಂಕ್ಷನ್ ಬಳಿ ಬಸ್ ನಿಲ್ದಾಣ ನಿರ್ಮಾಣಗೊಂಡಲ್ಲಿ ಯಾರಿಗೂ ತೊಂದರೆ ಇರಲಿಲ್ಲ.
ಇದನ್ನೂ ಓದಿ: Hand Grenade in School: ಶಾಲಾ ಮಕ್ಕಳ ಕೈಯಲ್ಲಿ ಹ್ಯಾಂಡ್ ಗ್ರೆನೇಡ್! ಆತಂಕಕಾರಿ ವಸ್ತುವಿನ ಮೇಲೆ ಉರ್ದು ಬರಹ
ಆದರೆ ಕೆಲವರು ತಮ್ಮ ಸ್ವ ಹಿತಾಸಕ್ತಿಗಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡದಂತೆ ಹಲವು ರೀತಿಯ ಒತ್ತಡವನ್ನು ಪಂಚಾಯತ್ ಮತ್ತು ಅಧಿಕಾರಿಗಳ ಮೇಲೆ ಹೇರಿದ್ದರು. ಆದರೆ ಗ್ರಾಮಸ್ಥರ ಒಟ್ಟುಗೂಡುವಿಕೆಯಿಂದ ಈ ಕಾಮಗಾರಿ ನಡೆದುಇದೀಗ ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಲಾಗುತ್ತಿದೆ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ