ಆಗಾಗ ಗಗನಕ್ಕೇರುವ ಈರುಳ್ಳಿ ಬೆಲೆ ಬಡವರನ್ನಷ್ಟೇ ಅಲ್ಲ ಕೆಲ ಸರ್ಕಾರಗಳನ್ನೂ ಬೀದಿಗೆ ತಂದಿದೆ ಎಂದರೆ ನೀವು ನಂಬಲೇಬೇಕು

ಭಾರತದಲ್ಲಿ ಇದೀಗ ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಈ ಬೆಲೆ ಏರಿಕೆ ಸೃಷ್ಟಿಸಿರುವ ಸಂದಿಗ್ಧತೆ ಏನು? ಹಾಗೂ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದಾಗಿಯೇ ಅಧಿಕಾರ ಕಳೆದುಕೊಂಡಿರುವ ನಾಯಕರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ. ಈರುಳ್ಳಿ ಪ್ರಿಯರು ಹಾಗೂ ಆಸಕ್ತಿ ಇದ್ದವರು ಓದಿಕೊಳ್ಳಿ.

MAshok Kumar | news18-kannada
Updated:September 23, 2019, 7:24 PM IST
ಆಗಾಗ ಗಗನಕ್ಕೇರುವ ಈರುಳ್ಳಿ ಬೆಲೆ ಬಡವರನ್ನಷ್ಟೇ ಅಲ್ಲ ಕೆಲ ಸರ್ಕಾರಗಳನ್ನೂ ಬೀದಿಗೆ ತಂದಿದೆ ಎಂದರೆ ನೀವು ನಂಬಲೇಬೇಕು
ಪ್ರಾತಿನಿಧಿಕ ಚಿತ್ರ.
  • Share this:
ವಿಶ್ವದ ಅಡಿಗೆ ಭೂ ಪಟದಲ್ಲೇ ಈರುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸುವ ದೇಶಗಳೆಂದರೆ ಭಾರತ ಮತ್ತು ಚೀನಾ. ಈರುಳ್ಳಿ ಇಲ್ಲದೆ ಇಲ್ಲಿನ ಯಾವ ಅಡಿಗೆಯೂ ಪರಿಪೂರ್ಣವಾಗುವುದೇ ಇಲ್ಲ. ಭಾರತೀಯ ಸ್ವಾದಿಷ್ಟ ಅಡಿಗೆಯಲ್ಲಿ ಹಾಸುಹೊಕ್ಕಾಗಿರುವ ಈರುಳ್ಳಿ ಬೆಲೆ ಇಂದು ದಿನೇ ದಿನೇ ಏರುತ್ತಲೇ ಇದೆ. ಇದೀಗ ಈರುಳ್ಳಿ ಬಡವರು ಕೊಳ್ಳಲು ಸಾಧ್ಯವಿಲ್ಲದ ಮಟ್ಟಕ್ಕೆ ಏರಿಕೆ ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ 55 ರಿಂದ 60 ರೂ. ಗೆ ಮಾರಾಟವಾದರೆ, ಸಾಧಾರಣ ಗುಣಮಟ್ಟದ ಈರುಳ್ಳಿ ಬೆಲೆ 40 ರಿಂದ 45 ರೂ ಗೆ ಮಾರಾಟ ಮಾಡಲಾಗುತ್ತಿದೆ. ಈ ಬೆಲೆ ಮುಂದಿನ ದಿನಗಳಲ್ಲಿ 80 ರಿಂದ 100 ರೂ ವರೆಗೆ ಏರಿಕೆ ಕಾಣುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಭಾರತದಂತಹ ರಾಷ್ಟ್ರದಲ್ಲಿ ಎಲ್ಲಾ ತರಕಾರಿಗಳ ಬೆಲೆ ಆಗಿಂದಾಗ್ಗೆ ಏರುವುದು ಇಳಿಯುವ ಸರ್ವೇ ಸಾಮಾನ್ಯವಾದ ವಿಚಾರ. ಯಾವ ತರಕಾರಿಯ ಬೆಲೆ ಏರಿಕೆ ಕಂಡರು ಭಾರತದ ಮಧ್ಯಮ ಹಾಗೂ ಬಡ ವರ್ಗದ ಜನ ಅದನ್ನು ಖರೀದಿ ಮಾಡದೆ ಇರುವ ಆಯ್ಕೆಯನ್ನು ಹೊಂದಿದ್ದಾರೆ. ಆದರೆ, ಇಲ್ಲಿನ ಅಡಿಗೆಯಲ್ಲಿ ಅನಿವಾರ್ಯವಾದ ಈರುಳ್ಳಿಯನ್ನು ಮಾತ್ರ ಕೊಳ್ಳದೆ ಇರುವುದು ಸಾಧ್ಯವೇ ಇಲ್ಲ.

ಇದೇ ಕಾರಣಕ್ಕೆ ಈರುಳ್ಳಿ ಬೆಲೆ ಅಧಿಕವಾದರೆ ಜನ ಸಾಮಾನ್ಯರು ಮಾತ್ರರಲ್ಲ ಸ್ವತಃ ರಾಜಕಾರಣಿಗಳೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ 1980ರಿಂದ ದಶಕಕ್ಕೊಮ್ಮೆ ಕಾಡುವ ಈರುಳ್ಳಿ ಬೆಲೆ ಏರಿಕೆ ಬಿಸಿ ಒಂದು ಬಾರಿ ಕೇಂದ್ರ ಸರ್ಕಾರ ಹಾಗೂ ಎರಡು ರಾಜ್ಯ ಸರ್ಕಾರಗಳನ್ನು ಉರುಳಿಸಿದ ಕುಖ್ಯಾತಿಯನ್ನು ಪಡೆದಿದೆ. ಇದೇ ಕಾರಣಕ್ಕೆ ಈಗ ಏರಿಕೆ ಕಾಣುತ್ತಿರುವ ಈರುಳ್ಳಿ ಬೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಕರೆಗಂಟೆಯನ್ನೂ ಬಾರಿಸಿದೆ.

ಈರುಳ್ಳಿ ಬೆಲೆ ಹೀಗೆ ಏರಿಕೆ ಕಾಣುತ್ತಿದ್ದರೆ, ಮುಂದಿನ ದಿನಗಳಲ್ಲಿ ಇದೇ ವಿಚಾರ ಆಡಳಿತರೂಢ ಪಕ್ಷಗಳಿಗೆ ಉರುಳಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ. ಹಾಗಾದರೆ ಭಾರತದಲ್ಲಿ ಇದೀಗ ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಈ ಬೆಲೆ ಏರಿಕೆ ಸೃಷ್ಟಿಸಿರುವ ಸಂದಿಗ್ಧತೆ ಏನು? ಹಾಗೂ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದಾಗಿಯೇ ಅಧಿಕಾರ ಕಳೆದುಕೊಂಡಿರುವ ನಾಯಕರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ. ಈರುಳ್ಳಿ ಪ್ರಿಯರು ಹಾಗೂ ಆಸಕ್ತಿ ಇದ್ದವರು ಓದಿಕೊಳ್ಳಿ.

ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಭಾರತದ ಅತ್ಯಂತ ಪ್ರಾಚೀನ ತರಕಾರಿಗಳಲ್ಲಿ ಈರುಳ್ಳಿಗೆ ಅಗ್ರಸ್ಥಾನವಿದೆ. ಪ್ರಾಚ್ಯಶಾಸ್ತ್ರ ಹಾಗೂ ಇತಿಹಾಸ ತಜ್ಞರ ಪ್ರಕಾರ ಭಾರತದಲ್ಲಿ 5,500 ವರ್ಷಗಳ ಹಿಂದೆಯೇ ಅಡಿಗೆಯಲ್ಲಿ ಈರುಳ್ಳಿಯನ್ನು ಬಳಕೆ ಮಾಡಲಾಗುತ್ತಿತ್ತು ಎಂಬುದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ ಎಂದರೆ, ಅನಾದಿ ಕಾಲದಿಂದಲೂ ಈರುಳ್ಳಿ ಎಂಬ ತರಕಾರಿ ಎಷ್ಟರ ಮಟ್ಟಿಗೆ ಭಾರತೀಯರ ಪ್ರಮುಖ ಆಹಾರ ಪದಾರ್ಥವಾಗಿ ಮುದ್ರೆ ಒತ್ತಿದೆ ಎಂಬುದನ್ನು ಊಹಿಸಬಹುದು.

ಈರುಳ್ಳಿ ಬಳಕೆ ಮಾತ್ರವಲ್ಲ ಈರುಳ್ಳಿ ಕೃಷಿಯಲ್ಲೂ ಭಾರತ ಚೀನಾದ ನಂತರದ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿವರ್ಷ 15,118 ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಅಂದರೆ ವಿಶ್ವದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.19.90 ರಷ್ಟು. ಈ ಪೈಕಿ ಭಾರತದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ.
ಈರುಳ್ಳಿ ಉತ್ಪಾದಿತ ದೇಶಗಳ ಅಂಕಿಅಂಶ.


ಮಹಾರಾಷ್ಟ್ರದಲ್ಲಿ ವರ್ಷಕ್ಕೆ 4,905 ಟನ್ ರುಳ್ಳಿ ಬೆಳೆದರೆ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 2,592.2 ಟನ್ ಬೆಳೆಯಲಾಗುತ್ತದೆ. ಇಲ್ಲಿನ ಗುಣಮಟ್ಟದ ಈರುಳ್ಳಿಗೆ ದೇಶ-ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಅಪಾರ ಪ್ರಮಾಣದ ಈರುಳ್ಳಿಯನ್ನು ಯುರೋಪ್ ಹಾಗೂ ಅಮೆರಿಕಾಗೆ ರಫ್ತು ಮಾಡಲಾಗುತ್ತದೆ.

ಆದರೆ, ಈ ಎರಡೂ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶೇ.60ರಷ್ಟು ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಹಾಗೂ ಪೂರೈಕೆ ನಡುವಿನ ವ್ಯತ್ಯಯದಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಲೇ ಇದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಈ ಬೆಲೆ 80 ರಿಂದ 100 ರೂ. ಹತ್ತಿರ ಬಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಒಂದು ವೇಳೆ ಇದು ಸಾಧ್ಯವಾದರೆ ರಾಜ್ಯ ಮತ್ತು ಕೇಂದ್ರ ಈ ಎರಡೂ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲದೆ ಏನಿಲ್ಲ. ಏಕೆಂದರೆ ಭಾರತದ ರಾಜಕೀಯ ಇತಿಹಾಸದ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಆಡಳಿತ ಸರ್ಕಾರ ಹಾಗೂ ಈರುಳ್ಳಿ ನಡುವೆ ಗುಪ್ತಗಾಮಿನಿಯಂತೆ ಹರಿಯುತ್ತಿರುವ ಸಂಬಂಧವೊಂದು ಅನಾವಣಗೊಳ್ಳುತ್ತದೆ. ಅಲ್ಲದೆ, ಇಂತಹ ಸಾಧ್ಯತೆಗಳನ್ನು ಕಣ್ಣ ಮುಂದೆ ತೆರೆದಿಡುತ್ತದೆ.

1980 ರಿಂದ 2010ರ ವರೆಗೆ ಮೂರು ಸರ್ಕಾರವನ್ನು ಬೀಳಿಸಿದ್ದ ಈರುಳ್ಳಿ ಬೆಲೆ!

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನನಿತ್ಯ ಏರಿಕೆ ಕಂಡರೂ ಈ ಕಾರಣಕ್ಕೆ ಸರ್ಕಾರ ಬಿದ್ದ ಇತಿಹಾಸವಿಲ್ಲ. ಆದರೆ, ಒಂದು ಕೇಂದ್ರ ಸರ್ಕಾರ ಹಾಗೂ ಎರಡು ರಾಜ್ಯ ಸರ್ಕಾರವನ್ನು ಬೀಳಿಸಿದ ಕೀರ್ತಿ ಈರುಳ್ಳಿಗೆ ಇದೆ.

1980ರಲ್ಲಿ ಚರಣ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದೆಲ್ಲೆಡೆ ಬರಗಾಲದ ಛಾಯೆ ಆವರಿಸಿತ್ತು. ಈ ಸಂದರ್ಭದಲ್ಲಿ ಕೃಷಿ ಉತ್ಪಾದನೆ ಪಾತಾಳಕ್ಕೆ ಕುಸಿದಿದ್ದು, ದೇಶದೆಲ್ಲೆಡೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಬಡವರ ಹಾಗೂ ಮಧ್ಯಮ ವರ್ಗದ ಜನರ ಕೈಗೆ ಎಟುಕದ ಮಟ್ಟಕ್ಕೆ ಈರುಳ್ಳಿ ಬೆಲೆ ಏರಿಕೆ ಕಂಡಿತ್ತು. ದೇಶದೆಲ್ಲೆಡೆ ಬಿಗಡಾಯಿಸಿದ್ದ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಅಂದಿನ ಕೇಂದ್ರ ಸರ್ಕಾರಕ್ಕೆ ಸುಲಭದ ಕೆಲಸವಾಗಿರಲಿಲ್ಲ. ಪರಿಣಾಮ ಚರಣ್ ಸಿಂಗ್ ಜನವರಿ.14 1980 ರಲ್ಲಿ ತಮ್ಮ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು.

ಇನ್ನೂ 1998ರಲ್ಲಿ ಮೊದಲ ಬಾರಿಗೆ ದೆಹಲಿ ಸಿಎಂ ಹುದ್ದೆಗೆ ಏರಿದ್ದ ದಿವಂಗತ ಸುಷ್ಮಾ ಸ್ವರಾಜ್ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಈರುಳ್ಳಿ ಬೆಲೆಯಲ್ಲಿನ ಏರಿಕೆಯೇ ಕಾರಣ. ಸುಷ್ಮಾ ಸ್ವರಾಜ್ ಕಾಲದಲ್ಲೇ ದೆಹಲಿಯಲ್ಲಿ ಈರುಳ್ಳಿ ಬೆಲೆ ಮೊದಲ ಬಾರಿಗೆ ದಾಖಲೆಯ 100 ರೂ. ಗಡಿದಾಟಿತ್ತು. ಪರಿಣಾಮ ಸರ್ಕಾರದ ವಿರುದ್ಧ ಮಧ್ಯಮ ವರ್ಗದ ಜನ ರೊಚ್ಚಿಗೆದ್ದಿದ್ದರು. ಬೀದಿಗಿಳಿದು ದೊಡ್ಡ ಮಟ್ಟ ಹೋರಾಟ ರೂಪಿಸಿದ್ದರು.

ಇದೇ ಕಾರಣಕ್ಕೆ ಸುಷ್ಮಾ ಸ್ವರಾಜ್ ಕೇವಲ 52 ದಿನ ಸಿಎಂ ಆಗಿದ್ದು ನಂತರ ತಮ್ಮ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸೋಲನುಭವಿಸಬೇಕಾಯಿತು. ಈ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ್ದ ಕಾಂಗ್ರೆಸ್ ಪಕ್ಷದ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲದೆ, ಅದೇ ವರ್ಷ ನಡೆದ ರಾಜಸ್ತಾನ್ ಚುನಾವಣೆಯಲ್ಲೂ ಈರುಳ್ಳಿ ಬೆಲೆ ಏರಿಕೆ ದೊಡ್ಡ ಮಟ್ಟದ ಪಾತ್ರ ನಿರ್ವಹಿಸಿತ್ತು.

2010ರಲ್ಲಿ ಈರುಳ್ಳಿ ಸೃಷ್ಟಿಸಿದ್ದ ಬಿಕ್ಕಟ್ಟು;

ಪ್ರಸ್ತುತ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಅತಿವೃಷ್ಟಿಗೆ ಸಿಲುಕಿ ನರಳುತ್ತಿರುವಂತೆಯೇ 2010ರಲ್ಲೂ ಸಹ ರಣಭೀಕರ ಮಳೆ ಈ ಎರಡೂ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿತ್ತು. ಈರುಳ್ಳಿ ಕಟಾವಿಗೆ ಬರುವ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಎಡೆಬಿಡದೆ ಸುರಿದ ಅಕಾಲಿಕ ಮಳೆಗೆ ಶೇ.70ರಷ್ಟು ಉತ್ಪಾದನೆ ಕುಂಠಿತವಾಗಿತ್ತು. ಪರಿಣಾಮ ಇರುಳ್ಳಿ ಬೆಲೆ 88 ರಿಂದ 90 ರೂ ದಾಟಿತ್ತು.

ಈರುಳ್ಳಿ ದುಬಾರಿಯಾದ ಪರಿಣಾಮ ಇಲ್ಲಿನ ಜನ ಸಮಾನ್ಯರು ತತ್ತರಿಸುವಂತಾಗಿತ್ತು. ಪರಿಸ್ಥಿತಿಯನ್ನು ನಿಬಾಯಿಸುವ ಸಲುವಾಗಿ ಅಂದಿನ ಕೇಂದ್ರ ಸರ್ಕಾರ ರಾಜ್ಯದ ಇತರೆಡೆಯಿಂದ ಈರುಳ್ಳಿಯನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪೂರೈಕೆ ಮಾಡಲು ಮುಂದಾಗಿತ್ತು. ಅಲ್ಲದೆ, ಪಾಕಿಸ್ತಾನದಿಂದ ದಾಖಲೆ ಪ್ರಮಾಣದ ಈರುಳ್ಳಿ ಆಮದಿಗೂ ಮುಂದಾಗಿತ್ತು. ಆದರೂ ಪರಿಸ್ಥಿತಿ ಹತೋಟಿಗೆ ಬರಲು ಕನಿಷ್ಟ 6 ತಿಂಗಳೇ ಬೇಕಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸರ್ಕಾರ ಸಾಕಷ್ಟು ಹೆಣಗಾಡುವಂತಾಗಿತ್ತು. ಅಂದು ಈರುಳ್ಳಿ ಸೃಷ್ಟಿಸಿದ್ದ ಬಿಕ್ಕಟ್ಟನ್ನು ಬಿಜೆಪಿ ನಾಯಕರು ಈವರೆಗೆ ಖಂಡಿತ ಮರೆತಿರಲು ಸಾಧ್ಯವಿಲ್ಲ.

ಸರಿಯಾಗಿ 10 ವರ್ಷದ ನಂತರ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ವರುಣ ಮತ್ತೆ ಅಬ್ಬರಿಸುತ್ತಿದ್ದಾರೆ. ಪರಿಣಾಮ ಈ ಎರಡೂ ರಾಜ್ಯದ ಈರುಳ್ಳಿ ಉತ್ಪಾದನೆಯಲ್ಲಿ ಶೇ.60 ರಷ್ಟು ಕುಂಠಿತವಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2010ರಲ್ಲಿ ಇದೇ ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದ ಈರುಳ್ಳಿ ಬೆಲೆ ಇದೀಗ ಮತ್ತೆ ಅಂತಹದ್ದೇ ಬೆದರಿಕೆಯನ್ನು ಮುಂದಿಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈರುಳ್ಳಿ ಬೆಲೆ ಮತ್ತೊಂದು ಸರ್ಕಾರದ ಪತನಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.

ಈ ನಡುವೆ  ಮುಂದಿನ ತಿಂಗಳು ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲೂ ಈರುಳ್ಳಿ ಬೆಲೆ ಏರಿಕೆ ಪರಿಣಾಮಕಾರಿ ಪಾತ್ರ ನಿರ್ವಹಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ