ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಎಂಬ ಗ್ರಾಮದಲ್ಲಿ ಹಳ್ಳ ದಾಟಿ ಶಾಲೆಗೆ ತೆರಳುವ ಮಕ್ಕಳು ಹಳ್ಳ ದಾಟಲಾಗದೆ ಕಚ್ಚಾ ಸೇತುವೆ ಬಳಸುವ ಪೋಟೋ ಒಂದು 2019 ರಲ್ಲಿ ಟ್ವಿಟರ್ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈ ಪೋಟೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೆ, ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಜನ ಸಾಮಾನ್ಯರಿಂದ ಒತ್ತಾಯವೂ ಕೇಳಿ ಬಂದಿತ್ತು. ಆದರೆ, ಕೇವಲ ಟ್ವಿಟರ್ ಪೋಟೋ ಒಂದರಿಂದ ಇದೀಗ ಆ ಊರಿಗೆ ಸೇತುವೆ ನಿರ್ಮಾಣವಾಗಿದ್ದು, ಇಡೀ ಹಳ್ಳಿಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಮಕ್ಕಳು ಮಳೆಗಾಲದಲ್ಲಿ ಇನ್ನಾದರೂ ನೆಮ್ಮದಿಯಿಂದ ಶಾಲೆಗೆ ತೆರಳಲು ಸಹಕಾರಿಯಾಗಿದೆ.
ಸಂಸದ ಅನಂತಕುಮಾರ್ ಹೆಗಡೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ, ಶಾಸಕ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾವಂಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸರಿಮನೆ ಹೊಳೆಗೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸಹಾಯದಿಂದಾಗಿ ಸೇತುವೆ ನಿರ್ಮಾಣವಾಗಿದ್ದು ದಶಕದ ಕನಸು ನನಸಾಗಿ ಗ್ರಾಮದ ಜನರಮೊಗದಲ್ಲಿ ಹರ್ಷ ಮೂಡಿದೆ.
ಏನಿದು ಸಮಸ್ಯೆ?
ಬಸರಿಮನೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತುಂಬಿ ಹರಿಯುತ್ತಿದ್ದ ಹೊಳೆಗೆ ಮರದ ದಿಮ್ಮಿಗಳಿಂದ ನಿರ್ಮಿಸಿದ ತಾತ್ಕಾಲಿಕ ಕಾಲುಸಂಕ ದಾಟಿ ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಮಳೆಗಾಲದ ಸಂದರ್ಭದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. 2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಬಗ್ಗೆ ಸ್ಥಳೀಯ ಆಡಳಿತ ವ್ಯವಸ್ಥೆ ಬಗ್ಗೆ ಟೀಕೆ ಟಿಪ್ಪಣಿಗಳ ಸುರಿಮಳೆ ಬಿದ್ದಿತ್ತು, ದಶಕಗಳ ಹಿಂದೆ ಇಲ್ಲಿ ಕಾಲುಸಂಕ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತಿ ಯಿಂದ ಅನುದಾನ ಬಿಡುಗಡೆಯಾಗಿದ್ದು, ಕೇವಲ ಪಿಲ್ಲರ್ ನಿರ್ಮಿಸಿ ಬಿಡಲಾಗಿತ್ತು. ಬಳಿಕ ಈವರೆಗೆ ಐದಾರು ಬಾರಿ ಶಾಸಕ ಕಾಗೇರಿಗೆ ಜನರು ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ ಗ್ರಾಮಸ್ಥರು ನಿವೇದಿತ್ ಆಳ್ವಾ ಅವರ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಚಂದ್ರಶೇಖರ್, ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಮಂಜೂರು ಮಾಡಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ಅದರಂತೆ ಜಿ.ಸಿ.ಚಂದ್ರಶೇಖರ್ ಅವರ ಮುತುವರ್ಜಿಯಿಂದಾಗಿ ಈಗ ಇಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಈ ಬಗ್ಗೆ ಸ್ವತಃ ಚಂದ್ರಶೇಖರ್ ಅವರು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದು, ‘ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಮಕ್ಕಳ ಪರಿಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಶಾಶ್ವತ ಕಾಲುಸೇತುವೆ ನಿರ್ಮಾಣಕ್ಕಾಗಿ ಅಂದು ಪಣ ತೊಟ್ಟಿದ್ದ ಕಾರ್ಯ ಇಂದು ಪೂರ್ಣಗೊಂಡಿದೆ' ಎಂದು ತಿಳಿಸಿದ್ದಾರೆ.
ಆಳ್ವಾ ಅವರು ಕಾಮಗಾರಿ ಪ್ರಗತಿಯಲ್ಲಿರುವಾಗಲೂ ಪದೇ ಪದೇ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದ್ದಾರೆ. ಇತ್ತೀಚೆಗೆ ಕೂಡ ಅವರು ಭೇಟಿ ನೀಡಿ, ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಚಂದ್ರಶೇಖರ್ ಅವರಿಗೆ ಮಾಹಿತಿ ನೀಡಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೊರ ಜಿಲ್ಲೆಯ ಜನಪ್ರತಿನಿಧಿಗಳು ಗಮನಿಸಿ, ಪರಿಹಾರಕ್ಕೆ ಸಹಾಯಹಸ್ತ ಚಾಚಿದ್ದಾರೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳೇ ಜಿಲ್ಲೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಚಂದ್ರಶೇಖರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
June 2019, I saw this photo via social media about young children crossing a swelled river during the monsoon to get to school.
June 2019, on my request Sri. GC Chandrashekar, MP, RS, sanctioned the required funds for this project that had been pending for decades. @GCC_MP pic.twitter.com/QDoslZaO1x
— Nivedith Alva (@nivedithalva) January 20, 2021
ಎಷ್ಟು ವರ್ಷದ ಸಮಸ್ಯೆಗೆ ಮುಕ್ತಿ?
ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳು ಕಳೆದವೋ ಅಷ್ಟೆ ವರ್ಷವಾಯ್ತು ಈ ಸಮಸ್ಯೆ ಆರಂಭವಾಗಿ...ಇಲ್ಲಿ ಸುತ್ತಮುತ್ತ ಐವತ್ತಕ್ಕೂ ಹೆಚ್ಚು ಮನೆಗಳಿವೆ ಆದ್ರೆ ಇವರಿಗೆ ಇಲ್ಲಿ ಹರಿಯುವ ನದಿ ಇವರ ಮೂಲ ಸೌಕರ್ಯ ಪಡೆಯಲು ಅಡ್ಡಗಾಲು ಆಗಿತ್ತು, ಒಂದು ಸಣ್ಣ ಸೇತುವೆ ಮಾಡಿಕೊಡಿ ಎಂದು ನೂರಾರು ಬಾರಿ ಇಲ್ಲಿನ ಜನಪ್ರತಿನಿಧಿಗಳ ಬಾಗಿಲು ತಟ್ಟಿದ್ರು ಸಮಸ್ಯೆ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿರಲಿಲ್ಲ ಆದ್ರೆ ಈಗ ಈಊರಿನ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಜಿ.ಸಿ ಚಂದ್ರಶೇಖರ ಈ ಗ್ರಾಮದ ಜನರ ಓಡಾಟಕ್ಕೆ ಸೇತುವೆ ನಿರ್ಮಾಣ ಮಾಡಿಕೊಟ್ಟು ಜನರ ಸಮಸ್ಯೆಗೆ ಪುಲ್ ಸ್ಟಾಪ್ ಹಾಕಿದ್ದಾರೆ...ಇದ್ರಿಂದ ಐದಾರು ದಶಕದ ಸಮಸ್ಯೆ ಇಲ್ಲಿಗೆ ಮುಗಿದಂತಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸೇತುವೆ ಲೋಕಾಪರ್ಣೆಗೊಳ್ಳಲಿದೆ.
(ವರದಿ - ದರ್ಶನ್ ನಾಯ್ಕ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ