ಕೇಂದ್ರ ನೀಡಿರುವ ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ; ಹೆಚ್.ಕೆ. ಪಾಟೀಲ್ ವ್ಯಂಗ್ಯ

ಅಧಿವೇಶನದಲ್ಲಿ ಸುಧಾರಣೆ ತನ್ನಿ ಹಾಗೆಂದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ಮಾಧ್ಯಮಗಳ ಮೇಲಿನ ನಿರ್ಬಂಧ ಸರಿಯಲ್ಲ ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಚಿವ ಹೆಚ್​.ಕೆ. ಪಾಟೀಲ್ ಕಿಡಿಕಾರಿದ್ದಾರೆ.

MAshok Kumar | news18-kannada
Updated:October 9, 2019, 6:15 PM IST
ಕೇಂದ್ರ ನೀಡಿರುವ ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ; ಹೆಚ್.ಕೆ. ಪಾಟೀಲ್ ವ್ಯಂಗ್ಯ
ಮಾಜಿ ಸಚಿವ ಎಚ್​​ ಕೆ ಪಾಟೀಲ್​​​​
  • Share this:
ಬೆಂಗಳೂರು (ಅಕ್ಟೋಬರ್ 09); ಪ್ರವಾಹದಿಂದಾಗಿ ಇಡೀ ಉತ್ತರ ಕರ್ನಾಟಕ ಜನ ಬೀದಿಗೆ ಬಿದ್ದಿದ್ದಾರೆ. ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜಾನುವಾರುಗಳು ನೀರು ಪಾಲಾಗಿವೆ. ಸಾವಿರಾರು ಕೋಟಿ ನಷ್ಟವಾಗಿದೆ. ಆದರೆ, ನೆರೆ ಪರಿಹಾರದ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಂಬಂತಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

ನಾಳೆ ವಿಧಾನಮಂಡಲ ಅಧಿವೇಶನದ ಸಲುವಾಗಿ ಕಾಂಗ್ರೆಸ್ ಪಕ್ಷ ಇಂದು ಖಾಸಗಿ ಹೋಟೆಲ್​ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಈ ಸಭೆಗೆ ಆಗಮಿಸಿದ್ದಾಗ ಪತ್ರಕರ್ತರ ಜೊತೆ ಮಾತನಾಡಿರುವ ಹೆಚ್.ಕೆ. ಪಾಟೀಲ್, “ನೆರೆಯಿಂದಾಗಿ ಇಡೀ ಉತ್ತರ ಕರ್ನಾಟಕ ಜನ ತತ್ತರಿಸಿ ಹೋಗಿದ್ದಾರೆ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಈವರೆಗೆ ಸೂಕ್ತ ಪರಿಹಾರ ಕಾರ್ಯ ನಡೆದಿಲ್ಲ. ಹೀಗಾಗಿ ಕೇಂದ್ರದಿಂದ ಪರಿಹಾರ ಕೋರಿ ಸರ್ವಪಕ್ಷಗಳ ನಿಯೋಗ ಒಯ್ಯುವಂತೆ ನಾವು ಆಡಳಿತ ಪಕ್ಷವನ್ನು ಒತ್ತಾಯಿಸಿದ್ದೆವು.

ಆದರೆ, ರಾಜ್ಯದಿಂದ ಆಯ್ಕೆಯಾದ ಯಾವ ಸಂಸದರೂ ಸರ್ವಪಕ್ಷ ನಿಯೋಗದ ಭೇಟಿಗೆ ಅವಕಾಶ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ. ಇನ್ನೂ ರಾಜ್ಯ ನಾಯಕರು ಸರ್ವಪಕ್ಷ ನಿಯೋಗಕ್ಕೆ ಸಮ್ಮತಿಯೂ ಸೂಚಿಸಿರಲಿಲ್ಲ. ಕೊನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಲ್ಪ ಪ್ರಮಾಣದ ಪರಿಹಾರ ನೀಡಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಅಲ್ಲದೆ, ಅನೇಕ ಬಿಜೆಪಿ ನಾಯಕರು ನೆರೆ ಸಂತ್ರಸ್ತರಿಗೆ ಘಾಸಿಯಾಗುವಂತೆಯೂ ಮಾತನಾಡಿದ್ದು, ಶೀಘ್ರದಲ್ಲಿ ಈ ಕುರಿತು ಹೋರಾಟ ರೂಪಿಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಹರಿಹಾಯ್ದಿರುವ ಹೆಚ್.ಕೆ. ಪಾಟೀಲ್, “ಬಿಜೆಪಿ ಸರ್ಕಾರ ಮಾಧ್ಯಮಗಳ ಮೇಲಿನ ಭಯದಿಂದ ಇಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಶಾಸಕರ ಇತರೆ ವಿಚಾರಗಳ ಕುರಿತು ಮಾಧ್ಯಮಗಳು ಬೆಳಕು ಚೆಲ್ಲುತ್ತದೆ ಎಂಬ ಹೆದರಿಕೆ ಇಂತಹ ನಿರ್ಧಾರಕ್ಕೆ ಕಾರಣ. ಅಧಿವೇಶನದಲ್ಲಿ ಸುಧಾರಣೆ ತನ್ನಿ ಹಾಗೆಂದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ಮಾಧ್ಯಮಗಳ ಮೇಲಿನ ನಿರ್ಬಂಧ ಸರಿಯಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಅಧಿವೇಶನದ ಹಿನ್ನೆಲೆ ಸಂಪುಟ ಸಭೆ ಕರೆದಿರುವ ಬಿಎಸ್​ವೈ; ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಸಜ್ಜಾದ ಕಮಲ ಪಾಳಯ

First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ