HOME » NEWS » State » THE LIFE OF THE LATE ANANT KUMAR IS A MESSAGE SAYS SADANANDA GOWDA DBDEL MAK

ದಿವಂಗತ ಕೇಂದ್ರ ಸಚಿವ ಅನಂತ್‌ ಕುಮಾರ್ ಜೀವನವೇ ಒಂದು ಸಂದೇಶ: ಸದಾನಂದಗೌಡ

ಅನಂತಕುಮಾರ್ ಅವರಿಗೆ ಅನಂತಕುಮಾರ್ ಅವರೇ ಸಾಟಿ. ಭಾರತದ ರಾಜಕೀಯ ರಂಗ ಕಂಡ ಅಪರೂಪದ ನಾಯಕ. ಹಲವು ಪ್ರಥಮಗಳ ಸರದಾರ ಮತ್ತು ಹೊಸತನದ ಹರಿಕಾರ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸಂಪುಟ ದರ್ಜೆ ಸಚಿವರಾದ ಪ್ರಥಮ ಕನ್ನಡಿಗ ಎಂದು ಸದಾನಂದ ಗೌಡ ಸ್ಮರಿಸಿದ್ದಾರೆ.

news18-kannada
Updated:February 23, 2021, 7:23 AM IST
ದಿವಂಗತ ಕೇಂದ್ರ ಸಚಿವ ಅನಂತ್‌ ಕುಮಾರ್ ಜೀವನವೇ ಒಂದು ಸಂದೇಶ: ಸದಾನಂದಗೌಡ
ಡಿ.ವಿ. ಸದಾನಂದ ಗೌಡ.
  • Share this:
ನವದೆಹಲಿ (ಫೆಬ್ರವರಿ. 23): ಬಿಜೆಪಿಯ ದಿವಂಗತ ನಾಯಕ ಅನಂತಕುಮಾರ್ ಅವರ ಜೀವನವೇ ಒಂದು ಸಂದೇಶವಾಗಿದೆ. ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಅನಂತಕುಮಾರ್ ಯುವಪೀಳಿಗೆಗೆ ಯಾವತ್ತೂ ಪ್ರೇರಣೆಯಾಗಿ ಉಳಿಯುತ್ತಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ  ಹೇಳಿದ್ದಾರೆ. ಅನಂತ ಕುಮಾರ್ ಪ್ರತಿಷ್ಠಾನ ಪ್ರಕಟಿಸುತ್ತಿರುವ “ಅನಂತ ಪಥ” ಮಾಸಿಕ ಪತ್ರಿಕೆಯ ಎಂಟನೇ ಸಂಚಿಕೆಯನ್ನು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿ ಮಾತನಾಡಿದ ಸದಾನಂದಗೌಡ, ಅನಂತಕುಮಾರ್ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಇಷ್ಟುಬೇಗ ನಮ್ಮನ್ನೆಲ್ಲ ಬಿಟ್ಟುಹೋಗುತ್ತಾರೆ ಎಂಬ ಕಲ್ಪನೆ ಕೂಡಾ ನಮಗ್ಯಾರಿಗೂ ಇರಲಿಲ್ಲ. ಅವರೊಬ್ಬ ಅಪ್ಪಟ ಸ್ನೇಹಜೀವಿ. ಹಾಗಾಗಿ ಅವರು ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಲಕ್ಷಾಂತರ ಜನ ಹರಿದು ಬಂದರು ಎಂದು ಹೇಳಿದರು.

ಅನಂತಕುಮಾರ್ ಅವರಿಗೆ ಅನಂತಕುಮಾರ್ ಅವರೇ ಸಾಟಿ. ಭಾರತದ ರಾಜಕೀಯ ರಂಗ ಕಂಡ ಅಪರೂಪದ ನಾಯಕ. ಹಲವು ಪ್ರಥಮಗಳ ಸರದಾರ ಮತ್ತು ಹೊಸತನದ ಹರಿಕಾರ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸಂಪುಟ ದರ್ಜೆ ಸಚಿವರಾದ ಪ್ರಥಮ ಕನ್ನಡಿಗ. ವಿಶ್ವಸಂಸ್ಥೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕನ್ನಡದಲ್ಲಿಯೇ ಮಾತನಾಡಿದ ಗೌರವ ಅವರದ್ದು ಎಂದು ಸದಾನಂದಗೌಡ ಸ್ಮರಿಸಿದರು.

ಕ್ರೀಡಾ ಮತ್ತು ಸಂಸ್ಕೃತಿ ಸಚಿವರಾಗಿ ಹೊಸವರ್ಷವನ್ನು ಸ್ವಾಗತಿಸಲು ಸಾಮೂಹಿಕವಾಗಿ “ವಂದೇ ಮಾತರಂ” ಹಾಡುವ ಪರಿಪಾಠವನ್ನು ಆರಂಭಿಸಿದ್ದು ಅವರೇ. ಇದನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವ ಅವರ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಮತ್ತವರ ಬಳಗಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಅನಂತ್ ಕುಮಾರ್ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದಾಗ ಯೂರಿಯಾ ಗೊಬ್ಬರಕ್ಕೆ ಬೇವು ಲೇಪನ ಮಾಡುವ ಕೆಲಸ ಆರಂಭಿಸಲಾಯಿತು. ಇದರಿಂದ ಯೂರಿಯಾ ದುರುಪಯೋಗ ನಿಂತಿತು.  ಕೈಗಾರಿಕೆ ಮುಂತಾದ ಉದ್ದೇಶಗಳಿಗೆ ಬಳಸಿಕೊಳ್ಳುವುದು ತಪ್ಪಿತು. ಹಾಗಾಗಿ ರೈತರಿಗೆ ಗೊಬ್ಬರ ಪೂರೈಕೆ ಸರಾಗಗೊಂಡಿತು ಎಂದು ಈಗ ಅದೇ ಖಾತೆಯನ್ನು ನಿರ್ವಹಿಸುತ್ತಿರುವ ಸದಾನಂದಗೌಡ ವಿವರಿಸಿದರು.

ನನ್ನ ಮತ್ತು ಅನಂತಕುಮಾರ್ ಅವರ ಒಡನಾಟ ತುಂಬಾ ಹಳೆಯದು. ಏಬಿವಿಪಿಯಲ್ಲಿ ಆರಂಭವಾಗಿ ಮೋದಿಯವರ ಸಂಪುಟದಲ್ಲಿ ಇಬ್ಬರೂ ಸಹಪಾಠಿಗಳಾಗುವ ತನಕವೂ ಮುಂದುವರಿಯಿತು. ಕಾಕತಾಳಿಯವೋ ಏನೋ? ಅನಂತ ಕುಮಾರ್ ಅವರು ಅಲಂಕರಿಸಿದ ಕೆಲವು ಹುದ್ದೆಗಳನ್ನು ನಾನೂ ನಿರ್ಹಹಿಸಬೇಕಾಗಿ ಬಂತು. ಬಿಜೆಪಿ 40ರ ಆಸುಪಾಸಿನಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುತ್ತಿತ್ತು. ಆದರೆ ಅನಂತ್ ಕುಮಾರ್ ಅಧ್ಯಕ್ಷರಾದ ಮೇಲೆ ಸಂಖ್ಯೆ ದುಪ್ಪಟ್ಟಾಯಿತು.

2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 79ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ ನಾನು ರಾಜ್ಯ ಘಟಕದ ಅಧ್ಯಕ್ಷನಾದೆ. 2008ರಲ್ಲಿ ಪಕ್ಷವು ಅಧಿಕಾರಕ್ಕೂ ಬಂತು. ಇದಕ್ಕೆ ಅವರು ಪಕ್ಷಕ್ಕೆ ಹಾಕಿದ ಭದ್ರ ಬುನಾದಿಯೇ ಕಾರಣ‌ ಎಂದು ಸದಾನಂದಗೌಡ ಅವರು ತಿಳಿಸಿದರು.

ಅನಂತ್ ಕುಮಾರ್ ಆರಂಭಿಸಿದ ಜನೌಷಧಿಯೂ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ದೇಶದಲ್ಲಿ ಜನೌಷಧಿ ಮಾರಾಟ ಮಳಿಗೆಗಳ ಸಂಖ್ಯೆ ಇಂದು 7,500 ದಾಟಿದೆ. ಕರ್ನಾಟಕ ರಾಜ್ಯವೊಂದರಲ್ಲಿಯೇ 850 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸತ್ತಿವೆ. ಶ್ರೀಸಾಮಾನ್ಯರಿಗೆ ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ ಕಡಿಮೆ ದರದಲ್ಲಿ ಔಷಧ ದೊರಕಿಸಿಕೊಡಬೇಕೆಂಬುದು ಅವರ ಕನಸಾಗಿತ್ತು. ಜನೌಷಧಿ ಅದನ್ನು ನನಸಾಗಿಸಿದೆ ಎಂದರು.ಬೆಂಗಳೂರು ಮೆಟ್ರೊ, ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಪಕ್ಷ ಸಂಘಟನೆಯಲ್ಲಿಯೂ ಅವರು ಎತ್ತಿದ ಕೈ. ಅಗಾಧ ನೆನಪಿನ ಶಕ್ತಿ. ಹಾಗೆಯೇ ಅವರ ಹಾಸ್ಯಪ್ರಜ್ಞೆ, ಸಮಯ ಪ್ರಜ್ಞೆಯೂ ಮೆಚ್ಚುವಂತದ್ದೇ. ಎಂತಹದೇ ಬಿಗುವಿನ ವಾತಾವರಣವಿರಲಿ. ಅದನ್ನು ತಮ್ಮ ಮಾತಿನ ಮೂಲಕವೇ ತಿಳಿಗೊಳಿಸುತ್ತಿದ್ದರು. ಅವರು ಇದ್ದಲ್ಲಿ ಲವಲವಿಕೆ ತುಂಬಿರುತ್ತಿತ್ತು. ಇಂದು ಅವರನ್ನು ನಾವು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತ ಸದಾನಂದಗೌಡರು ಭಾವುಕರಾದರು.

ಇದನ್ನೂ ಓದಿ: ಜೆ.ಪಿ. ನಡ್ಡಾ ಭೇಟಿ ಮಾಡಿದ ಶಾಸಕ ಯತ್ನಾಳ್, ಪಕ್ಷದ ಶಿಸ್ತು ಕಾಪಾಡುವಂತೆ ಯತ್ನಾಳ್​ಗೆ ಸೂಚನೆ

ಶ್ರೇಷ್ಠ ಭಾರತ, ಭವ್ಯಭಾರತದ ಕಲ್ಪನೆ ಅವರದಾಗಿತ್ತು. ಅವರೊಬ್ಬ ಆದರ್ಶ ರಾಜಕಾರಣಿ. ಮುತ್ಸದ್ಧಿ. ಭೌತಿಕವಾಗಿ ಅವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಉದಾತ್ತ ವಿಚಾರಧಾರೆಗಳು ನಮ್ಮೊಂದಿಗಿವೆ. ಮಾನವ ಏಳ್ಗೆಯಲ್ಲಿ ಅನ್ನ, ಅಕ್ಷರ, ಆರೋಗ್ಯದ ಮಹತ್ಚ ತಿಳಿದಿದ್ದ ಅನಂತ್ ಜೀ ಅವರು ಅಧಮ್ಯ ಚೇತನ ಸಂಸ್ಥೆ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಮಾಡಿದರು. ಪರಿಸರ ಕಾಳಜಿ ತೋರಿದರು. ಈಗ ಅವರ ಶ್ರೀಮತಿಯವರು ಈ ಪುಣ್ಯದ ಕೆಲಸವನ್ನು ಮುಂದುವರಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.

ಅನಂತ್ ಕುಮಾರ್ ಅವರ ಕನಸುಗಳನ್ನು ನನಸಾಗಿಸಲು ಅನಂತ ಪ್ರತಿಷ್ಠಾನವು ಪ್ರಯತ್ನಿಸುತ್ತಿದೆ. ಹಾಗೆಯೇ ಈ ಪ್ರತಿಷ್ಠಾನದ ಮೂಲಕ ಅವರ ಚಿಂತನೆಗಳು, ಸಂದೇಶಗಳನ್ನು ಜನರಿಗೆ ತಲುಪಿಸಲು “ಅನಂತ ಪಥ” ಎಂಬ ಮಾಸಪತ್ರಿಕೆಯನ್ನು ಹೊರ ತರುತ್ತಿರುವುದು ಅತ್ಯಂತ ಸಮಂಜಸವಾಗಿದೆ. “ಅನಂತ ಪಥ” ಪತ್ರಿಕೆಯ 8ನೇ ಸಂಚಿಕೆಯನ್ನು ಸಂತೋಷದಿಂದ ಬಿಡುಗಡೆಗೊಳಿಸುತ್ತಿದ್ದೇನೆ. “ಅನಂತ ಪಥ” ಮನೆ-ಮನೆ ತಲುಪಲಿ. ಮನೆ ಮಾತಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಸದಾನಂದಗೌಡ ಹರಸಿದರು.
Published by: MAshok Kumar
First published: February 23, 2021, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories