ಮಹಿಳೆಯರ ರಕ್ಷಣೆಗಾಗಿ ಅಸ್ಥಿತ್ವಕ್ಕೆ ಬಂದ ನಿರ್ಭಯಾ ಹೆಲ್ಪ್ ಲೈನ್ ಅಸ್ಥಿತ್ವದಲ್ಲೇ ಇಲ್ಲ, ಇನ್ನೂ ಸುರಕ್ಷಾ ಆ್ಯಪ್​ ಎಷ್ಟು ದಿನ?

ನಗರದ ಮಹಿಳೆಯರಿಗೆ ಈ ಕುರಿತು ಮಾಹಿತಿ ನೀಡುತ್ತಿರುವ ಪೊಲೀಸರು, ಸುರಕ್ಷಾ ಆ್ಯಪ್ ಅನ್ನು ಪ್ರತಿ ಮಹಿಳೆಯರು ಬಳಸಿ ಮತ್ತು ಇತರರಿಗೆ ಬಳಸಲು ತಿಳಿಸಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, 7 ವರ್ಷಗಳ ಹಿಂದೆ ಮಹಿಳೆಯರ ರಕ್ಷಣೆಗಾಗಿಯೇ ಆರಂಭಿಸಲಾಗಿದ್ದ ನಿರ್ಭಯಾ ಹೆಲ್ಪ್ ಲೈನ್ ಕಥೆಯೇ ಹೀಗಾದರೆ, ಇನ್ನೂ ಈ ಸುರಕ್ಷಾ ಆ್ಯಪ್ ಬಾಳಿಕೆ ಎಷ್ಟು ದಿನ? ಎಂದು ಜನ ಪೇಚಾಡುವಂತಾಗಿದೆ.

news18-kannada
Updated:December 3, 2019, 1:10 PM IST
ಮಹಿಳೆಯರ ರಕ್ಷಣೆಗಾಗಿ ಅಸ್ಥಿತ್ವಕ್ಕೆ ಬಂದ ನಿರ್ಭಯಾ ಹೆಲ್ಪ್ ಲೈನ್ ಅಸ್ಥಿತ್ವದಲ್ಲೇ ಇಲ್ಲ, ಇನ್ನೂ ಸುರಕ್ಷಾ ಆ್ಯಪ್​ ಎಷ್ಟು ದಿನ?
ಸುರಕ್ಷಾ ಆ್ಯಪ್​ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುತ್ತಿರುವ ಪೊಲೀಸ್ ಅಧಿಕಾರಿ.
  • Share this:
ಬೆಂಗಳೂರು (ಡಿಸೆಂಬರ್ 03); ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಇಡೀ ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ನಗರ ಪೊಲೀಸ್ ಇಲಾಖೆ “ಮಹಿಳೆಯರ ಸುರಕ್ಷತಾ ಆ್ಯಪ್” ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಮಹಿಳೆಯರಿಗೆ ಇದನ್ನು ಬಳಸುವ ಕುರಿತೂ ಇಂದು ಪ್ರಾತ್ಯಕ್ಷಿಕೆಯನ್ನೂ ನೀಡಿದೆ. ಆದರೆ, 2012ರಲ್ಲಿ ಆರಂಭಿಸಲಾಗಿದ್ದ ನಿರ್ಭಯಾ ಹೆಲ್ಪ್ ಲೈನ್ ಇದೀಗ ಅಸ್ಥಿತ್ವದಲ್ಲೇ ಇಲ್ಲದಿರುವಾಗ ಈ ಸುರಕ್ಷತಾ ಆ್ಯಪ್ ಎಷ್ಟು ದಿನ? ಎಂಬ ಪ್ರಶ್ನೆ ಇದೀಗ ಮಹಿಳೆಯರಲ್ಲಿ ಮೂಡಿದೆ.

2012ರಲ್ಲಿ ದೆಹಲಿಯಲ್ಲಿ ನಿರ್ಭಯಾ ಎಂಬ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಅಮಾನವೀಯ ರೀತಿಯಲ್ಲಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿರ್ಭಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಬೆಂಗಳೂರು ಮಹಾನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ನಿರ್ಭಯಾ ಹೆಸರಿನಲ್ಲಿ ಹೆಲ್ಪ್ ಲೈನ್ ಒಂದನ್ನೂ ಸಹ ಆರಂಭಿಸಿತ್ತು.


ಮಹಿಳೆಯರು ನಗರದ ಯಾವ ಮೂಲೆಯಲ್ಲಾದರೂ ಅಪಾಯಕ್ಕೆ ಸಿಲುಕಿದರೆ ನಿರ್ಭಯಾ ಹೆಲ್ಪ್ ಲೈನ್ ನಂಬರ್ 9833312222 ಗೆ ಕರೆ ಮಾಡಿದರೆ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆಯರನ್ನು ರಕ್ಷಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ನಂಬರ್ ಅಸ್ಥಿತ್ವದಲ್ಲೇ ಇಲ್ಲ. ಮಹಿಳೆಯರು ಕರೆ ಮಾಡಿದರೆ ಸ್ವಿಚ್ ಆಫ್ ಎನ್ನುತ್ತಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ನಂಬರ್ ಸಹ ಇಲ್ಲ. ಹಾಗಾದರೆ ಅಪಾಯಕ್ಕೆ ಸಿಲುಕಿರುವ ಮಹಿಳೆಯರು ಯಾರಿಗೆ ಕರೆ ಮಾಡಬೇಕು? ಹೀಗೊಂದು ಪ್ರಶ್ನೆ ಎಲ್ಲೆಡೆ ಮೂಡಿರುವ ಬೆನ್ನಿಗೆ ಇದೀಗ “ಮಹಿಳೆಯರ ಸುರಕ್ಷಾ ಆ್ಯಪ್” ಅನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.

ನಗರದ ಮಹಿಳೆಯರಿಗೆ ಈ ಕುರಿತು ಮಾಹಿತಿ ನೀಡುತ್ತಿರುವ ಪೊಲೀಸರು, “ಸುರಕ್ಷಾ ಆ್ಯಪ್ ಅನ್ನು ಪ್ರತಿ ಮಹಿಳೆಯರು ಬಳಸಿ ಮತ್ತು ಇತರರಿಗೆ ಬಳಸಲು ತಿಳಿಸಿ” ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, 7 ವರ್ಷಗಳ ಹಿಂದೆ ಮಹಿಳೆಯರ ರಕ್ಷಣೆಗಾಗಿಯೇ ಆರಂಭಿಸಲಾಗಿದ್ದ ನಿರ್ಭಯಾ ಹೆಲ್ಪ್ ಲೈನ್ ಕಥೆಯೇ ಹೀಗಾದರೆ, ಇನ್ನೂ ಈ ಸುರಕ್ಷಾ ಆ್ಯಪ್ ಬಾಳಿಕೆ ಎಷ್ಟು ದಿನ? ಎಂದು ಜನ ಪೇಚಾಡುವಂತಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.

ಇದನ್ನೂ ಓದಿ : ನನ್ನ ಮಗ ಅತ್ಯಾಚಾರಿ ಆತನನ್ನು ಗುಂಡಿಟ್ಟು ಕೊಲ್ಲಿ; ತೆಲಂಗಾಣ ಪಶುವೈದ್ಯೆಯ ಕೊಲೆ ಆರೋಪಿ ತಾಯಿಯ ಆಕ್ರೋಶ
First published: December 3, 2019, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading