ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಾದ್ಯಂತ ಮಳೆ (Rain) ಮುಂದುವರೆದಿದ್ದು, ಮಲೆನಾಡು (Malenadu) ಭಾಗದ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ. ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ. ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ (Habbale Bridge) ಪದೇ ಪದೇ ಭದ್ರಾನದಿ ನೀರಿನಲ್ಲಿ ಮುಳುಗುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (School) 1ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ (Girl) ಸುಪ್ರೀತ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ತೆರಳುವ ವೇಳೆ ಕಾಫಿತೋಟದಲ್ಲಿದ್ದ ಹಳ್ಳಕ್ಕೆ ಕಾಲುಜಾರಿ ಬಿದ್ದಿದ್ದು, ಬಾಲಕಿಯ ಶೋಧಕಾರ್ಯಕ್ಕೆ ಬೆಂಗಳೂರಿನಿಂದ (Bengaluru) ಎಸ್ಡಿಆರ್ ಎಫ್ ತಂಡ ಕರೆಸಲು ಜಿಲ್ಲಾಡಳಿತ ಮುಂದಾಗಿದೆ.
ತುಂಬಿ ಹರಿಯುತ್ತಿರುವ ನದಿಗಳು
ಶೃಂಗೇರಿ ಶಾರದಾ ದೇವಸ್ಥಾನ ಬಳಿ ಹರಿಯುವ ತುಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೋಮವಾರ ರಾತ್ರಿಯಿಡಿ ಸುರಿದ ಬಾರೀ ಮಳೆಗೆ ನದಿನೀರು ಶಾರದಾ ದೇವಸ್ಥಾನಕ್ಕೆ ತೆರಳುವ ಸಿಮೆಂಟ್ ರಸ್ತೆವರೆಗೂ ನೀರು ನಿಂತಿತ್ತು. ಮಧ್ಯಾಹ್ನದ ವೇಳೆಗೆ ನೀರು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. ಹೇಮಾವತಿ ಮತ್ತು ಸೋಮಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಹಲವು ಮನೆಗಳಿಗೆ ಹಾನಿ
ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳಗೆ ಜಿಲ್ಲೆಯಲ್ಲಿ 28 ಮನೆಗಳಿಗೆ ಹಾನಿಯಾಗಿದೆ. ಅನೇಕ ವಿದ್ಯುಯ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಎರಡು ವಾಟರ್ ಟ್ಯಾಂಕ್ಗೆ ಹಾನಿಯಾಗಿದೆ. 56ಕಿ.ಮೀ. ರಸ್ತೆಗೆ ಹಾನಿಯಾಗಿದೆ. ಎರಡು ಶಾಲೆ ಹಾಗೂ 7 ಸೇತುವೆಗಳಿಗೆ ಹಾನಿಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಎಡ ಬಿಡದೆ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು, ತರೀಕೆರೆ ಭಾಗದಲ್ಲೂ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾದ್ಯಂತ ಮೋಡಕವಿದ ವಾತವರಣ ಮುಂದುವರೆದಿದೆ.
ಇದನ್ನೂ ಓದಿ: Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಭೀತಿ; ವರುಣನ ಆರ್ಭಟಕ್ಕೆ ತತ್ತರಿಸಿದ ಜನ
ದಂಪತಿ ಮಲಗಿದ್ದಾಗ ಬಿದ್ದ ಮರ
ತರೀಕೆರೆ ತಾಲ್ಲೂಕು ನಂದಿಬಟ್ಟಲು ಕಾಲೋನಿ ಜಯಪುರ ಮಾರ್ಗದ ರಸ್ತೆಮೇಲೆ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನೆರವಿ ನೊಂದಿಗೆ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾರೀ ಮಳೆಯಿಂದ ಆರದವಳ್ಳಿ ಗ್ರಾಮದಲ್ಲಿ ರೈತರು ಹಾಕಿರುವ ಆಲೂಗಡ್ಡೆ ಬೆಳೆಗೆ ಅಂಗ ಮಾರಿ ಮತ್ತು ಕರುಕುರೋಗ ಬಾಧೆ ಕಾಣಿಸಿಕೊಂಡಿದ್ದು, ಬೆಳೆನಾಶದ ಆತಂಕ ರೈತರಲ್ಲಿ ಎದುರಾಗಿದೆ. ಬೆಳಗಿನ ಜಾವ ಮರ ಬಿದ್ದು ಮನೆ ಜಖಂಗೊಂಡಿದೆ. ಮನೆಯಲ್ಲಿ ಮಲಗಿದ್ದ ದಂಪತಿಗಳು ಮತ್ತು ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಮಳೆಹಾನಿ ವಿವರ
ಜೂ.1ರಿಂದ ಜುಲೈ 5ರ ವರೆಗೆ ಬಿದ್ದ ಮಳೆಗೆ ಗ್ರಾಮೀಣ ಭಾಗದ 37.55 ಕಿ.ಮೀ. ರಸ್ತೆಗೆ ಹಾನಿಯಾಗಿದೆ. 4ಸೇತುವೆ, 7ಸರ್ಕಾರಿ ಪ್ರಾಥಮಿಕ ಶಾಲೆ, 446 ವಿದ್ಯುತ್ ಕಂಬ, 932 ಮೀಟರ್ ವಿದ್ಯುತ್ ತಂತಿ, 1ಮನೆ ಪೂರ್ಣ ಹಾನಿಯಾದರೇ, 23 ಮನೆ ಭಾಗಶಃ ಹಾನಿಯಾಗಿದೆ. 1ಹಸು ಮೃತಪಟ್ಟಿದೆ.
ಪತ್ತೆಯಾಗದ ಬಾಲಕಿ ಮೃತದೇಹ
ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಸುಪ್ರೀತ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ತೆರಳುವ ವೇಳೆ ಕಾಫಿತೋಟದಲ್ಲಿದ್ದ ಹಳ್ಳಕ್ಕೆ ಕಾಲುಜಾರಿ ಬಿದ್ದಿದ್ದು, ಬಾಲಕಿಯ ಶೋಧಕಾರ್ಯಕ್ಕೆ ಬೆಂಗಳೂರಿನಿಂದ ಎಸ್ಡಿಆರ್ ಎಫ್ ತಂಡ ಕರೆಸಲು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ: Dakshina Kannada Rains: ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ರಜೆ ಮುಂದುವರಿಕೆ
ನಾಳೆಯೂ ಮುಂದುವರೆಯಲಿದೆ ಶೋಧಕಾರ್ಯ
ಭಾನುವಾರ ಮತ್ತು ಸೋಮವಾರ ಬಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಾಲಕಿ ಸುಪ್ರೀತ, ಎಂದಿನಂತೆ ಸೋಮವಾರ ಶಾಲೆಗೆ ಅಣ್ಣನೊಂದಿಗೆ ತೆರಳಿದ್ದು, ಸಂಜೆ ಮನೆಗೆ ಬರುವ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸೋಮವಾರ ರಾತ್ರೆವರೆಗೂ ಕಾರ್ಯಾಚರಣೆ ನಡೆಸಿದರು ಪ್ರಯೋಜನವಾಗಿಲ್ಲ. ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಬಾಲಕಿಗಾಗಿ ಶೋಧಕಾರ್ಯ ನಡೆಸಿದರು. ಬಾಲಕಿಯ ಮೃತದೇಹ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಿನ ಶೋಧಕಾರ್ಯಕ್ಕೆ ಬೆಂಗ ಳೂರಿನಿಂದ ಎಸ್ಡಿಆರ್ ಎಫ್ ತಂಡ ಕರೆಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ