ಬೆಂಗಳೂರು: ಡಿಜಿಟಲ್ ಫೀಲ್ಡ್‌ಗೆ (Digital Field) ಕೈ ಹಾಕಿ ಸಕ್ಸಸ್ ಆಗಬೇಕು ಅಂದ್ಕೊಂಡಿದ್ದೀರಾ? ಕ್ರಿಪ್ಟೋ ಕರೆನ್ಸಿ (Crypto Currency) ಮತ್ತು ಷೇರು ಮಾರುಕಟ್ಟೆಗೆ (Share Market) ಎಂಟ್ರಿ ಕೊಟ್ಟು ದಿಢೀರ್ ಶ್ರೀಮಂತರಾಗಬೇಕು ಅನ್ನೋ ಕನಸು ಕಾಣ್ತಿದ್ದೀರಾ? ಹಾಗಿದ್ದರೆ ನೀವು ಈ ಸುದ್ದಿಯನ್ನು ತಪ್ಪದೇ ಓದಬೇಕು. ಯಾಕಂದ್ರೆ ಇಂತಹ ಫೀಲ್ಡ್‌ನಲ್ಲಿ ಸ್ವಲ್ಪ ಯಾಮಾರಿದ್ರೂ ಕೂಡ ಟೋಪಿ ಹಾಕೋರೆ ಹೆಚ್ಚು (Fraud Case) ಜನರು ಇರ್ತಾರೆ. ಕ್ರಿಪ್ಟೋ ಕರೆನ್ಸಿ ಮತ್ತು ಷೇರು ಮಾರುಕಟ್ಟೆ ಬಗ್ಗೆ ಹೆಚ್ಚೇನೂ ಮಾಹಿತಿ ತಿಳಿಯದ, ಈಗ ತಾನೆ ಈ ಸಾಹಸಕ್ಕೆ ಕೈ ಹಾಕಲು ಇಚ್ಛಿಸುವ ಜನರು ಸದಾ ಎಚ್ಚರದಿಂದಿರಬೇಕು. ಇಲ್ಲದಿದ್ರೆ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.
ಹೌದು.. ಹಣ ದುಪ್ಪಟ್ಟು ಮಾಡುವ ಆಸೆಯಿಂದ ಕ್ರಿಪ್ಟೋ ಕರೆನ್ಸಿ ಮತ್ತು ಷೇರು ಮಾರುಕಟ್ಟೆಗೆ ಬಂಡವಾಳ ಹೂಡುವ ಜನರನ್ನೇ ಗುರಿಯಾಗಿಸಿಕೊಂಡ ಸೈಬರ್ ಗ್ಯಾಂಗ್ ಒಂದು ನೂರಕ್ಕೂ ಹೆಚ್ಚು ಜನರ ಬಳ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ್ದು, ಈ ಬಗ್ಗೆ ಬೆಂಗಳೂರಿನ 8 ವಿಭಾಗದ ಸಿಇಎನ್ (ಸೈಬರ್ ಎಕನಾಮಿಕ್ ಆಂಡ್ ನಾರ್ಕೊಟಿಕ್ಸ್) ಠಾಣೆಯಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ನೂರಾರು ವಂಚನೆಗೆ ಒಳಗಾಗಿರುವ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Super Star: ಸೂಪರ್ ಸ್ಟಾರ್ಗೆ ಸಂಕಷ್ಟ; 1 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪದಡಿ ಪೊಲೀಸ್ ದೂರು
ಹಣ ದುಪ್ಪಟ್ಟಿನ ಆಸೆಗೆ ಇರೋದನ್ನೆಲ್ಲಾ ಕಳ್ಕೋಬೇಡಿ!
ಅಮಾಯಕ ಜನರಿಗೆ ಹಣ ದುಪ್ಪಟ್ಟು ಮಾಡಿ ಲಾಭದ ಆಸೆ ತೋರಿಸಿ ಕೊನೆಗೆ ನಷ್ಟದ ಬಾವಿಗೆ ತಳ್ಳುವ ಸೈಬರ್ ಗ್ಯಾಂಗ್ ಬೆಂಗಳೂರಿನಲ್ಲಿ ಆಕ್ಟೀವ್ ಆಗಿದ್ದು, ಕಳೆದ 2, 3 ತಿಂಗಳಿಂದ ಇಂತಹ ವಂಚನೆಗಳು ರಾಜ್ಯದೆಲ್ಲೆಡೆ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇದೆ. ಬರೀ ಬೆಂಗಳೂರು ಒಂದರಲ್ಲೇ 100ಕ್ಕೂ ಹೆಚ್ಚು ಜನ ಹೀಗೆ ವಂಚನೆಗೆ ಒಳಗಾಗಿರುವ ಬಗ್ಗೆ ದೂರು ದಾಖಲಾಗಿದೆ. ಇನ್ನು ದೂರು ದಾಖಲು ಮಾಡದೇ ಇರುವವರು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಎಷ್ಟು ಮಂದಿ ವಂಚನೆಗೆ ಒಳಗಾಗಿರಬಹುದು ಎಂಬ ಪ್ರಶ್ನೆಯೂ ಮೂಡಿದೆ.
ಇದನ್ನೂ ಓದಿ: Supreme Court: ಆಸ್ತಿ ವ್ಯವಹಾರಗಳಲ್ಲಿನ ತೆರಿಗೆ ವಂಚನೆಗೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್!
ಸೋಶಿಯಲ್ ಪ್ಲಾಟ್‌ಫಾರಂಗಳೇ ಖದೀಮರ ತಾಣ
ಇನ್ನಿತರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂಗಳ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದರು. ಈಗ ಒಎಲ್‌ಎಕ್ಸ್, ಶಾದಿ.ಕಾಂ, ಫೇಸ್‌ಬುಕ್, ಟಿಂಡರ್, ನೌಕರಿ.ಕಾಂ, ಶೇರ್ ಚಾಟ್ ಹೀಗೆ ಹತ್ತಾರು ವೇದಿಕೆಗಳಲ್ಲಿ ಅಮಾಯಕರನ್ನು ಸಂಪರ್ಕಿಸುವ ಸೈಬರ್ ಖದೀಮರು ಹಣ ದುಪ್ಪಟ್ಟು ಮಾಡುವ ಆಸೆ ತೋರಿಸುತ್ತಾರೆ. ಅದನ್ನು ಯಾರಾದರೂ ನಂಬಿದರೆ ಅವರು ಸಂಪೂರ್ಣ ನಂಬುವ ತರ ಕ್ರಿಪ್ಟೋ ಮತ್ತು ಷೇರು ಮಾರುಕಟ್ಟೆಯ ಕಥೆ ಕಟ್ಟಿ ಅವರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ. ಬಳಿಕ ವಾಟ್ಸಾಪ್ ಮತ್ತು ಟೆಲಿಗ್ರಾಂ ಆಪ್‌ಗಳಲ್ಲಿ ಕೆಲವು ಗ್ರೂಪ್‌ಗಳನ್ನು ರಚಿಸಿ ಅವುಗಳಿಗೆ ಜನರನ್ನು ಸೇರಿಸುತ್ತಾರೆ. ಆ ಗುಂಪಿನಲ್ಲಿ BTC/Crypto ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಆನ್‌ಲೈನ್ ಟ್ಯುಟೋರಿಯಲ್‌ಗಳನ್ನು ನೀಡುತ್ತಾರೆ. ನೀವು ಅವರು ಹೇಳಿದ್ದನ್ನು ನಂಬುತ್ತಿದ್ದೀರಿ ಎಂದು ತಿಳಿಯುತ್ತಿದ್ದಂತೆ BTC/Crypto ಮತ್ತು ಷೇರು ಮಾರುಕಟ್ಟೆಯಲ್ಲಿ ಖಾತೆಯನ್ನು ತೆರೆಯಿರಿ ಎಂದು ಪ್ರೇರೆಪಿಸುತ್ತಾರೆ.
ವೈಯಕ್ತಿಕ ಮಾಹಿತಿ ಕೊಟ್ರೋ ನಿಮ್ ಕಥೆ ಮುಗೀತು!
ನೀವು ಖಾತೆ ತೆರೆಯಲು ಒಪ್ಪಿದಲ್ಲಿ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಪಾನ್ ಕಾರ್ಡ್‌ಗಳ ನಂಬರ್‌ನ ಮಾಹಿತಿಯನ್ನೂ ಪಡೆದುಕೊಳ್ಳುತ್ತಾರೆ. ಇದೇ ಸಮಯದಲ್ಲಿ ನೀವು ಇರುವ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ನಂಬಿಕೆ ಬರುವಂತೆ ಗ್ರೂಪ್ ಚಾಟ್ ಮಾಡುತ್ತಾರೆ. ಆ ಬಳಿಕ ನಿಮ್ಮ ಅರಿವಿಗೆ ಬರದಂತೆಯೇ ನಿಮ್ಮ ಅಕೌಂಟ್‌ನಿಂದ ಹಂತ ಹಂತವಾಗಿ ಎಲ್ಲಾ ಹಣವನ್ನು ದೋಚಿ ಪಂಗನಾಮ ಹಾಕಿ ಎಸ್ಕೇಪ್ ಆಗುತ್ತಾರೆ. ದೆಹಲಿ, ಹರಿಯಾಣ , ರಾಜಸ್ಥಾನ , ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂತಹ ವಂಚಕ ಗುಂಪುಗಳು ಇದ್ದು, ಇದೀಗ ಕರ್ನಾಟಕದಲ್ಲಿ ಕೂಡ ಆಕ್ಟೀವ್ ಆಗಿರುವುದು ಪೊಲೀಸರಿಂದ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ