ಚಿತ್ರದುರ್ಗ(ಮಾ.11): ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೆ ಕಡ್ಡಾಯವಾಗಿ ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮುಖ್ಯ ಗ್ರಂಥಾಲಯಾಧಿಕಾರಿಗೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ 2021 - 22ನೇ ಸಾಲಿನ ಆಯ-ವ್ಯಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓದುಗರ ಅಭಿರುಚಿಗೆ ಅನುಗುಣವಾಗಿ, ಬೇಡಿಕೆಗೆ ತಕ್ಕಂತೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿ ಮಾಡಬೇಕು ಎಂದು ಗ್ರಂಥಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಕಚೇರಿಯ ಕಟ್ಟಡದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಹಸ್ತಾಂತರಗೊಂಡ ನಂತರ ನಿಯಮಾನುಸಾರ ಆದಷ್ಟು ಶೀಘ್ರವಾಗಿ ಪ್ರಾರಂಭ ಮಾಡಬೇಕು, ಹೊಸದುರ್ಗದ ಶಾಖಾ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಲು ನಿವೇಶನದ ಅವಶ್ಯಕತೆ ಇದ್ದು, ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಆದಷ್ಟು ಬೇಗ ನಿವೇಶನ ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.
Haveri: ದಶಕದ ಹೊಸ್ತಿಲಲ್ಲಿ ಇರುವ ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯದಲ್ಲಿ ಇರೋದು ಕೇವಲ ಮೂರೇ ಸಿಬ್ಬಂದಿ..!
ಜಿಲ್ಲಾಧಿಕಾರಗಳು ನಿರ್ದೇಶನ ನೀಡಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯ ಗ್ರಂಥಾಲಯಾಧಿಕಾರಿ ಪಿ. ಆರ್. ತಿಪ್ಪೇಸ್ವಾಮಿ, ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೂ ಕುಡಿಯುವ ನೀರು ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಆದಾಗ್ಯೂ ಕುಡಿಯುವ ನೀರು ವ್ಯವಸ್ಥೆ ಸೇರಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಹಾಗೂ ಹೆಸರಾಂತ ಲೇಖಕರ ಪುಸ್ತಕಗಳನ್ನು ಗ್ರಂಥಾಲಯ ಪ್ರಾಧಿಕಾರದ ಕೋಟಾದಡಿ ಓದುಗರ ಬೇಡಿಕೆ ಅನ್ವಯ, ಇತರೆ ಹೆಸರಾಂತ ಪ್ರಕಟಣೆಯ ಪುಸ್ತಕಗಳು, ಅಧಿಕಾರಿಗಳ ಸಲಹೆ ಮೇರೆಗೆ ಐಎಎಸ್, ಕೆ.ಎ.ಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಖರೀದಿ ಮಾಡಿ ಶಾಖಾ ಗ್ರಂಥಾಲಯ, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ ಎಂದ ತಿಳಿಸಿದರು.
ಸದ್ಯ ಈ ವರ್ಷ 2021 -22 ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದಲ್ಲಿ ಒಟ್ಟು 90 ಲಕ್ಷ ರೂ. ಅಂದಾಜು ಆದಾಯ ಆಗುವ ನಿರೀಕ್ಷೆ ಇದ್ದು, ಇದರಲ್ಲಿ ಅಂದಾಜು ರೂ. 68 ಲಕ್ಷ ವ್ಯಯ ಆಗುವ ನಿರೀಕ್ಷೆ ಇದೆ, ಡಿಜಿಟಲ್ ಗ್ರಂಥಾಲಯಕ್ಕೆ ಚಿತ್ರದುರ್ಗದಲ್ಲಿ ಇದುವರೆಗೂ 39, 375 ಓದುಗರು ನೋಂದಣಿ ಮಾಡಿಕೊಂಡಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಭೆಯು ಒಪ್ಪಿಗೆ ನೀಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ