ರಾಮನಗರ: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ (Bengaluru Mysuru Expressway) ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣದ ಲಂಬಾಣಿ ತಾಂಡ್ಯದ ಸಮೀಪ ಘಟನೆ ನಡೆದಿದ್ದು, ಇನೋವಾ ಕ್ರಿಸ್ಟಾ ಕಾರಿಗೆ (Car) ಆಲ್ಟೋ ಕಾರು ಡಿಕ್ಕಿ ಹೊಡೆದಿದೆ. ಉಳಿದಂತೆ ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತೀ ವೇಗವಾಗಿ ಬಂದ ಆಲ್ಟೋ ಕಾರು (Alto Car) ಮೊದಲು ರೋಡ್ ಡಿವೈಡರ್ಗೆ ಡಿಕ್ಕಿ ಹೊಡೆದು ಹಾರಿ ಬಳಿಕ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೊ ಕಾರಿನಲ್ಲಿದ್ದ ತಂದೆ ಹಾಗೂ ಇಬ್ಬರು ಮಕ್ಕಳು (Children) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಟಿ.ನರಸೀಪುರ ಮೂಲದವರು ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಚನ್ನಪಟ್ಟಣ (Channapatna) ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿಯಲ್ಲೇ ಬಸ್ ಧಗಧಗ
ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲೇ ಹೊತ್ತಿ ಉರಿದಿದೆ. ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಮದುವೆಗೆಂದು ಬಸ್ ಹೊರಟ್ಟಿತ್ತು. ಬೆಂಕಿ ಕಾಣಿಸಿಕೊಳ್ತಿದ್ದಂತೆ ತಕ್ಷಣವೇ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.
ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು
ರಾಮನಗರ (Ramanagara) ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಮುತ್ತಸಾಗರ ಗ್ರಾಮದಲ್ಲಿ ಕೆರೆಯಲ್ಲಿ ಮುಳಗಿ ಒಂದೇ ಕುಟುಂಬದ (Family) ಮೂವರು ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಕುರಿ ಮೈತೊಳೆಯಲು ಹೋದ ವೇಳೆ ದುರ್ಘಟನೆ ನಡೆದಿದೆ. ಮೃತರನ್ನು ಗೊಲ್ಲರಹಟ್ಟಿ ಗ್ರಾಮದ ನಾಗರಾಜು (30) ಜ್ಯೋತಿ (35), ಲಕ್ಷ್ಮೀ (22) ಎಂದು ಗುರುತಿಸಲಾಗಿದೆ.
ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡ ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಶಾಮಕ ಸಿಬ್ಬಂದಿಯ ನೆರವಿನಿಂದ ಇಬ್ಬರ ಮೃತದೇಹ ಹೊರಗೆ ತೆಗೆದಿದ್ದಾರೆ. ಮತ್ತೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಾಹನ ಪಲ್ಟಿಯಾಗಿ ಚಾಲಕ ಸ್ಥಳಕ್ಕೆ ಸಾವು
ಅದಿರು ತುಂಬುವ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala) ತಾಲೂಕಿನ ಹಿರೇಬಗನಾಳ ಬಳಿ ನಡೆದಿದ್ದು, ಹಿರೇಬಗನಾಳ ಬಳಿ ಇರುವ ವನ್ಯ ಸ್ಟಿಲ್ ಕಾರ್ಖಾನೆಯಲ್ಲಿ ದುರ್ಘಟನೆ ಸಂಭವಿಸಿದೆ. ಮೃತ ಚಾಲಕನನ್ನು ಯಮನೂರಪ್ಪ ಬಿಳೇಬಾವಿ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದಿರು ತುಂಬುವಾಗ ವಾಹನ ಪಲ್ಟಿಯಾಗಿ ಚಾಲಕ ವಾಹನದ ತಳದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ