ರಾಮನಗರ (ಡಿಸೆಂಬರ್. 10): ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ. ಕಾಂಗ್ರೆಸ್ ಪಕ್ಷವೆಂದರೆ ಭ್ರಷ್ಟಾಚಾರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಗುರಿ ಸಾಧಿಸುವುದರ ಜತೆ ಜತೆಯಲ್ಲೇ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮಾಗಡಿಯಲ್ಲಿ ಹಿರಿಯ ಮುಖಂಡ ಹೆಚ್.ಎಂ.ಕೃಷ್ಣಮೂರ್ತಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡ ನಂತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಪ್ರವಾಹದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಜನರ ನಾಡಿಮಿತಕ್ಕೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ಬೇರೂರಿತ್ತು. ಅದನ್ನು ಈಗ ಬುಡ ಸಮೇತ ಕಿತ್ತೊಗೆಯಲಾಗುತ್ತಿದೆ ಎಂದರು.
ಬಚ್ಚಿಟ್ಟಿದ್ದ ಕಪ್ಪು ಹಣ ರಾಶಿರಾಶಿಯಾಗಿ ಹೊರಬರುತ್ತಿದೆ. ದೇಶದ ಆರ್ಥಿಕತೆಯಲ್ಲಿ, ಜಾರಿಯಾಗುತ್ತಿರುವ ಯೋಜನೆಗಳಲ್ಲಿ ಪಾರದರ್ಶಕತೆ ಬಂದಿದೆ. ಈ ಕಾರಣದಿಂದ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಪಕ್ಷವನ್ನು ತಮ್ಮತಮ್ಮ ಗ್ರಾಮಗಳಿಂದ ಹೊರ ಹಾಕಲಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.
ಭಾರತೀಯ ಜನತಾ ಪಕ್ಷವು ಕೇವಲ ರಾಜಕೀಯ ಪಕ್ಷವಲ್ಲ. ಅದು ಸಮಸ್ತ ಭಾರತೀಯರ ಜನಜೀವನದ ಒಂದು ಭಾಗ. ನಮ್ಮತನವನ್ನು ಎತ್ತಿ ಹಿಡಿಯುವ ಪಕ್ಷ. ಪ್ರತಿಯೊಬ್ಬರಿಗೂ ಸಲ್ಲುವ ಏಕೈಕ ರಾಜಕೀಯ ಪಕ್ಷ, ಜನರ ಭಾವನೆಗಳನ್ನು ಗೌರವಿಸುತ್ತಿರುವ ಪಕ್ಷ ಮಾತ್ರ. ಸಿಐಐಎ, ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರದ 370 ರದ್ದು ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬಗೆಹರಿಸಿದ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಈ ಕಾರಣಕ್ಕಾಗಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಹೇಳಿದರು.
ಎಚ್.ಎಂ.ಕೃಷ್ಣಮೂರ್ತಿ ಹಿಂದೆ ನಮ್ಮ ಪಕ್ಷದಲ್ಲೇ ಇದ್ದರು. ಪುನಾ ಮಾತೃಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರ ಮರು ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ ಎಂದು ಡಿಸಿಎಂ ನುಡಿದರು.
ಇದನ್ನೂ ಓದಿ : ವಾರ್ಡ್ ಸಂಖ್ಯೆ 243ಕ್ಕೆ ಹೆಚ್ಚಿಸುವ ಬಿಬಿಎಂಪಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ
ಇದೇ ವೇಳೆ ಮಾತನಾಡಿದ ಎಚ್.ಎಂ.ಕೃಷ್ಣಮೂರ್ತಿ, ಮಾತೃಪಕ್ಷ ಬಿಜೆಪಿಗೆ ಮರಳುತ್ತಿರುವುದು ಖುಷಿ ತಂದಿದೆ. ಇಡೀ ದೇಶದಲ್ಲಿ ಬಿಜೆಪಿಗೆ ಹೆಚ್ಚು ಮಾನ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಗಮೆಚ್ಚಿದ ಮಗ. ಅಂತಹ ಪಕ್ಷಕ್ಕೆ ಮರಳಿದ್ದು ಹೆಮ್ಮೆಯ ಸಂಗತಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ