• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಭಿವೃದ್ಧಿ ಕೆಲಸಗಳು ಹಿಂದೆ ಕಾಗದದ ಮೇಲಿದ್ದವು, ಈಗ ಕಣ್ಣಿಗೆ ಕಾಣುತ್ತಿವೆ: ಡಿಸಿಎಂ ಅಶ್ವತ್ಥನಾರಾಯಣ

ಅಭಿವೃದ್ಧಿ ಕೆಲಸಗಳು ಹಿಂದೆ ಕಾಗದದ ಮೇಲಿದ್ದವು, ಈಗ ಕಣ್ಣಿಗೆ ಕಾಣುತ್ತಿವೆ: ಡಿಸಿಎಂ ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ರಾಜ್ಯದಲ್ಲಿಯೂ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಆಳ್ವಿಕೆ ನಡೆಸಿದವು. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೌಚಾಲಯ ಕಟ್ಟಲಿಕ್ಕೂ ಆಗಲಿಲ್ಲ. ಶೌಚಾಲಯ ನಿರ್ಮಾಣದಲ್ಲಿ ಶೇ.30ರಷ್ಟು ಗುರಿಯನ್ನು ಸಾಧಿಸಿರಲಿಲ್ಲ. ಈಗ ಶೇ. 100ರಷ್ಟು ಗುರಿ ಸಾಧನೆ ಆಗಿದೆ

  • Share this:

ರಾಮನಗರ(ಡಿಸೆಂಬರ್​. 01) : ಇಷ್ಟು ದಿನ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲಿದ್ದವು. ಈಗ ಅನುಷ್ಠಾನ ಆಗಿ ಕಣ್ಣಿಗೆ ಕಾಣುತ್ತಿವೆ. ಇದಕ್ಕೆ ಕಾರಣ ದೇಶ ಮತ್ತು ರಾಜ್ಯದಲ್ಲಿ ಆಗಿರುವ ರಾಜಕೀಯ ಬದಲಾವಣೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಮನಗರವೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಚನ್ನಪಟ್ಟಣ ತಾಲೂಕಿನ ಜೆ.ಬ್ಯಾಡರಹಳ್ಳಿಯ ಶಾಲೆ ಮೈದಾನದಲ್ಲಿ ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 70 ವರ್ಷಗಳಿಂದ ದೇಶವನ್ನು ಕಾಂಗ್ರಸ್‌ ಆಳಿತು. ರಾಜ್ಯದಲ್ಲಿಯೂ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಆಳ್ವಿಕೆ ನಡೆಸಿದವು. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೌಚಾಲಯ ಕಟ್ಟಲಿಕ್ಕೂ ಆಗಲಿಲ್ಲ. ಒಟ್ಟಾರೆ, ಲೆಕ್ಕ ತೆಗೆದುಕೊಂಡರೆ ಶೌಚಾಲಯ ನಿರ್ಮಾಣದಲ್ಲಿ ಶೇ.30ರಷ್ಟು ಗುರಿಯನ್ನು ಸಾಧಿಸಿರಲಿಲ್ಲ. ಈಗ ಶೇ. 100ರಷ್ಟು ಗುರಿ ಸಾಧನೆ ಆಗಿದೆ ಎಂದರು.


ಜಿಲ್ಲೆಯಲ್ಲಿ ಇದುವರೆಗೂ ನಡೆದ ಅಬ್ಬರದ ರಾಜಕೀಯ ಸಾಕು, ಕೌಟುಂಬಿಕ ರಾಜಕಾರಣ ಸಾಕು. ಅಭಿವೃದ್ಧಿಯನ್ನು ಮರೆತು ಸ್ವಾರ್ಥ ರಾಜಕಾರಣ ಮಾಡಿದ ಪಕ್ಷಗಳು ಸಾಕು. ದೇಶ, ರಾಜ್ಯದಲ್ಲಿ ಈಗ ಎಲ್ಲವೂ ಬದಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಬದಲಾವಣೆ ಬರಬೇಕು. ಈ ಚುನಾವಣೆಯಲ್ಲಿ ಶೇ.80ರಷ್ಟು ಅಭ್ಯರ್ಥಿಗಳು ಬಿಜೆಪಿಯಿಂದಲೇ ಗೆಲ್ಲಬೇಕು. ಆ ಮೂಲಕ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಬೇಕು ಎಂದು ಡಿಸಿಎಂ ಕಾರ್ಯಕರ್ತರಿಗೆ ಕರೆ ನೀಡಿದರು.


ಕಾರ್ಯಕರ್ತರಿಗೆ ತೊಂದ್ರೆ ಕೊಟ್ಟರೆ ಸಹಿಸಲ್ಲ:


ಡಿಸಿಎಂ ಭಾಷಣದ ನಡುವೆಯೇ, ಮಧ್ಯ ಪ್ರವೇಶಿಸಿದ ಪಕ್ಷದ ಕಾರ್ಯಕರ್ತರು, ಕನಕಪುರದಲ್ಲಿ ಹಾಗೂ ಜಿಲ್ಲೆಯ ಅನೇಕ ಕಡೆ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರ ಬೆಂಬಲಿಗರಿಂದ ಕಿರುಕುಳ ಹೆಚ್ಚಾಗಿದೆ ಎಂದು ಗಮನ ಸೆಳೆದರು.


ಈ ಮಾತು ಕೇಳಿದೊಡನೆ ಕೆರಳಿ ಕೆಂಡವಾದ ಡಾ.ಅಶ್ವತ್ಥನಾರಾಯಣ, ಜಿಲ್ಲೆ ಯಾರೊಬ್ಬರ ಸ್ವತ್ತೂ ಅಲ್ಲ. ಯಾರಪ್ಪನ ಆಸ್ತಿಯೂ ಅಲ್ಲ. ನಿಮ್ಮ ಕೆಲಸ ನೀವು ಮಾಡಿ, ನಿಮ್ಮ ಕರ್ತವ್ಯವನ್ನು ನೀವು ರಾಜಿ ಇಲ್ಲದೆ ಮಾಡಿ. ನಿಮಗೆ ಯಾರಾದರೂ ಅಡ್ಡಿಪಡಿಸಿದರೆ ನಮ್ಮ ಗಮನಕ್ಕೆ ತನ್ನಿ. ಅಂಥವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದರು.


ಇದನ್ನೂ ಓದಿ : ರೈತ ವಿರೋಧಿ ಕಾಯ್ದೆ ಹಿಂಪಡೆಯದ್ದರೆ ಚಳವಳಿ ಆರಂಭ: ಬಾಬಾಗೌಡ ಪಾಟೀಲ್​​ ಎಚ್ಚರಿಕೆ


ಇನ್ನು ಮುಂದೆ ಜಿಲ್ಲೆಯಲ್ಲಾಗಲಿ ಅಥವಾ ರಾಜ್ಯದಲ್ಲಿಯೇ ಆಗಲಿ ದಬ್ಬಾಳಿಕೆ ಮಾಡಿ ರಾಜಕಾರಣ ಮಾಡುತ್ತೇವೆ ಎನ್ನಲಾಗದು. ಆ ಕಾಲ ಹೋಯಿತು. ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ನಡೆಯಬೇಕು ಇಲ್ಲವಾದರೆ, ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಆದ ಗತಿಯೇ ಇಲ್ಲಿಯೂ ಆಗುತ್ತದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಹೆಸರೇಳದೆಯೇ ಎಚ್ಚರಿಕೆ ನೀಡಿದರು.


ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಕಾನೂನು, ನಿಯಮ ಎನ್ನುವುದು ಎಲ್ಲರಿಗೂ ಒಂದೇ. ಅದನ್ನು ಮರೆತು ವರ್ತಿಸಿದರೆ ತಕ್ಕ ಪಾಠ ಕಲಿಸಲಾಗುವುದು. ಯಾರಿಗೂ ಪಕ್ಷದ ಕಾರ್ಯಕರ್ತರು ಹೆದರಬೇಕಾಗಿಲ್ಲ. ಧೈರ್ಯವಾಗಿ ಮುನ್ನುಗಿ ಎಂದು ಅವರು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.

First published: