ಬಿಜೆಪಿ ಸರ್ಕಾರದ್ದು ಜನರ ಜೇಬಿಗೆ ಕೈಹಾಕುವ ಕಾರ್ಯಕ್ರಮವೇ ಹೊರತು, ಅವರ ಜೀವ ಉಳಿಸುವುದಲ್ಲ; ಡಿ.ಕೆ. ಸುರೇಶ್

ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಕಚೇರಿ ಅಧಿಕಾರಿಗಳವರೆಗೆ ಯಾರೂ ಹೊರಬಂದು ಕೆಲಸ ಮಾಡಲು ಸಿದ್ಧರಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.

ಸಂಸದ ಡಿ.ಕೆ. ಸುರೇಶ್.

ಸಂಸದ ಡಿ.ಕೆ. ಸುರೇಶ್.

  • Share this:
    ಬೆಂಗಳೂರು (ಜೂನ್ 10): ಬಿಜೆಪಿ ಸರ್ಕಾರದ್ದು ಜನರ ಜೇಬಿಗೆ ಕೈ ಹಾಕುವ ಕಾರ್ಯಕ್ರಮವೇ ಹೊರತು, ಅವರ ಜೀವ ಉಳಿಸುವ ಕಾರ್ಯಕ್ರಮವಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ವಿಧಾನಸಭೆ ಕ್ಷೇತ್ರ ಬೈರಮಂಗಲದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಅವರು, 'ಬಿಜೆಪಿ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳ ಮಾಡಿದೆ' ಎಂದು ಹರಿಹಾಯ್ದರು.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ. ಸುರೇಶ್, "ಕೋವಿಡ್ 2ನೆ ಅಲೆಯನ್ನು, ಇದು ಸಾಕಷ್ಟು ಜನರ ಜೀವ ಬಲಿ ಪಡೆದಿರುವುದನ್ನು ನಾವೆಲ್ಲ ನೋಡಿದ್ದೇವೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸೇವಕರು ತಮ್ಮ ಜೀವ ಪಣಕ್ಕಿಟ್ಟು, ಮಳೆ-ಬಿಸಿಲು ಲೆಕ್ಕಿಸದೆ, ನಿತ್ಯ ಮನೆ-ಮನೆಗೆ ಹೋಗಿ ಜನರ ಸಮಸ್ಯೆ, ಅವರ ಆರೋಗ್ಯ ವಿಚಾರಿಸಿದ್ದೀರಿ. ನಿಮಗೆ ಪ್ರೋತ್ಸಾಹ ನೀಡುವುದು ನಮ್ಮ ಹಾಗೂ ಸರ್ಕಾರದ ಕರ್ತವ್ಯ.

    ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಕಚೇರಿ ಅಧಿಕಾರಿಗಳವರೆಗೆ ಯಾರೂ ಹೊರಬಂದು ಕೆಲಸ ಮಾಡಲು ಸಿದ್ಧರಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸರಕಾರ ವಿಫಲವಾಗಿದೆ. ಈ ಸಮಯದಲ್ಲಿ ರೋಗಿಯನ್ನು ಮಾತನಾಡಿಸಲು ಪ್ರಧಾನಿಗಳಿಂದ ಹಿಡಿದು ಸಂಸದರು, ರಾಜಕೀಯ ನಾಯಕರವರೆಗೆ ಎಲ್ಲರಲ್ಲೂ ಭಯ.

    ಇದನ್ನೂ ಓದಿ: Corona Death| ಒಂದೇ ದಿನದಲ್ಲಿ ದಾಖಲೆ ಬರೆದ ಕೊರೋನಾ ಸಾವಿನ ಸಂಖ್ಯೆ: ಇಷ್ಟು ದಿನ ಸುಳ್ಳು ವರದಿ ನೀಡಿತೇ ಬಿಹಾರ?

    ಎಲ್ಲರಿಗೂ ಪೂರ್ಣವಾಗಿ ಲಸಿಕೆ ನೀಡಲು ಇನ್ನು ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೂ ನಾವೆಲ್ಲರೂ ಸುರಕ್ಷಿತವಾಗಿರಬೇಕು. ಸರ್ಕಾರ ಏನಾದರೂ ಮಾಡುತ್ತದೆ ಎಂದು ಭಾವಿಸಿದ್ದರೆ ಅದು ಸುಳ್ಳು. ಅವರು ಖಂಡಿತಾ ಏನನ್ನೂ ಮಾಡುವುದಿಲ್ಲ. ಸರ್ಕಾರ ತನ್ನ ಬೊಕ್ಕಸ ತುಂಬಿಕೊಳ್ಳಲು ಜನರ ಜೇಬಿಗೆ ಕೈ ಹಾಕುತ್ತಿದೆ ಅಷ್ಟೇ. ನಿಮ್ಮೆಲ್ಲರ ಸೇವೆಗೆ ನಾನು ನಮಸ್ಕರಿಸುತ್ತೇನೆ. ನಿಮ್ಮ ಸೇವೆ ಹೀಗೆ ನಿರಂತರವಾಗಿರಲಿ. ನಾವು ಸದಾ ನಿಮ್ಮ ಜತೆ ನಿಲ್ಲುತ್ತೇವೆ. ನಿಮಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತೇವೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:MAshok Kumar
    First published: