ಸಿಡಿ ಕೇಸ್: ಲಿಖಿತ ಆಕ್ಷೇಪಣೆ ಸಲ್ಲಿಸಲು ರಮೇಶ್ ಜಾರಕಿಹೊಳಿ, ಎಸ್​ಐಟಿಗೆ ಹೈಕೋರ್ಟ್ ಅಂತಿಮ ಅವಕಾಶ

ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ಜಾರಕಿಹೊಳಿ ಮತ್ತು ಎಸ್‌ಐಟಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ಜುಲೈ 6ಕ್ಕೆ ವಿಚಾರಣೆ ಮುಂದೂಡಿತು.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

 • Share this:
  ಬೆಂಗಳೂರು (ಜೂನ್ 23) : ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಲಿಖಿತ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಅಂತಿಮ ಅವಕಾಶ ಕಲ್ಪಿಸಿದೆ. ಜಾರಕಿಹೊಳಿ ಅವರ ಆಪ್ತ ಎಂ ವಿ ನಾಗರಾಜ್‌ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣದ ತನಿಖೆಗೆ ಸದ್ಯಕ್ಕೆ ಮಧ್ಯಂತರ ತಡೆ ನೀಡಬೇಕು ಮತ್ತು ಶಾಶ್ವತವಾಗಿ ಪ್ರಕರಣ ವಜಾ ಮಾಡಬೇಕು ಎಂದು ಸಂತ್ರಸ್ತ ಯುವತಿ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

  ಎಸ್ಐ‌ಟಿ ಪರ ವಕೀಲರು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾಯಿಸಬೇಕು. ಅಲ್ಲದೇ, ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಂತ್ರಸ್ತೆ ಪರ ವಕೀಲ ಸಂಕೇತ್‌ ಏಣಗಿ ಆಕ್ಷೇಪಿಸಿದರು. “ಇದು ವಿಶೇಷ ಪ್ರಕರಣವಾಗಿದೆ. ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಪ್ರಕರಣದ ಮರು ವರ್ಗಾವಣೆಯ ಅವಶ್ಯಕತೆ ಇಲ್ಲ” ಎಂದು ವಾದಿಸಿದರು.

  ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ಜಾರಕಿಹೊಳಿ ಮತ್ತು ಎಸ್‌ಐಟಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ಜುಲೈ 6ಕ್ಕೆ ವಿಚಾರಣೆ ಮುಂದೂಡಿತು.

  ಸಂತ್ರಸ್ತ ಯುವತಿ ಸಲ್ಲಿಸಿದ್ದ ರಿಟ್‌ ಮನವಿಯನ್ನು ಪ್ರಥಮ ಬಾರಿಗೆ ಜೂನ್‌ 15 ರಂದು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತ್ತು. ಕಳೆದ ಸೋಮವಾರ ಏಕಾಏಕಿ ಪ್ರಕರಣವನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಿಸಿದ್ದ ಸಂತ್ರಸ್ತ ಯುವತಿ ಪರ ವಕೀಲ ಏಣಗಿ ಅವರು “ರೋಸ್ಟರ್‌ ಅನ್ವಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಎಸ್‌ ಸುನಿಲ್‌ ದತ್ತ ಯಾದವ್‌ ಅವರ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು” ಎಂದು ಕೋರಿದ್ದರು. ಇದಕ್ಕೆ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

  ಸಂತ್ರಸ್ತ ಪೋಷಕರ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್

  ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿ ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತ ಯುವತಿ ದಾಖಲಿಸಿರುವ ಪ್ರಮಾಣೀಕೃತ ಹೇಳಿಕೆಯು ಕಾನೂನುಬದ್ಧವಾಗಿದೆ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಜೊತೆಗೆ ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ರಿಟ್‌ ಮನವಿಯನ್ನು ವಜಾ ಮಾಡಿದೆ.

  ಇದನ್ನು ಓದಿ: ತಂದೆ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕ ಸುಳಿವು ನೀಡಿದ ಪುತ್ರ ನಿಖಿಲ್ ಕುಮಾರಸ್ವಾಮಿ?!

  ತಮ್ಮ ಪುತ್ರಿ ಒತ್ತಡದಲ್ಲಿ ಹೇಳಿಕೆ ದಾಖಲಿಸಿದ್ದು ಅದನ್ನು ಪರಿಗಣಿಸಬಾರದು ಎಂದು ಸಂತ್ರಸ್ತೆಯ ತಂದೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ತಂದೆ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯ ವೇಳೆ ತನ್ನ ವಾದವನ್ನೂ ಆಲಿಸಬೇಕು ಎಂದು ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಮಧ್ಯಪ್ರವೇಶ ಮನವಿ ಸಲ್ಲಿಸಿದ್ದರು.

  ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ಕುರಿತು ಯಾವುದೇ ಆದೇಶ ಹೊರಡಿಸಲು ಹೈಕೋರ್ಟ್‌ ನಿರಾಕರಿಸಿತ್ತು. ಸಂತ್ರಸ್ತೆಯು ಪ್ರೌಢೆಯಾಗಿರುವುದರಿಂದ ಸ್ವಂತ ತೀರ್ಮಾನ ಮಾಡುವಷ್ಟು ಸಮರ್ಥವಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ನ್ಯಾ. ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ವಿಭಾಗೀಯ ಪೀಠ ಹೇಳಿತ್ತು.
  Published by:HR Ramesh
  First published: