• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸರ್ಕಾರಕ್ಕೆ ನಮ್ಮ ಕ್ಷೇತ್ರಗಳೇ ಕಾಣಿಸುತ್ತಿಲ್ಲ ಎಂದು ಗೋಗರೆದ ಕಾಂಗ್ರೆಸ್ ಶಾಸಕರು

ಸರ್ಕಾರಕ್ಕೆ ನಮ್ಮ ಕ್ಷೇತ್ರಗಳೇ ಕಾಣಿಸುತ್ತಿಲ್ಲ ಎಂದು ಗೋಗರೆದ ಕಾಂಗ್ರೆಸ್ ಶಾಸಕರು

ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ನಾಯಕರು

ಅಫಜಲಪುರ ತಾಲೂಕಿನಲ್ಲಿ 59 ಹಳ್ಳಿಗಳು ಜಲಾವೃತಗೊಂಡಿವೆ. 1.50 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ, ಕಂದಾಯ ಸಚಿವ ಆರ್​ ಅಶೋಕ್ ಅಫಜಲಪುರಕ್ಕೆ ಭೇಟಿ ನೀಡದೆ ಕಡೆಗಣನೆ ಮಾಡಿದ್ದಾರೆ.

  • Share this:

ಕಲಬುರ್ಗಿ(ಅಕ್ಟೋಬರ್​. 19): ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹ ಮುಂದುವರೆದಿದೆ. ಜಿಲ್ಲೆಯಲ್ಲಿ ಐದು ತಾಲೂಕುಗಳಲ್ಲಿ ಪ್ರವಾಹ ಸಂಕಷ್ಟಕ್ಕೆ ಗುರಿಯಾಗಿದ್ದು, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳೇ ಅತಿ ಹೆಚ್ಚು ತೊಂದರೆಗೆ ಸಿಲುಕಿವೆ. ಆದರೆ, ಕಾಂಗ್ರೆಸ್ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಸರ್ಕಾರ ಪ್ರವಾಹದ ಸಂದರ್ಭದಲ್ಲಿಯೂ ಅನಾದರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಉಮೇಶ್ ಜಾಧವ್ ಗೆ ಯುವಕನೋರ್ವ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಲಬುರ್ಗಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿದೇ ಇದೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ನಿಯಂತ್ರಣಕ್ಕೆ ಬಂದಿದೆ ಎನಿಸಿದರೂ, ಕಲಬುರ್ಗಿ, ಜೇವರ್ಗಿ, ಶಹಾಬಾದ್, ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಏರುಮುಖವಾಗಿಯೇ ಇದೆ. ಹೀಗಾಗಿ ಜಲಾವೃತಗೊಂಡ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕೆಲಸ ಭರದಿಂದ ಸಾಗಿದೆ. 


ನೆರೆಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ಶಾಸಕರಾದ ಎಂ.ವೈ.ಪಾಟೀಲ ಮತ್ತು ಅಜಯಸಿಂಗ್ ಭೇಟಿ ನೀಡಿದರು. ಕಲಬುರ್ಗಿ ಜಿಲ್ಲೆಯ ಅಫಜಲಪುರ ಕ್ಷೇತ್ರ ಹಾಗೂ ಜೇವರ್ಗಿ ಕ್ಷೇತ್ರಗಳ ಗ್ರಾಮಗಳಿಗೆ ಭೇಟಿ ನೀಡಿದರು. ಫಿರೋಜಾಬಾದ್, ಸರಡಗಿ(ಬಿ) ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ ಸಂತ್ರಸ್ತರ ಸ್ಥಳಾಂತರ ಕಾರ್ಯಾಚರಣೆ ಪರಿಶೀಲಿಸಿದರು. ಸಂತ್ರಸ್ತರ ಜೊತೆ ಉಭಯ ಶಾಸಕರ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಉಭಯ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಅಫಜಲಪುರ ತಾಲೂಕಿನಲ್ಲಿ 59 ಹಳ್ಳಿಗಳು ಜಲಾವೃತಗೊಂಡಿವೆ. 1.50 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ, ಕಂದಾಯ ಸಚಿವ ಆರ್​ ಅಶೋಕ್ ಅಫಜಲಪುರಕ್ಕೆ ಭೇಟಿ ನೀಡದೆ ಕಡೆಗಣನೆ ಮಾಡಿದ್ದಾರೆ. ಕೇವಲ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಭೇಟಿಗೆ ಆದ್ಯತೆ ನೀಡಿದ್ದಾರೆ. ನಮ್ಮಸಮಸ್ಯೆ ಕೇಳುವ ತಾಳ್ಮೆ ತೋರುತ್ತಿಲ್ಲವೆಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಆರೋಪಿಸಿದರು.


ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಮಗನಿಗೆ ಅನಾರೋಗ್ಯ ಇರುವುದರಿಂದಾಗಿ ಅವರು ಈ ಕಡೆ ಬರಲಾಗಿಲ್ಲ. ಪ್ರವಾಹದಂತಹ ಸಂದರ್ಭದಲ್ಲಿಯಾದರೂ ಬೇರೆ ಸಚಿವರನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ, ಅದ್ಯಾವುದನ್ನು ಮಾಡಿಲ್ಲ. ಇದಕ್ಕೆ ಮುಖ್ಯ ಕಾರಣ ನೆರೆ ಹಾನಿಗೆ ತುತ್ತಾಗಿರುವ ಬಹುತೇಕ ಕ್ಷೇತ್ರಗಳು ಕಾಂಗ್ರೆಸ್ ಶಾಸಕರಿಗೆ ಸೇರಿವೆ ಎಂದು ಆರೋಪಿಸಿದರು. ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಪಾಟೀಲ ಆಗ್ರಹಿಸಿದರು.


ಇದೇ ವೇಳೆ ಮಾತನಾಡಿದ ಜೇವರ್ಗಿ ಶಾಸಕ ಅಜಯಸಿಂಗ್, ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಕಡೆಗಣನೆ ಮಾಡಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಅಫಜಲಪುರ ಕ್ಷೇತ್ರದ ನಂತರ ಜೇವರ್ಗಿ ಕ್ಷೇತ್ರದಲ್ಲಿಯೂ ಅಪಾರ ಪ್ರಮಾಣದ ಹಾನಿಯಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿಯೂ ಜನ ತೊಂದರೆಗೆ ಸಿಲುಕಿದ್ದಾರೆ. ಆದರೆ, ರಾಜ್ಯ ಸರ್ಕಾರ ಪ್ರವಾಹವನ್ನು ಗಂಭೀರವಾಗಿಯೇ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.


ಪ್ರವಾಹದಂತಹ ಸಂದರ್ಭದಲ್ಲಿಯೂ ಪ್ರತಿಪಕ್ಷದ ಶಾಸಕರ ಕ್ಷೇತ್ರಗಳ ವಿಷಯದಲ್ಲಿ ಮಲತಾಯಿ ಧೋರಣೆ ನೀತಿ ಅನುಸರಿಸೋದು ಸರಿಯಲ್ಲ. ಹಾನಿಯ ಸಮೀಕ್ಷೆ ನಡೆಸಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.


ಇದನ್ನೂ ಓದಿ : ಕಂದಾಯ ಸಚಿವರ ಕಾಟಾಚಾರದ ಭೇಟಿ ; ರಸ್ತೆ ಮೇಲೆಯೇ ಸಮೀಕ್ಷೆ ಮಾಡಿ ವಾಪಸ್ಸಾದ ಸಚಿವ ಅಶೋಕ್


ಕಲಬುರ್ಗಿ ಸಂಸದ ಉಮೇಶ್ ಜಾಧವ್ ನೆರೆಪೀಡಿತ ಪ್ರದೇಶಗಳಿಗೆ ಹೋದ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಕಾರಿನಿಂದ ಕೆಳಗಿಳಿಯಲೂ ಬಿಡದೆ ವಾಪಸ್ ಕಳುಹಿಸಿದ ಘಟನೆಯ ಬೆನ್ನ ಹಿಂದೆಯೇ ಜೇವರ್ಗಿ ಕ್ಷೇತ್ರದಲ್ಲಿ ಯುವಕನೋರ್ವ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಸಂಸದ ಜಾಧವ್ ಗೆ ಯುವಕ ತರಾಟೆಗೆ ತೆಗೆದುಕೊಂಡ ಘಟನೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.


ಕೋನಹಿಪ್ಪರಗಾ ಗ್ರಾಮವೂ ಭೀಮಾ ನದಿ ಪ್ರವಾಹಕ್ಕೆ ತುತ್ತಾಗಿದೆ. ಉಮೇಶ್ ಜಾಧವ್ ಗ್ರಾಮದ ಮೂಲಕ ಹಾದು ಹೊರಟಿದ್ದ ವೇಳೆ ಕಾರು ತಡೆದು ಯುವಕನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಿಮಗೆ ಓಟು ಹಾಕಿ ಗೆಲ್ಲಿಸಿದ್ದೇವೆ. ನಾವು ಸಂಕಷ್ಟಕ್ಕೆ ಸಿಲುಕಿದಾಗ ನೀವೆಲ್ಲಿದ್ದಿರಿ. ಈಗ ಈ ಕಡೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಆದರೆ, ಯುವಕನಿಗೆ ಯಾವುದೇ ಉತ್ತರ ನೀಡದೇ ಜಾಧವ್ ಮುಂದೆ ಹೊರಟು ಹೋಗಿದ್ದಾರೆ.

Published by:G Hareeshkumar
First published: