ಚಿತ್ರದುರ್ಗ (ನ.28): ಮುರುಘಾ ಮಠದ ಶಿವಮೂರ್ತಿ ಶರಣರು ವಿದ್ಯಾರ್ಥಿನಿಯರ (Student) ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ (Sexual Assault) ಪ್ರಕರಣಕ್ಕೆ ಸಂಬಂಧಿಸಿದಂತೆ. ಆರೋಪದ ಹೇಳಿಕೆ ಹಾಗೂ ದೂರು ವಾಪಸ್ ಪಡೆಯಲು ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಹೇಳಿಕೆ ನೀಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್ ಪರಶುರಾಮ (Parashurama) ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಸಾಕ್ಷ್ಯದೊಂದಿಗೆ ಹಾಜರಾಗುವಂತೆ ನೋಟಿಸ್
ಆಮಿಷ ಒಡ್ಡಿದ್ದಾರೆ ಎನ್ನುವುದಕ್ಕೆ ಪೂರಕವಾದ ಸಾಕ್ಷ್ಯದೊಂದಿಗೆ ನ. 29 ರಂದು ವಿಚಾರಣೆಗೆ ಹಾಜರಾಗಿ ಎಂದು ತನಿಖಾಧಿಕಾರಿ ಡಿವೈಎಸ್ಪಿ ಲೋಕೇಶ್ (DySP Lokesh) ನೋಟಿಸ್ ಜಾರಿ ಮಾಡಿದ್ದಾರೆ. ಮೇಲ್ ಮೂಲಕ ನೋಟಿಸ್ ತಲುಪಿರುವುದನ್ನು ಒಡನಾಡಿ ಸಂಸ್ಥೆ ಕೂಡ ತಿಳಿಸಿದೆ.
ಆಮಿಷವೊಡ್ಡಿದ್ದು ನಿಜನಾ?
₹ 3 ಕೋಟಿ ಆಮಿಷ ಒಡ್ಡಿರುವುದನ್ನು ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಪರಶುರಾಮ್ ಬಹಿರಂಗಪಡಿಸಿದ್ದರು. ಸಚಿವರೊಬ್ಬರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಈ ಹೇಳಿಕೆ ಸಂಚಲನ ಸೃಷ್ಟಿ ಮಾಡಿತ್ತು.
ಜಾಮೀನು ಡಿ.1ಕ್ಕೆ ವಿಚಾರಣೆ
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಡಿ.1ಕ್ಕೆ ಮುಂದೂಡಿದೆ. 2ನೇ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎದುರು ಬಂದಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಡಿ.1ಕ್ಕೆ ಮುಂದೂಡಿದರು.
ಪೋಕ್ಸೋ ಕಾಯ್ದೆಯಡಿ ಶ್ರೀಗಳ ವಿರುದ್ಧ ಪ್ರಕರಣ
ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್ನಲ್ಲಿ ಓದುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಆಗಸ್ಟ್ 26ರಂದು ಶ್ರೀಗಳು ಸೇರಿದಂತೆ ಐವರ ವಿರುದ್ಧ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ನೆರವು ಪಡೆದು ಶ್ರೀಗಳ ವಿರುದ್ಧ ಕೇಸ್ ದಾಖಲಿಸಿದ್ದರು. ಬಳಿಕ ಈ ಪ್ರಕರಣವು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.
ಮುರುಘಾ ಶ್ರೀಗಳು A-1 ಆರೋಪಿ
ಪೋಕ್ಸೋ ಪ್ರಕರಣದಡಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮುರುಘಾಶ್ರೀಗಳು A-1 ಆರೋಪಿಯಾದರೆ, A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದಾರೆ. A-3 ಆರೋಪಿ ಮಠದ ಉತ್ತರಾಧಿಕಾರಿ ಬಸವಾದಿತ್ಯ , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ ಎಂದು ತಿಳಿದು ಬಂದಿದೆ.
ಮುರುಘಾಸ್ವಾಮಿ ಮುಖವಾಡ ಬಯಲು
ಚಾರ್ಜ್ ಶೀಟ್ನಲ್ಲಿ ಮುರುಘಾ ಸ್ವಾಮಿ ಆಪ್ತರಿಂದ ಮಹತ್ವದ ಹೇಳಿಕೆ ದಾಖಲಾಗಿದೆ. ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಪೊಲೀಸರೆದುರು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಹಗಲಿನಲ್ಲಿ ಆಗಾಗ್ಗೆ ರಶ್ಮಿ, ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದರು.
ಇದನ್ನೂ ಓದಿ: Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್
ಅಡುಗೆ ಭಟ್ಟ ಹೇಳಿದ್ದೇನು?
ಮುರುಘಾ ಸ್ವಾಮಿ ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ದಾಖಲು ಮಾಡಲಾಗಿದೆ. ರಶ್ಮಿ ಮತ್ತು ಮಕ್ಕಳು ಮುರುಘಾ ಸ್ವಾಮಿ ರೂಮಿಗೆ ಹೋದಾಗ ನನ್ನನ್ನು ಅವರು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಾರೆಂದು ಮಠಕ್ಕೆ ಬರುವ ಜನ ಮಾತಾಡುತ್ತಿದ್ದರು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ