ಕೋಲಾರ (ಜನವರಿ 29); ಜನವರಿ 26ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿರುವ ಗಲಭೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ರೈತ ಹೋರಾಟವನ್ನೇ ಮರೆ ಮಾಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ರೈತರು ಹಾಗೂ ಸೈನಿಕರನ್ನು ಗೌರವಿಸದ ದೇಶ ದೇಶವೇ ಅಲ್ಲ. ಭಾರತದಲ್ಲಿ ಇದೀಗ ಇಂತಹ ಪರಿಸ್ಥಿತಿ ಬಂದೊದಗಿದೆ. ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೆ ತೋರಿಸ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು. ಆದರೆ, ಇದೇ ವೇಳೆ ಲಕ್ಷಾಂತರ ರೈತರು ತಮಗೆ ಪೊಲೀಸರು ಗೊತ್ತುಪಡಿಸಿದ ರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದಾರೆ. ಆದರೆ, ಕೆಂಪುಕೋಟೆ ಗಲಭೆಯ ಸುದ್ದಿ ಮಾತ್ರ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದೆ. ಇನ್ನೂ ಇದೇ ವಿಚಾರವನ್ನು ಮುಂದಿಟ್ಟು ಕೇಂದ್ರ ಸರ್ಕಾರ ಸಹ ರೈತರ ಹೋರಾಟವನ್ನು ಹಣಿಯಲು ಮುಂದಾಗಿದೆ.
ಈ ಕುರಿತು ಕೋಲಾರದಲ್ಲಿ ಇಂದು ಮಾತನಾಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ದೆಹಲಿ ಹೊರ ವಲಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಲಕ್ಷಗಟ್ಟಲೆ ಜನ ಟ್ರಾಕ್ಟರ್ ನಲ್ಲಿ ಬಂದು ಹೋರಾಟದ ಭಾಗವಾಗಿದ್ದಾರೆ. ಈ ಸಂಖ್ಯೆಯ ಜನ ರೈತ ಹೋರಾಟದ ಕಣಕ್ಕೆ ಧುಮುಕಿದ್ದಾರೆ ಎಂದರೆ ಅವರ ಆಕ್ರೋಶ ಎಷ್ಟಿರಬಹುದು? ಈ ವೇಳೆ ಕೆಲ ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೇ ತೋರಿಸುತ್ತಿವೆ. ಈ ಮೂಲಕ ರೈತರ ಹೋರಾಟವನ್ನು ಮರೆಮಾಚುವ ಕೆಲಸ ನಡೆಯುತ್ತಿದೆ. ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ" ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ವಿರುದ್ಧ ಟೀಕೆ, ನ್ಯಾಯಾಂಗ ನಿಂದನೆ ಕೇಸ್; ಕ್ಷಮೆ ಕೇಳಲು ನಿರಾಕರಿಸಿದ ಕುನಾಲ್ ಕಮ್ರಾ
"ನಮ್ಮ ರೈತರು ನಮಗಾಗಿ ಅಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾವು ಇಲ್ಲಿ ಸುಮ್ಮನಿದ್ದೀವಿ. ನಮಗೆ ಲಜ್ಜೆ ಪಜ್ಜೆ ಏನಿಲ್ಲ. ಆದರೆ, ರೈತರ ಹೋರಾಟದ ಫಲ ಎಲ್ಲರಿಗು ಸಿಗುತ್ತದೆ. ನಾಳೆಯೊಳಗೆ ದೆಹಲಿಯ ಗಾಜೀಪುರ ಗಡಿಯಲ್ಲಿ 10 ಲಕ್ಷ ರೈತರು ಜಮಾಯಿಸಲಿದ್ದಾರೆ. ನಾವೇನು ಪುಕ್ದಟ್ಟೆ ಬೆಳೀತೀವಾ, ಬೆಲೆ ನಿಗದಿ ಬೇರೆಯವರು ಮಾಡಿದ್ರೆ ಹೇಗೆ. ಹೇಳೋವ್ರು ಗಂಜಲ, ಸಗಣಿ ಎತ್ತುತ್ತಾರ? ನಮ್ಮ ಹೆಣ್ಣು ಮಕ್ಕಳು ಎಲ್ಲಾ ಕೆಲಸ ಮಾಡ್ತಾರೆ. ಸ್ವಲ್ಪ ಬೆವರು ಬಂದ್ರು ಪೌಡರ್ ಹಾಕ್ಕೋಳೋವ್ರು ಇದಾರೆ. ಅಂತದ್ದರಲ್ಲಿ ರೈತರು ತಮ್ಮ ಹಕ್ಕನ್ನು ಕೇಳೋದು ತಪ್ಪಾ?" ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ