ಮಂಗಳೂರು (ಜನವರಿ 20); ನಗರದ ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಇಡುವ ಮೂಲಕ ಆತಂಕ ಸೃಷ್ಟಿಸಿದ ಪ್ರಕರಣವನ್ನು ಶೀಘ್ರದಲ್ಲೇ ಬೇಧಿಸಲಾಗುವುದು ಅಲ್ಲದೆ, ತಪ್ಪಿತಸ್ಥರನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ತಂದು ನಿಲ್ಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಓರ್ವ ಆಟೋ ಚಾಲಕ ಒಂದು ಸಜೀವ ಬಾಂಬ್ ಇದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ. ಆದರೆ, ಈ ಬ್ಯಾಗ್ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಇದರ ಬೆನ್ನಿಗೆ ಸಂಜೆ ವೇಳೆಗೆ ಮಂಗಳೂರಿನಿಂದ ಹೈದರಾಬಾದ್ ತೆರಳುವ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಗಿತ್ತು. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದ ಅಪರಿಚಿತ ಮೂರನೇ ಬಾಂಬ್ ಅನ್ನೂ ಇಟ್ಟಿರುವ ಕುರಿತು ಬೆದರಿಕೆ ಹಾಕಿದ್ದ. ಹೀಗಾಗಿ ಇಂದು ಇಡೀ ದಿನ ಮಂಗಳೂರು ವಿಮಾನ ನಿಲ್ದಾಣ ಸುದ್ದಿ ಕೇಂದ್ರದಲ್ಲಿತ್ತು.
ಆದರೆ, ಇದೀಗ ಮೊದಲ ಬಾಂಬ್ ಅನ್ನು ಕೆಂಜಾರೆ ಮೈದಾನದಲ್ಲಿ ಸ್ಪೋಟಿಸುವ ಮೂಲಕ ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಡಾ. ಹರ್ಷ, "ವಿಮಾನ ನಿಲ್ದಾನದಲ್ಲಿ ಸ್ಪೋಟಕವನ್ನು ತಂದಿಟ್ಟಿರುವ ಶಂಕಿತ ವ್ಯಕ್ತಿಯ ಪೋಟೋ ಲಭ್ಯವಾಗಿದೆ. ಈತ ಮಧ್ಯ ವಯಸ್ಕ ವ್ಯಕ್ತಿ ಎಂದು ತಿಳಿದು ಬಂದಿದ್ದು, ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು, ಶಂಕಿತ ವ್ಯಕ್ತಿಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೆ, ಘಟನೆ ಸಂಬಂಧ ಸಾಕಷ್ಟು ಸುಳಿವುಗಳು ಈಗಾಗಲೇ ಲಭ್ಯವಾಗಿವೆ. ಹೀಗಾಗಿ ಶೀಘ್ರದಲ್ಲೇ ಈ ಪ್ರಕರಣವನ್ನು ಬೇಧಿಸಿ ತಪ್ಪಿತಸ್ಥರನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ತಂದು ನಿಲ್ಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್; ಯಶಸ್ವಿಯಾಗಿ ಸ್ಪೋಟಿಸಿ ಆತಂಕ ದೂರ ಮಾಡಿದ ಪೊಲೀಸರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ