ಬೆಂಗಳೂರು (ಮಾರ್ಚ್ 22); "ರೈತ ಹೋರಾಟಗಾರರನ್ನು ಇಂದು ಭಯೋತ್ಪಾಕರು ಎಂದು ಹೀಯಾಳಿಸಲಾಗುತ್ತಿದೆ. ಆದರೆ, ಭಯೋತ್ಪಾದಕರು ನಾವಲ್ಲ. ಬದಲಾಗಿ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ರೈತರನ್ನು ಶೋಷಣೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ನಾಯಕರುಗಳೇ ನಿಜವಾದ ಭಯೋತ್ಪಾದಕರು" ಎಂದು ನಟ-ಹೋರಾಟಗಾರ ಚೇತನ್ ಇಂದು ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ರೈತ ಮಸೂದೆ ವಿರೋಧಿ ಹೋರಾಟ ನಡೆಯುತ್ತಿದೆ. ದೆಹಲಿಯ ಹೊರ ವಲಯದಲ್ಲಿ ರೈತ ಹೋರಾಟಗಾರರು ಬೀಡು ಬಿಟ್ಟಿದ್ದು, ಮಳೆ ಬಿಸಿಲೆನ್ನದೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ಹೋರಾಟ ದೇಶದೆಲ್ಲೆಡೆ ವ್ಯಾಪಿಸಿದ್ದು, ಎಲ್ಲಾ ರಾಜ್ಯದಲ್ಲೂ ರೈತರು ಬೀದಿಗಿಳಿಯುತ್ತಿದ್ದಾರೆ.
ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ರಾಜ್ಯದಲ್ಲೂ ಸಹ ರೈತರು ಒಟ್ಟಾಗಿ ಕಳೆದ ಎರಡು ದಿನ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ರೈತ ಮಹಾ ಪಂಚಾಯತ್ ನಡೆಸಿದ್ದರು. ಈ ರೈತ ಪಂಚಾಯತ್ನಲ್ಲಿ ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಗುಡುಗಿದ್ದರು. ಇಂದು ಸಹ ಎಲ್ಲಾ ರೈತರು ವಿಧಾನಸೌಧ ಚಲೋ ಹೋರಾಟಕ್ಕೆ ಕರೆ ನೀಡಿದ್ದರು.
ಈ ಹೋರಾಟದ ವೇಳೆ ಮಾತನಾಡಿರುವ ನಟ ಹೋರಾಟಗಾರ ಚೇತನ್, "ಇದು ಎರಡನೇ ಸ್ವಾತಂತ್ರ್ಯ ಹೋರಾಟ. ಕೇಂದ್ರ, ರಾಜ್ಯ ಸರ್ಕಾರದ ಕುತಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆ ಜಾರಿ ಮಾಡಿದ್ದಾರೆ. ರೈತರ ಪರ ಯಾರು ನಿಲ್ಲುತ್ತಾರೊ ಅಂತವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ.
ಅದರೆ, ಭಯೋತ್ಪಾದಕರು ನಾವಲ್ಲ. ಬದಲಾಗಿ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಸಾಮಾನ್ಯ ವರ್ಗದ ಜನರನ್ನು ಶೋಷಣೆ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರ ಮತ್ತು ಅದನ್ನು ಮುನ್ನಡೆಸುತ್ತಿರುವ ನಾಯಕರುಗಳೇ ನಿಜವಾದ ಭಯೋತ್ಪಾದಕರು" ಎಂದು ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ