news18-kannada Updated:December 10, 2020, 5:00 PM IST
ಸಚಿವ ಆರ್. ಅಶೋಕ್
ಬೆಂಗಳೂರು; ಪ್ರವಾಹ ಸಂದರ್ಭದಲ್ಲಿ ಸಿಎಂ ಮತ್ತು ನಾನು ಹಲವು ಸಭೆಗಳನ್ನು ಮಾಡಿದ್ದೇವೆ. ನೆರೆಪೀಡಿತ ಪ್ರದೇಶಕ್ಕೆ ಎಸ್ಡಿಆರ್ಎಫ್, ಎನ್‌ಡಿಆರ್‌ಎಫ್ ತಂಡವನ್ನು ಕೂಡಲೇ ಕಳುಹಿಸಿಕೊಟ್ಟಿದ್ದೇವೆ. ಪ್ರವಾಹ ನಿಯಂತ್ರಣ ಮಾಡಲು ಸಕಲ ಕ್ರಮ ಕೈಗೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸಭೆಯಲ್ಲಿ ಅತಿವೃಷ್ಟಿ ವಿಚಾರವಾಗಿ ನಿಯಮ 69 ರ ಅಡಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡಿದರು. ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ. 500 ಹೆಚ್ಚು ಮಳೆಯಾಗಿದೆ. ಆ ಸಂದರ್ಭದಲ್ಲಿ ರಾಜ್ಯದ 133 ತಾಲೂಕು ನೆರೆ ಪೀಡಿತವಾಗಿತ್ತು. ಸೆ.15-30 ಎರಡನೇ ಅವಧಿಗೆ ಬಿದ್ದ ಮಳೆಗೆ 50 ತಾಲೂಕು ಪ್ರವಾಹ ಪೀಡಿತವಾಗಿತ್ತು. ಅಕ್ಟೋಬರ್ ಎರಡನೇ ವಾರದಿಂದ ಮೂರನೇ ವಾರದವರೆಗೆ ಮೂರನೇ ಬಾರಿ ಮಳೆಯಾಗಿದೆ. ಮೂರು ಬಾರಿ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಒಟ್ಟು
68,367 ಮನೆಗಳು ಹಾನಿಯಾಗಿವೆ. 20.87 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ಗೋಹತ್ಯೆ ನಿಷೇಧ ಕಾಯ್ದೆಯ ರೈತ ದೃಷ್ಟಿಕೋನದ ಪರಾಮರ್ಶೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಹಲವು ಪ್ರಶ್ನೆ
ಮಳೆಯಿಂದಾಗಿ 37805 ಕಿ.ಮೀ. ರಸ್ತೆಗಳು ಹಾನಿಯಾಗಿವೆ. 4084 ಸೇತುವೆಗಳು ಹಾನಿಗೆ ಒಳಗಾಗಿವೆ. ಪ್ರವಾಹದಲ್ಲಿ ಸಿಲುಕಿದ 52,242 ಜನರನ್ನು ಕಾಳಜಿ ಕೇಂದ್ರದಗಳಿಗೆ ಶಿಫ್ಟ್ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ ಉತ್ತಮ ಪೌಷ್ಟಿಕಾಂಶದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. 5 ಹಂತದಲ್ಲಿ ಬೆಳೆ ಹಾನಿಯಾದವರಿಗೆ ಹಣ ಕೊಡಲಾಗಿದೆ. 7,12,936 ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗಿದೆ. 551.13 ಕೋಟಿ ರೂ. ಬೆಳೆಹಾನಿ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.
ಪ್ರಧಾನಿಯೂ ರಾಜ್ಯದ ನೆರೆ ಹಾನಿ ಬಗ್ಗೆ ಎರಡು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ನಾನು 27 ಬಾರಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. 423 ಕೋಟಿ ರೂ. ಮೂಲ ಭೂತ ಸೌಕರ್ಯಕ್ಕೆ ಪರಿಹಾರ ನೀಡಿದ್ದೇವೆ. 1320 ಕೋಟಿ ರು. ಹಣವನ್ನು ಪರಿಹಾರವಾಗಿ ಕೊಟ್ಟಿದ್ದೇವೆ. ಎರಡನೇ ಮತ್ತು ಮೂರನೇ ಹಂತದ ಮಳೆಗೆ ನೆರೆ ಪರಿಹಾರ ಕೇಳಿದ್ದೇವೆ. ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ಸರ್ಕಾರ ನೆರೆ ಸಂತ್ರಸ್ತರ ನೆರವಿಗೆ ಬಂದಿದೆ. ನೆರೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದೆ. ಎಲ್ಲಾ ಜಿಲ್ಲಾ ಉಸ್ತುವಾರಿಗಳು ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ನೆರೆ ಪೀಡಿತ ಪ್ರದೇಶಗಳ ಜನರ ಕಷ್ಟದ ನೆರವಿಗೆ ಸರ್ಕಾರ ಬಂದಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
Published by:
HR Ramesh
First published:
December 10, 2020, 5:00 PM IST