ಬೆಂಗಳೂರು: ರಾಜ್ಯ ಸರ್ಕಾರಕ್ಕೆ (State Government) ಮತ್ತೊಂದು ಮೀಸಲಾತಿ (reservation) ಬಿಸಿ ತಟ್ಟುವುದು ಪಕ್ಕಾ ಆಗಿದೆ. ಒಕ್ಕಲಿಗ (Okkaliga), ಪಂಚಮಸಾಲಿ ಸಮುದಾಯಗಳು (Panchmasali community) ಮೀಸಲಾತಿಗಾಗಿ ಹೋರಾಟ ಮಾಡಿದ್ದವು, ಇದೀಗ ರಾಜ್ಯದ ಬ್ರಾಹ್ಮಣ ಸಮುದಾಯದವರು (Brahmin community) ಮೀಸಲಾತಿಗಾಗಿ ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡಾ 10ರಷ್ಟು ಮೀಸಲಾತಿ ನೀಡಬೇಕು ಅಂತ ಸುಪ್ರೀಂಕೋರ್ಟೇ (Supreme Court) ಹೇಳಿದೆ. ಆದರೆ ರಾಜ್ಯದಲ್ಲಿ ಇದು ಅನುಷ್ಠಾನಗೊಂಡಿಲ್ಲ ಅಂತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (Brahmin Mahasabha) ಹೇಳಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ (Letter) ಬರೆಯುವುದಾಗಿ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ (Ashok Haranahalli) ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ
ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮೀಸಲಾತಿ ಜಾರಿ ತಂದಿತ್ತು. ಕೇಂದ್ರದ ಈ ನೀತಿಯನ್ನು ಬೆಂಬಲಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.
ರಾಜ್ಯದಲ್ಲಿ ಜಾರಿಯಾಗಿಲ್ಲ ಸುಪ್ರೀಂ ಕೋರ್ಟ್ ಆದೇಶ
ಆದರೆ ಕರ್ನಾಟಕ ರಾಜ್ಯದಲ್ಲಿ ಈ ಮೀಸಲಾತಿ ಜಾರಿಗೆ ತಂದಿಲ್ಲ ಅಂತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ಬೇರೆ ಸಮುದಾಯಕ್ಕೆ ವರ್ಗಾವಣೆಗೊಳಿಸಬಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
ಇದನ್ನೂ ಓದಿ: Caste Reservation: ಚುನಾವಣೆ ಹೊಸ್ತಿಲಲ್ಲಿ ಜಾತಿ ಓಲೈಕೆ ರಾಜಕಾರಣ! 'ಮೀಸಲಾತಿ' ಅಸ್ತ್ರ ಬಳಕೆಗೆ ಸಮುದಾಯಗಳ ತಯಾರಿ
ಪ್ರಧಾನಿಗೆ ದೂರು ಸಲ್ಲಿಸಲು ನಿರ್ಧಾರ
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ದೂರು ನೀಡುವುದಾಗಿ ಅಶೋಕ್ ಹಾರ್ನಳ್ಳಿ ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರದ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಈವರೆಗೆ ಜಾರಿಗೊಳಿಸಿಲ್ಲ. ಇದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸುವುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಎಚ್ಚರಿಕೆ ನೀಡಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳು ಮತ್ತು ಕೇಂದ್ರ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನಕ್ಕೆ
ತಿದ್ದುಪಡಿ ಮಾಡಿ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಕಲ್ಪಿಸಿದ್ದರು. ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿತ್ತು. ಮೇಲ್ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 103 ನೇ ವಿಧಿಗೆ ತಿದ್ದು ಪಡಿ ತರಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿಯೂ ಸಲ್ಲಿಕೆಯಾಗಿತ್ತು. ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ವಜಾಗೊಳಿಸಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಆದೇಶವನ್ನು ಜಾರಿಗೊಳಿ ಸಿಲ್ಲ ಎಂದು ಅಶೋಕ ಹಾರ್ನಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆ ಸಮುದಾಯಕ್ಕೆ ಮೀಸಲಾತಿ ನೀಡಲು ಆಕ್ಷೇಪವಿಲ್ಲ
ಇನ್ನು ಬೇರೆ ಯಾವುದೇ ಸಮುದಾಯದವರಿಗೆ ಮೀಸಲಾತಿ ನೀಡಲು ನಾವು ವಿರೋಧಿಸುವುದಿಲ್ಲ ಎಂದು ಮಹಾಸಭಾ ಗೇಳಿದೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ಬೇರೆ ಸಮುದಾಯಕ್ಕೆ ವರ್ಗಾವಣೆಗೊಳಿಸಬಾರದು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾಗಿರುವ ಶೇ.10ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಬೇರೆ ಸಮುದಾಯಕ್ಕೆ ನೀಡಲು ಒಪ್ಪುವುದಿಲ್ಲ ಎಂದು ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.
ಪ್ರತಿಭಟನೆಗೆ ಸಜ್ಜಾದ ಬ್ರಾಹ್ಮಣರು
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬ್ರಾಹ್ಮಣ ಸಮುದಾಯದಿಂದ ತೀವ್ರ ಪ್ರತಿಭಟನೆ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ರಾಜ್ಯ ಮಟ್ಟದಲ್ಲಿ ವಿಪ್ರ ಮುಖಂಡರನ್ನೊಳಗೊಂಡ ಕ್ರಿಯಾ ಸಮಿತಿ ರಚಿಸಿ, ಪೂರ್ಣ ಪ್ರಮಾಣದಲ್ಲಿ ರೂಪರೇಷಗಳನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ