ಬದಲಾದ ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ‘ವಿಜಯ’ ಯಾತ್ರೆ?

ಅಕಸ್ಮಾತ್​ ರಾಜಾಹುಲಿ ಸಕ್ರಿಯ ರಾಜಕಾರಣಕ್ಕೆ ಫುಲ್​ಸ್ಟಾಪ್​ ಬಿದ್ದರೆ ಮುಂದೆ ರಾಜ್ಯ ರಾಜಕಾರಣದಲ್ಲಿ ಮಕ್ಕಳ ಭವಿಷ್ಯವೇನು? ಇಂತಹದ್ದೊಂದು ಪ್ರಶ್ನೆ ಖುದ್ದು ಯಡಿಯೂರಪ್ಪಗೆ ಒಂದು ಸಲವಾದ್ರೂ ಬರದೇ ಇದ್ದರೆ ಅಚ್ಚರಿಯಿಲ್ಲ! ಇದೇ ಕಾರಣಕ್ಕೆ ನಿಧಾನವಾಗಿ ಮಗನನ್ನು ಮುನ್ನಲೆಗೆ ತರುತ್ತಿರುವಂತಿದೆ.

ಬಿಎಸ್​ ಯಡಿಯೂರಪ್ಪ- ವಿಜಯೇಂದ್ರ

ಬಿಎಸ್​ ಯಡಿಯೂರಪ್ಪ- ವಿಜಯೇಂದ್ರ

 • Share this:
  ಕರ್ನಾಟಕ ಬಿಜೆಪಿ ಅಂದ್ರೆ ಯಡಿಯೂರಪ್ಪ... ಯಡಿಯೂರಪ್ಪ ಅಂದ್ರೆ ಕರ್ನಾಟಕ ಬಿಜೆಪಿ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪೊಲಿಟಿಕಲ್​ ಟ್ರೆಂಡ್​. ಆದರೆ, ದಿಲ್ಲಿ ಬಿಜೆಪಿಯ ಗಣಿತ ಬದಲಾಗುತ್ತಿದ್ದಂತೆ ರಾಜ್ಯ ಬಿಜೆಪಿಯ ಫಾರ್ಮುಲಾಗಳೂ ಬದಲಾದವು. ನಳಿನ್​ ಕುಮಾರ್ ಕಟಿಲ್​ ನೇಮಕ, ಬಿಬಿಎಂಪಿ ಮೇಯರ್ ಆಯ್ಕೆ, ಸಂಪುಟ ಸರ್ಕಸ್​, ನೆರೆ ಪರಿಹಾರ, ಈಗ ಜಿಎಸ್​ಟಿ ತೆರಿಗೆ ಪಾಲು.. ಎಲ್ಲದರಲ್ಲೂ ದಿಲ್ಲಿ ಮುದ್ರೆಯದ್ದೇ ಅಂತಿಮ ಶಾಸನ. ಆದರೂ, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಇದ್ದ ವೇದಿಕೆಯಲ್ಲೇ ಪರಿಹಾರ ಕೊಡಿ ಅನ್ನೋ ಟ್ರೇಲರ್ ಬಿಟ್ಟು ಮತ್ತೊಮ್ಮೆ ಟ್ರೆಂಡ್ ಆಗಿದ್ದರು ಯಡಿಯೂರಪ್ಪ.

  ಏನಾದ್ರೇನು..? ಸಂಪುಟ ಸರ್ಕಸ್​​ನಲ್ಲಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿಬಿಟ್ಟರು ಸಿಎಂ. ಅಳೆದು-ತೂಗಿ, ಕಾಡಿ-ಬೇಡಿ ದಿಲ್ಲಿ ಅಂಗಳ ತಲುಪಿದ್ದೂ ಆಯ್ತು. ವರಿಷ್ಠರ ಜೊತೆ ಮಾತನಾಡಿ ನೂತನ ಸಚಿವರ ಪಟ್ಟಿಗೆ ಒಪ್ಪಿಗೆ ತಂದಿದ್ದೂ ಆಯ್ತು. ಇಡೀ ದಿಲ್ಲಿ ಭೇಟಿಯಲ್ಲಿ ಅತ್ಯಂತ ವಿಶೇಷವಾಗಿ ಕಂಡಿದ್ದು ವಿಜಯೇಂದ್ರ! ಸೂಟು-ಬೂಟು ಧರಿಸಿ ಟಿಪ್​ಟಾಪಾಗಿ ಅಪ್ಪನ ಜೊತೆ ಕುಳಿತು ಮಿಂಚಿದ್ರು ವಿಜಯೇಂದ್ರ. ದಿಲ್ಲಿಯಲ್ಲಿ ಕರ್ನಾಟಕದ ಅಷ್ಟೊಂದು ಸಂಸದರಿದ್ದಾರೆ, ಕೇಂದ್ರ ಸಚಿವರಿದ್ದಾರೆ. ರಾಜ್ಯದಲ್ಲಿ ಹಿರಿಯ ನಾಯಕರಿದ್ದಾರೆ. ಅರೇ, ಎಲ್ಲಾ ಬಿಟ್ಟು ಇದೇನಪ್ಪಾ ವಿಜಯೇಂದ್ರ ಮಿಂಚಿಂಗು? ಇಂತಹದ್ದೊಂದು ಅಚ್ಚರಿ, ಜೊತೆಗೆ ಆಕ್ಷೇಪ ಕೂಡ ಕೇಳಿಬಂತು. ವಿಷಯ ಇರೋದೇ ಇಲ್ಲಿ ಎಂದನಿಸುತ್ತಿದೆ ಕೆಲವರಿಗೆ.

  ಇತ್ತೀಚೆಗಷ್ಟೇ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಹೇಳಿಯೊಂದನ್ನು ನೀಡಿದ್ದರು. "ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ನಿಲ್ಲೋದಿಲ್ಲ" ಅನ್ನೋದು ಅವರ ಒನ್​ಲೈನ್​ ಬ್ರೇಕಿಂಗ್​ ನ್ಯೂಸ್​. ಪ್ರಭಾಕರ್ ಭಟ್​ ಮಾತಿಗೂ, ಎಲ್ಲಾ ಒತ್ತಡಗಳ ನಡುವೆ ಯಡಿಯೂರಪ್ಪ ಸೈಲೆಂಟಾಗಿರೋದಕ್ಕೂ ಎಲ್ಲೋ ತಾಳೆಯಾಗ್ತಿದೆ ಎಂದನಿಸುತ್ತಿದೆ.

  ಅಕಸ್ಮಾತ್​ ರಾಜಾಹುಲಿ ಸಕ್ರಿಯ ರಾಜಕಾರಣಕ್ಕೆ ಫುಲ್​ಸ್ಟಾಪ್​ ಬಿದ್ದರೆ ಮುಂದೆ ರಾಜ್ಯ ರಾಜಕಾರಣದಲ್ಲಿ ಮಕ್ಕಳ ಭವಿಷ್ಯವೇನು? ಇಂತಹದ್ದೊಂದು ಪ್ರಶ್ನೆ ಖುದ್ದು ಯಡಿಯೂರಪ್ಪಗೆ ಒಂದು ಸಲವಾದ್ರೂ ಬರದೇ ಇದ್ದರೆ ಅಚ್ಚರಿಯಿಲ್ಲ! ಇದೇ ಕಾರಣಕ್ಕೆ ನಿಧಾನವಾಗಿ ಮಗನನ್ನು ಮುನ್ನಲೆಗೆ ತರುತ್ತಿರುವಂತಿದೆ.

  ಎಷ್ಟೋ ಜನರಿಗೆ ವಿಜಯೇಂದ್ರ ದೆಹಲಿ ಭೇಟಿ ಈ ಸ್ಟ್ರಾಟೆಜಿಯ ಒಂದು ಭಾಗವೇ ಆದಂತೆ ಗೋಚರವಾಯ್ತು.  ಆದರೆ ಇದೇ ವಿಜಯೇಂದ್ರಗೆ ವರುಣಾ ಟಿಕೆಟ್​  ಬೇಡ ಎಂದಿದ್ದು ಇದೇ ಹೈಕಮಾಂಡ್​ ಅಲ್ಲವೇ? ಈ ಪ್ರಶ್ನೆಗೆ ಕೆಆರ್​ ಪೇಟೆ ಗೆಲುವಿನ ಮೂಲಕ ಉತ್ತರ ಕೊಟ್ಟಿದ್ದಾರೆ ವಿಜಯೇಂದ್ರ!

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏನೇನೆಲ್ಲಾ ಆಯ್ತು ಎಲ್ಲರಿಗೂ ಗೊತ್ತಿದೆ. ಅಚ್ಚರಿ ಅನ್ನೋ ರೀತಿ ಸಿದ್ದರಾಮಯ್ಯ ಮಗ ಯತೀಂದ್ರ, ಬಿಎಸ್​ವೈ ಮಗ ವಿಜಯೇಂದ್ರ ಮುಖಾಮುಖಿಯಾದರು. ಹಾಲಿ ಸರ್ಕಾರವಿದೆ ಅಲ್ಲದೆ, ಸಿದ್ದರಾಮಯ್ಯ ಗೆದ್ದು, ಮಗನಿಗೆ ಬಿಟ್ಟುಕೊಟ್ಟಿದ್ದ ಕ್ಷೇತ್ರ. ಇಂತಹ ವಾತಾವರಣದಲ್ಲಿ ದಿಢೀರ್​ ಅಂತ ಅಖಾಡಕ್ಕಿಳಿದ ವಿಜಯೇಂದ್ರ ಸೃಷ್ಟಿಸಿದ ಹವಾ ಆ ದಿನಗಳ ಮಟ್ಟಿಗೆ ಒಂಥರಾ ಅಚ್ಚರಿಯೇ ಸರಿ.

  ಸಿದ್ದಲಿಂಗಸ್ವಾಮಿಯನ್ನೂ ಬೆನ್ನಿಗೆ ಕಟ್ಟಿಕೊಂಡು, ರೇವಣ್ಣ ಸಿದ್ದಯ್ಯ ವಿಶ್ವಾಸ ಗಳಿಸಿದ್ದು, ಲಿಂಗಾಯತ ಮತಗಳಿಗಾಗಿ ಇಡಿಯಾಗಿ ಪ್ರಚಾರ ಮಾಡಿದ್ದು. ಕ್ಷೇತ್ರದಲ್ಲಿ ಮಿಂಚಿನಂತೆ ಓಡಾಡಿದ್ದು ಎಲ್ಲವೂ ಕೂಡ ಒಂದು ಹಂತದಲ್ಲಿ ಖುದ್ದು ಸಿದ್ದರಾಮಯಯ್ಯ ತಮ್ಮ ಮಗನ ಕಥೆಯೇನು? ಎಂದು ಲೆಕ್ಕಾಚಾರ ಹಾಕುವಂತೆ ಮಾಡಿತ್ತು. ವಂಶವಾದವನ್ನು ಮುಂದಿಟ್ಟು ಬಿಜೆಪಿ ಹೈ ಕಮಾಂಡ್​ ಬ್ರೇಕ್​ ಹಾಕಿದ್ಮೇಲೆಯೇ ಸಿದ್ದರಾಮಯ್ಯ ನಿಟ್ಟುಸಿರುಬಿಟ್ಟಿದ್ದು. ಹೀಗಿದ್ದ ವಿಜಯೇಂದ್ರಗೆ ದಿಲ್ಲಿಯಿಂದಲೇ ಕರೆ ಬರುತ್ತೆ ಅಂದ್ರೆ ಅದಕ್ಕೆ ಕಾರಣ ಕೆಆರ್​ಪೇಟೆ ಗೆಲುವು!

  ಜೆಡಿಎಸ್​ ಭದ್ರಕೋಟೆಯಲ್ಲಿ ಅದೂ ಕೂಡ ಒಕ್ಕಲಿಗರ ಸರ್ಕಾರ ಬೀಳಿಸಿದ ವಾತಾವರಣದಲ್ಲಿ ನೆಲೆಯೇ ಇಲ್ಲದ ಬಿಜೆಪಿ ಮಂಡ್ಯದಲ್ಲಿ ಖಾತೆ ತೆರೆಯೋದು ಅಂದ್ರೆ ಅಲ್ಲೊಂದು ಮ್ಯಾಜಿಕ್​ ಆಗಿರಲೇಬೇಕು. ಅದು ಜನಬಲವೋ? ಹಣಬಲವೋ? ಅದು ಅವರವರ ಲೆಕ್ಕಾಚಾರಗಳಿಗೆ ಬಿಟ್ಟಿದ್ದು. ಅಂತಿಮವಾಗಿ ಗೆದ್ದಿದ್ಯಾರು ಅನ್ನೋದಷ್ಟೇ ಇಂದಿನ ಪ್ರಜಾಪ್ರಭುತ್ವದ ವ್ಯಂಗ್ಯ. ಅದನ್ನ ಚೆನ್ನಾಗಿಯೇ ಪ್ರೂವ್​ ಮಾಡಿದಂತಿದೆ ವಿಜಯೇಂದ್ರ. ಈ ಫಲಿತಾಂಶವೇ ಹೈಕಮಾಂಡ್​ ಕಣ್ಣಲ್ಲಿ ಒಂದು ಹೊಸ ಲೆಕ್ಕಾಚಾರ ಹುಟ್ಟುಹಾಕಿರಬಹುದಾ?

  ಸದ್ಯ ರಾಜ್ಯ ಲಿಂಗಾಯತ ಸಮುದಾಯದ ಅನಭಿಷಕ್ತ ಚಕ್ರವರ್ತಿ ರೀತಿ ಯಡಿಯೂರಪ್ಪ ಮುಂದುವರಿದಿದ್ದಾರೆ. ಬೈ ಎಲೆಕ್ಷನ್​ ಗೆಲುವೇ ಇದಕ್ಕೆ ಇತ್ತೀಚಿನ ಉದಾಹರಣೆ. ಇದರ ಅರಿವು ಹೈ ಕಮಾಂಡ್​ಗೆ ಚೆನ್ನಾಗಿ ಇದೆ. ಒಂದೊಮ್ಮೆ ನಾಯಕತ್ವಕ್ಕೆ ಬಹಿರಂಗ ಕಿರಿಕಿರಿ ಮಾಡಿದರೆ ಆಗಬಹುದಾದ ಡ್ಯಾಮೇಜ್ ಬಗ್ಗೆ ದಿಲ್ಲಿ ನಾಯಕರಿಗೂ ಒಂದು ಅಂದಾಜಿದೆ. ಹಾಗಂತ ಭವಿಷ್ಯವನ್ನೂ ಕೂಡ ನೋಡದೇ ಇರಲಾಗಲ್ಲ ಅನ್ನೋದು ಹೈ ಕಮಾಂಡ್​ ಲೆಕ್ಕಾಚಾರ. ಇತರ ರಾಜ್ಯಗಳ ಬಿಜೆಪಿ ಘಟಕಗಳಲ್ಲಾದ ಪರೀಕ್ಷಾತ್ಮಕ ಬದಲಾವಣೆಯೇ ಇದಕ್ಕೆ ಸಾಕ್ಷಿ.

  ಇದಕ್ಕೆ ಪೂರಕ ಅನ್ನೋ ರೀತಿ ಇತ್ತೀಚೆಗಷ್ಟೇ ಕಲ್ಲಡ್ಕ ಪ್ರಭಾಕರ್ ಭಟ್​ ಕೊಟ್ಟಿದ್ದ ಹೇಳಿಕೆ ಭಾರೀ ಸದ್ದು ಮಾಡಿತ್ತು. ಮುಂದೆ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿರೋದಿಲ್ಲ. ಹೀಗಂತ ನನ್ನ ಬಳಿ ಹೇಳಿಕೊಂಡಿದ್ದಾರೆ ಅಂತ ಬಾಂಬ್​ ಸಿಡಿಸಿದ್ರು ಕಲ್ಲಡ್ಕ. ಇದರ ಭಾಗ ಅನ್ನೋ ರೀತಿಯೇ ಲಕ್ಷ್ಮಣ ಸವದಿ ಮುನ್ನಲೆಗೆ ತರುವ ಪ್ರಯತ್ನ ನಡೆದಿದೆ.  ಸೋತ ಮೇಲೆ ಡಿಸಿಎಂ ಮಾಡಿದ್ದಾಯ್ತು. ಈಗ ಕುಮಟಳ್ಳಿ ಸಚಿವ ಸ್ಥಾನ ತಪ್ಪಿಸಿ, ಶಂಕರ್​ಗೆ ಪರಿಷತ್​ ಸ್ಥಾನದ ಮಾತನ್ನೂ ಮೀರಿ ಲಕ್ಷ್ಮಣ ಸವದಿ ಹಾದಿ ಸುಗಮವಾಗಿದೆ.  ಕಾರಣ ಹೈಕಮಾಂಡ್.

  ಹಾಗಂತ ಎಲ್ಲದಕ್ಕೂ ಬಗ್ಗೋ ಅಸಾಮಿ ಅಲ್ಲವೇ ಅಲ್ಲ ಯಡಿಯೂರಪ್ಪ. ಆದರೂ, ಈ ಸಲ ಯಾಕೆ ಸುಮ್ಮನಿರಬಹುದು? ಕಾರಣ ವಿಜಯೇಂದ್ರ! ಸವದಿಗೆ ಸ್ಥಾನಮಾನ ಕೊಟ್ಟ ಮೇಲೂ ಒಂದೊಮ್ಮೆ ಬಿಎಸ್​ವೈ ಕೆಣಕಿದ್ರೆ ಇಡೀ ಲಿಂಗಾಯತ ಸಮುದಾಯ ಒಟ್ಟಾಗಿ ನಿಲ್ಲೋದಿಲ್ಲ. ಮತಬ್ಯಾಂಕ್​ ಛಿದ್ರವಾಗೋ ಭೀತಿ ಇದೆ. ಅಲ್ಲದೆ, ಸವದಿ ಗೆಲ್ಲುವ ಕುದುರೆನಾ? ಈ ಪ್ರಶ್ನೆಗೆ ಮುಂದಿನ ಚುನಾವಣೆಗಳೇ ಉತ್ತರ.

  ಬರೀ ಸವದಿ ನೆಚ್ಚಿಕೊಂಡು ಇಡೀ ಲಿಂಗಾಯತ ಸಮುದಾಯ ಒಲಿಸಿಕೊಳ್ಳೋ ತಲೆಬುಡವಿಲ್ಲದ ಲೆಕ್ಕಾಚಾರವಂತೂ ಯಾರಿಗೂ ಇಲ್ಲ. ಹಾಗಾಗೇ ನಯವಾಗಿಯೇ ಯಡಿಯೂರಪ್ಪ ನಾಯಕತ್ವವನ್ನು ತೆರೆಮರೆಗೆ ಸರಿಸಿ, ಇದಕ್ಕೆ ಪರಿಹಾರವಾಗಿ ವಿಜಯೇಂದ್ರಗೆ ಮಣೆಹಾಕಿ ಸಮಾಧಾನ ಮಾಡೋ ಯತ್ನ ಇದ್ದರೂ ಇರಬಹುದು.

  ಇತ್ತೀಚೆಗಷ್ಟೇ ಸಿದ್ದರಾಮಯ್ಯ ಆಡಿದ್ದ ಮಾತೊಂದು ರಾಜ್ಯ ರಾಜಕಾರಣದಲ್ಲಿ ವಿವಾದ ಹುಟ್ಟುಹಾಕಿತ್ತು. ಮೊದಲಿನಂತೆ ಲಿಂಗಾಯತ ಸಮುದಾಯ ಯಡಿಯೂರಪ್ಪಗಾಗಲಿ, ಒಕ್ಕಲಿಗ ಸಮುದಾಯ ಕುಮಾರಸ್ವಾಮಿಗಾಗಲಿ ಜೊತೆಗೆ ನಿಲ್ಲೋದಿಲ್ಲ ಅನ್ನೋ ರಹಸ್ಯ ಮಾತುಕತೆ ಲೀಕಾಗಿ ಭಾರಿ ಗದ್ದಲವಾಗಿ ಹೋಗಿತ್ತು. ಆದರೆ ಕುಮಾರಸ್ವಾಮಿ ಎಚ್ಚೆತ್ತುಕೊಂಡಂತಿದೆ. ಕೆಪಿಸಿಸಿಯಲ್ಲಿ ಡಿಕೆಶಿ ಯುಗ ಆರಂಭವಾಗುವ ಮುನ್ನವೇ ಮಂಗಳೂರು ಗಲಭೆ, ಏರ್​ಪೋರ್ಟ್​ ಬಾಂಬ್​ ವಿಚಾರಗಳಲ್ಲಿ ತಮಗೆ ಜೀವಬೆದರಿಕೆ ಇದೆ ಅನ್ನೋ ಮಾತಾಡಿ ಒಕ್ಕಲಿಗರ ಅಸ್ಮಿತೆ ಮುನ್ನಲೆಗೆ ತಂದಿದ್ದಾರೆ.

  ಇತ್ತ ಯಡಿಯೂರಪ್ಪ ರಾಜಕೀಯ ಅಧ್ಯಾಯ ಮುಗಿದರೆ ಮುಂದೇನು? ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿ ಕೂಡ ಇದೆ. ಸಿಂಗಲ್ಲಾಗಿ ಸವದಿಯನ್ನೇ ನೆಚ್ಚಿಕೊಳ್ಳೋ ಬದಲು ವಿಜಯೇಂದ್ರಗೂ ಮಣೆ ಹಾಕೋ ಮೂಲಕ ತೆರೆಮರೆಗೆ ಸರಿದ ಮೇಲೂ ಬಿಎಸ್​ವೈ ಇಮೇಜ್​ ಬಳಸಿಕೊಳ್ಳೋ ಮುಂದಾಲೋಚನೆ ಇರಬಹುದು. ವಿಜಯೇಂದ್ರ ಕೂಡ ಬರೀ ತಂದೆ ಹೆಸರನ್ನಷ್ಟೇ ಹೇಳಿ ರಾಜಕೀಯ ಮಾಡುತ್ತಿಲ್ಲ. ದಿನೇ ದಿನೇ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದಾರೆ.  ಕೆಆರ್​ಪೇಟೆ ಗೆದ್ದ ಮೇಲೆ ರಾಜ್ಯದ ಇತರ ಕಡೆಯೂ ಸುತ್ತುತ್ತಿದ್ದಾರೆ.

  ಉತ್ತರ ಕರ್ನಾಟಕದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯಲ್ಲಿ ವಿಜಯೇಂದ್ರ ಹೆಸರು ಹೇಳುತ್ತಿದ್ದಂತೆ ಶಿಳ್ಳೆ-ಚಪ್ಪಾಳೆ ಜೋರಾಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಜೊತೆಗೆ ಇದ್ದಬದ್ದ ಲಿಂಗಾಯತ ಕಾರ್ಯಕ್ರಮಗಳಿಗೆಲ್ಲಾ ಸರಣಿಯಾಗಿ ಭೇಟಿ ಕೊಡುತ್ತಿದ್ದಾರೆ. ಇಂತಹ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ವಿಜಯೇಂದ್ರ ನಾಯಕತ್ವದ, ಸಮುದಾಯದ ಮಾತುಗಳನ್ನೇ ಆಡುತ್ತಿದ್ದಾರೆ.

  ಕೆಂಗೇರಿಯಲ್ಲಿ ನಡೆದ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಗಿದ್ದೂ ಇದೆ. “ರೈತರ ಪರ ಹೋರಾಡಲು ತಂದೆಯಂತೆ ನನಗೂ ಶಕ್ತಿ ಕೊಡಿ. ವರುಣಾದಿಂದ ರಾಜಕೀಯ ಆರಂಭಿಸಿದ್ದೇನೆ. ಈಗ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ನನ್ನಿಂದಾದ ಸೇವೆ ಮಾಡುತ್ತೇನೆ. ನಿಮ್ಮ ಆಶೀರ್ವಾದವಿರಲಿ” ಅನ್ನೋದು ವಿಜಯೇಂದ್ರ ಭಾಷಣದ ಹೈಲೈಟ್ಸ್​, ಈ ಮಾತುಗಳಿಗೂ, ಮೊನ್ನೆಯ ದಿಲ್ಲಿ ಭೇಟಿಯ ದೃಶ್ಯಗಳಿಗೂ ಏನೋ ಸಂಬಂಧವಿದ್ದಂತೆ ಗೋಚರವಾಗ್ತಿರೋದಂತೂ ಸದ್ಯದ ಬ್ರೇಕಿಂಗ್​ ನ್ಯೂಸ್.

  (ಮಧು ಎಂ ಉತ್ತುವಳ್ಳಿ ನ್ಯೂಸ್​ 18 ಕನ್ನಡ)

  ಇದನ್ನೂ ಓದಿ : ಅನಂತ​ಕುಮಾರ್ ಹೆಗಡೆಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ; ಸಿದ್ದರಾಮಯ್ಯ ಆಕ್ರೋಶ

   
  First published: